ADVERTISEMENT

ಚಿರತೆ ಇದೆಯೇ ಎಂದು ಪರೀಕ್ಷಿಸಲು ಬೋನಿನಲ್ಲಿ ಕುಳಿತು ಬಾವಿಗಿಳಿದ ಅರಣ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 11:05 IST
Last Updated 20 ಜುಲೈ 2020, 11:05 IST
ಎಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದಲ್ಲಿ ಚಿರತೆ ಬಾವಿಯಲ್ಲಿ ಇರುವುದನ್ನು ಪರೀಕ್ಷಿಸಲು ಅರಣ್ಯಾಧಿಕಾರಿ ಸಿದ್ದರಾಜು ಬೋನಿನಿಂದ ಕೆಳಕ್ಕೆ ಇಳಿಯುತ್ತಿರುವುದು
ಎಚ್.ಡಿ.ಕೋಟೆ ತಾಲ್ಲೂಕಿನ ಕಾರಾಪುರ ಗ್ರಾಮದಲ್ಲಿ ಚಿರತೆ ಬಾವಿಯಲ್ಲಿ ಇರುವುದನ್ನು ಪರೀಕ್ಷಿಸಲು ಅರಣ್ಯಾಧಿಕಾರಿ ಸಿದ್ದರಾಜು ಬೋನಿನಿಂದ ಕೆಳಕ್ಕೆ ಇಳಿಯುತ್ತಿರುವುದು   

ಎಚ್.ಡಿ.ಕೋಟೆ: ತಾಲ್ಲೂಕಿನ ಕಾರಾಪುರ ಗ್ರಾಮದ ಮನೆಯ ಹಿಂಭಾಗದ ಬಾವಿಯಲ್ಲಿ ಚಿರತೆ ಬಿದ್ದಿರುವ ಶಂಕೆಯಿದ್ದು, ಮೇಲೆತ್ತಲು ಅರಣ್ಯ ಇಲಾಖೆ ಭಾನುವಾರ ಸಿದ್ಧತೆ ನಡೆಸಿದೆ.

ಭಾನುವಾರ, ಎರಡು ಹೊಸ ಬೋನುಗಳನ್ನು ಸ್ಥಳದಲ್ಲೇ ರಚಿಸ ಲಾಗಿದ್ದು, ಬಾವಿಗೆ ಹಗ್ಗದ ಮೂಲಕ ಇಳಿ ಬಿಡಲಾಗಿದೆ. ಅಲ್ಲದೇ, ಬಾವಿಯ ಬಾಯಿಗೆ ಬಲೆಯನ್ನು ಕಟ್ಟಲಾಗಿದ್ದು, ಚಿರತೆ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ.

ಶನಿವಾರ ಬಾವಿಗೆ ಚಿರತೆ ಬಿದ್ದ ಸುದ್ದಿ ಹರಡುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಅದರ ರಕ್ಷಣೆಗಾಗಿ, ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು ಅವರು ಬೋನಿನ ಮೂಲಕ ಬಾವಿಯೊಳಗೆ ಇಳಿದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ADVERTISEMENT

ಬಾವಿಯ ಹೊರ ನೋಟವನ್ನು ಗಮನಿಸಿದ ಸಿಬ್ಬಂದಿ ಬಾವಿಯಲ್ಲಿ ಚಿರತೆ ಇಲ್ಲ ಎಂದು ತಿಳಿಸಿದ್ದರು. ಆದರೆ, ಇದಕ್ಕೊಪ್ಪದ ಗ್ರಾಮಸ್ಥರು ಚಿರತೆ ಇರುವುದು ಖಚಿತ ಎಂದು ಪಟ್ಟು ಹಿಡಿದರು. ಹಾಗಾಗಿ, ಸಿದ್ದರಾಜು ಅವರು ಬೋನಿನ ಒಳಗೆ ಕುಳಿತು ಸುಮಾರು 100 ಅಡಿಯಷ್ಟು ಆಳವಿರುವ ಬಾವಿಗೆ ಹಗ್ಗದ ಸಹಾಯದಿಂದ ಕೆಳಗಿಳಿದು ಪರೀಕ್ಷೆ ನಡೆಸಿದರು. ಆದರೆ, ಅವರಿಗೆ ಬಾವಿಯಲ್ಲಿ ಚಿರತೆ ಇರುವುದು ಕಂಡುಬಂದಿಲ್ಲ.

ಆದರೂ, ಬಾವಿಯ ಒಳಗೆ ಕೊರಕಲು ಇದ್ದು (ಗುಹೆಯ ಮಾದರಿ), ಚಿರತೆ ಅದರೊಳಗೆ ಹೊಕ್ಕಿರಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಹಾಗಾಗಿ, ಚಿರತೆಯ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಡಿಸಿಎಫ್ ಮಹೇಶ್ ಕುಮಾರ್, ಎಸಿಫ್ ಪಾಲ್‌ ಆಂಟನಿ, ಪಶು ವೈದ್ಯ ಡಾ.ಮುಜೀಬ್ ಪಾಷ, ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಸ್.ಸಿದ್ದರಾಜು, ಡಿಆರ್ಎಫ್ಒ ವಿನಯ್‌, ಸಿಬ್ಬಂದಿ ಆಂಟನಿ, ಸತೀಶ್‌, ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.