ADVERTISEMENT

ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:44 IST
Last Updated 3 ಡಿಸೆಂಬರ್ 2025, 7:44 IST
ಎಚ್.ಡಿ.ಕೋಟೆಯಲ್ಲಿ ಕಳ್ಳತನ ಮಾಡಿದ್ದ (ಕಪ್ಪು ಬಟ್ಟೆ ಧರಿಸಿದ ವ್ಯಕ್ತಿ) ಆರೋಪಿಗಳನ್ನು ಪೊಲೀಸರು ಕರೆತಂದು ಮಹಜರು ನಡೆಸಿದರು.
ಎಚ್.ಡಿ.ಕೋಟೆಯಲ್ಲಿ ಕಳ್ಳತನ ಮಾಡಿದ್ದ (ಕಪ್ಪು ಬಟ್ಟೆ ಧರಿಸಿದ ವ್ಯಕ್ತಿ) ಆರೋಪಿಗಳನ್ನು ಪೊಲೀಸರು ಕರೆತಂದು ಮಹಜರು ನಡೆಸಿದರು.   

ಎಚ್.ಡಿ.ಕೋಟೆ: ಪಟ್ಟಣದಲ್ಲಿ ಒಂದೇ ರಾತ್ರಿ 3 ಕಡೆಗಳಲ್ಲಿ ನಡೆದಿದ್ದ ಕಳವು ಪ್ರಕರಣ ಸಂಬಂಧ 20 ದಿನಗಳ ಹಿಂದೆ ಇಬ್ಬರನ್ನು ಬಂಧಿಸಿರುವ ಹುಣಸೂರು ಪೊಲೀಸರು ಮಾಲು ಸಮೇತ ಪ್ರಕರಣವನ್ನು ಎಚ್.ಡಿ.ಕೋಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಫರಾಜ್ ಮತ್ತು ಸರಗೂರು ಪಟ್ಟಣದ ಫಯಾಜ್ ಅಹಮ್ಮದ್ ಅಲಿಯಾಸ್ ಚೊತ್ತ ಬಂಧಿತರು.

ಹುಣಸೂರಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಎಚ್.ಡಿ.ಕೋಟೆಯಲ್ಲಿ ನಡೆದ ಕಳ್ಳತನ ಸೇರಿದಂತೆ ಆರೋಪಿಗಳು 40ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ADVERTISEMENT

ಕಾನ್ಸ್‌ಟೆಬಲ್ ಮನೆಯಲ್ಲಿ ಕಳ್ಳತನ

ಅ.14ರಂದು ರಾತ್ರಿ ವಿದ್ಯುತ್ ಕಡಿತಗೊಂಡಿದ್ದಾಗ ಪಟ್ಟಣದ ಸ್ಟೇಡಿಯಂ ಬಡಾವಣೆಯಲ್ಲಿ ಕಾನ್‌ಸ್ಟೆಬಲ್ ಮಹದೇವಸ್ವಾಮಿ ಅವರ ಮನೆ ಮತ್ತು ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಭಾಗ್ಯಲಕ್ಷ್ಮಿ ಅವರ ಮನೆಯಲ್ಲಿ ನಗದು ಸೇರಿದಂತೆ ಲಕ್ಷಾಂತರ ಬೆಲೆಬಾಳುವ ವಸ್ತುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಘಟನೆಯಿಂದ ಎಚ್.ಡಿ. ಕೋಟೆ ಪಟ್ಟಣದ ನಿವಾಸಿಗರು ಭಯಭೀತರಾಗಿದ್ದರು, ಪೇದೆಯೊಬ್ಬರ ಮನೆಯಲ್ಲೇ ಕಳ್ಳತನ ಆಗಿರುವುದು ಜನರ ಮತ್ತಷ್ಟು ಭಯ ಸೃಷ್ಟಿಸಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದರು.

ಮತ್ತೊಂದು ಪ್ರಕರಣ

ಕಳೆದ ಭಾನುವಾರ ರಾತ್ರಿ ಪಟ್ಟಣದ ಸ್ಟೇಡಿಯಂ ಬಡಾವಣೆಯ ನಿವಾಸಿ ಜಯರಾಮ್ ಅವರ ಮನೆ ಬಾಡಿಗೆ ಪಡೆದುಕೊಂಡಿದ್ದ ಸಂತೋಷ್ ಅವರು ಕುಟುಂಬ ಸಮೇತ ಭಾನುವಾರ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡ ಕಳ್ಳರು ತಡರಾತ್ರಿ ಮನೆಯ ಹಿಂಬಾಗಿಲು ಮೀಟಿ ಒಳ ಪ್ರವೇಶಿಸಿ ದೇವರ ಮನೆಯಲ್ಲಿದ್ದ ಬೆಲೆ ಬಾಳುವ ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿದ್ದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಗಂಗಾಧರ್, ಪಿಎಸ್‌ಐ ಸುರೇಶನಾಯಕ, ಸಿಬ್ಬಂದಿ ಸೈಯಾದ್ ಕಬೀರುದ್ದೀನ್, ಮೋಹನ್, ಯೋಗೇಶ್, ಗ್ರಾಮದ ಮುಖಂಡರಾದ ಭುಜಂಗರಾವ್, ಚಂದ್ರಮೌಳಿ, ಭಾಗ್ಯಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.