
ಮೈಸೂರು: ಸ್ವಸ್ಥ ಮೈಸೂರು ನಿರ್ಮಾಣಕ್ಕೆ ಸಂಕಲ್ಪ ತೊಟ್ಟ ವಿವಿಧ ಸಂಘ– ಸಂಸ್ಥೆಗಳು, ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿಜ್ಞೆ ಮಾಡಿದವು.
ನಗರದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಯಾನವನ್ನು ಘೋಷಿಸಲಾಯಿತು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಧ್ಯಕ್ಷತೆಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಹಾಗೂ ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸ್ವಸ್ಥ ಮೈಸೂರು’ ಅಭಿಯಾನದಲ್ಲಿ ಆರೋಗ್ಯ ಇಲಾಖೆ, ಕಾರ್ಪೊರೇಟ್ ಕಂಪನಿ, ವೈದ್ಯಕೀಯ ಸಂಸ್ಥೆ, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಶಿಕ್ಷಣ ಸಂಸ್ಥೆಯವರು ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿದರು. ಅಸಾಂಕ್ರಾಮಿಕ ರೋಗಗಳ ಹೊರೆ ಕಡಿಮೆ ಮಾಡಲು ಶ್ರಮಿಸುವುದಾಗಿ ಪ್ರಕಟಿಸಿದವು.
ಆರೋಗ್ಯ ಇಲಾಖೆಯಿಂದ ಸಹಕಾರದ ಒಪ್ಪಂದ ಮಾಡಿಕೊಂಡು, ಅಭಿಯಾನಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಮಹತ್ತರ ಉದ್ದೇಶದ್ದು:
‘ಮಹತ್ತರ ಉದ್ದೇಶದ ಅಭಿಯಾನವಿದು. ಆರೋಗ್ಯ ಸ್ಥಿತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಕೈಜೋಡಿಸುವುದು ಒಳ್ಳೆಯದು. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬ ನಿರೀಕ್ಷೆ ಸರಿಯಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಇರಬೇಕಾಗುತ್ತದೆ. ಆಗ ನಿಜವಾದ ಸುಧಾರಣೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಸ್ವಸ್ಥ ಮೈಸೂರು ನಿರ್ಮಾಣಕ್ಕೆ ಇಲಾಖೆಯೂ ಕೈಜೋಡಿಸಲಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆ. ಸಮಾಜಕ್ಕೆ ಆರೋಗ್ಯ ಬಹಳ ಮುಖ್ಯವಾದುದು. ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಗರಿಷ್ಠ ಬಳಕೆಗೆ ಅವರು ಶಿಕ್ಷಿತರು ಹಾಗೂ ಆರೋಗ್ಯವಂತರು ಆಗಿರಬೇಕಾಗುತ್ತದೆ. ಇದೆಲ್ಲವೂ ಅಭಿವೃದ್ಧಿ ಹೊಂದಿದ ದೇಶಕ್ಕೆ ಅಗತ್ಯವಾಗುತ್ತದೆ. ಇದಕ್ಕಾಗಿ ಉತ್ತಮ ಆರೋಗ್ಯ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು’ ಎಂದರು.
ತಿಳಿದು... ತಿಳಿದೂ...:
‘ಸಮಸ್ಯೆ ನಮಗೇ ಆಗುವವರೆಗೂ ನಾವು ಎಚ್ಚೆತ್ತುಕೊಳ್ಳುವುದಿಲ್ಲ. ಎಲ್ಲವೂ ಗೊತ್ತಿದ್ದೂ ಮಾಡುತ್ತೇವೆ. ನೋಡಿಕೊಂಡರಾಯಿತು ಎಂಬ ಮನೋಭಾವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಅಭಿವೃದ್ಧಿ, ಜಿಡಿಪಿ ಹೆಚ್ಚಾದಂತೆ ಅಸಾಂಕ್ರಾಮಿಕ ರೋಗಗಳ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಕೇರಳ, ಕರ್ನಾಟಕ, ತೆಲಂಗಾಣ, ತಮಿಳುನಾಡು ಮೊದಲಾದ ರಾಜ್ಯಗಳು ಹೆಚ್ಚು ಆರೋಗ್ಯ ಸಮಸ್ಯೆಗೆ ಸಿಲುಕಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಜಾಗೃತಿ ಮೂಡಿಸಬೇಕಾಗಿದೆ. ನಮ್ಮ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಪ್ರಮೋದಾದೇವಿ ಒಡೆಯರ್ ಮಾತನಾಡಿ, ‘ಸ್ವಸ್ಥ ಮೈಸೂರು ಅಭಿಯಾನವು ಆರೋಗ್ಯ ಚಳವಳಿಯಾಗಿದೆ. ಬೆಂಗಳೂರಿನ ನಂತರ ಮೈಸೂರಿನಲ್ಲಿ ನಡೆಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಚಿಕಿತ್ಸೆಯೊಂದೇ ಪರಿಹಾರವಲ್ಲ, ಜಾಗೃತಿ ಬಹಳ ಮುಖ್ಯವಾಗುತ್ತದೆ. ಈ ಕೆಲಸವನ್ನು ಅಭಿಯಾನದಲ್ಲಿ ಮಾಡಲಾಗುವುದು’ ಎಂದರು.
ಯೋಗ ತರಬೇತುದಾರ ಹಾಗೂ ಅಭಿಯಾನದ ರಾಯಭಾರಿ ಭರತ್ ಶೆಟ್ಟಿ, ‘ಹತ್ತು ವರ್ಷಗಳಲ್ಲಿ ಮೈಸೂರಿನಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಹಿಂದಿನ ದಶಕಗಳಂತೆ ಸಮತೋಲನದ ಪರಿಸರ ಈಗ ಇಲ್ಲ. ಜಾಗೃತಿಯ ಕೊರತೆ ಕಾರಣದಿಂದಾಗಿ ಸಮಸ್ಯೆ ಆಗುತ್ತಿದೆ. ಯೋಗವು ದೇಹದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್‌ನ ಡಾ.ನಳಿನಿ ಸಾಲಿಗ್ರಾಮ್, ಡಾ.ಖಾದರ್ ವಲ್ಲಿ, ಡಾ.ಸಿ.ಡಿ. ಶ್ರೀನಿವಾಸಭಟ್, ಡಾ.ಪ್ರತಿಭಾ ಪೆರಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸಿರಾಜ್ ಮೊಹಮ್ಮದ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಗೌರವ ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ಪಾಲ್ಗೊಂಡಿದ್ದರು.
ಒಂದು ಕೋಟಿ ಮಂದಿ ತಪಾಸಣೆ
‘ಆರೋಗ್ಯ ಇಲಾಖೆಯಿಂದ ಜಾರಿಗೊಳಿಸಿರುವ ‘ಗೃಹ ಆರೋಗ್ಯ’ ಯೋಜನೆಯಡಿ ಈವರೆಗೆ ಒಂದು ಕೋಟಿ ಜನರ ತಪಾಸಣೆ ಮಾಡಿದ್ದೇವೆ’ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ‘ವಿವಿಧ 14 ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿದರೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮನಗಂಡು ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮಧುಮೇಹ ಅಧಿಕ ರಕ್ತದೊತ್ತಡ ಸಮಸ್ಯೆಯುಳ್ಳವರಿಗೆ ಮಾತ್ರೆಯನ್ನು ಅವರ ಜೀವನಪರ್ಯಂತ ಇಲಾಖೆಯಿಂದಲೇ ಒದಗಿಸಲಾಗುವುದು’ ಎಂದು ತಿಳಿಸಿದರು.
ಮಕ್ಕಳಲ್ಲೂ ಸಮಸ್ಯೆ...
‘ಒತ್ತಡ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭವಿದು. ಮಕ್ಕಳು ಕೂಡ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಗಂಭೀರವಾದುದು. ಡಿಜಿಟಲ್ ಕ್ರಾಂತಿ ಸಾಮಾಜಿಕ ಮಾಧ್ಯಮದಿಂದ ಮಕ್ಕಳು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ‘ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲಾಗಿದೆ. ವಯಸ್ಸಿಗೆ ಮೀರಿದ ಸಂಬಂಧಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಿದ್ದಾರೆ ಹಾಗೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕಾಗಿದೆ. ಇದಕ್ಕಾಗಿ ಜಾಗೃತಿ ಹಾಗೂ ಸುಸ್ಥಿರವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.