ADVERTISEMENT

‘ಮೂವರು ಡಿಸಿಎಂ: ಹೈಕಮಾಂಡ್ ನಿರ್ಧಾರ ಸರಿ ಇಲ್ಲ’

ವರಿಷ್ಠರ ನಿರ್ಧಾರ ಪ್ರಶ್ನಿಸಿದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:35 IST
Last Updated 27 ಆಗಸ್ಟ್ 2019, 20:35 IST
ವಿ.ಶ್ರೀನಿವಾಸಪ್ರಸಾದ್‌
ವಿ.ಶ್ರೀನಿವಾಸಪ್ರಸಾದ್‌   

ಮೈಸೂರು: ‘ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿದ ಪಕ್ಷದ ಹೈಕಮಾಂಡ್ ನಿರ್ಧಾರ ಸರಿ ಇಲ್ಲ. ಡಿಸಿಎಂ ಹುದ್ದೆಗೆ ಸಾಂವಿಧಾನಿಕ‌ ಮಾನ್ಯತೆಯೂ ಇಲ್ಲ’ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿದರು.

‘ಉಪ ಮುಖ್ಯಮಂತ್ರಿ ಹುದ್ದೆ ಏಕೆ ಬೇಕು? ಪಕ್ಷದಲ್ಲಿ ಇದು ಗೊಂದಲ ಹೆಚ್ಚಿಸಿದ್ದು, ಹೈಕಮಾಂಡ್ ಯೋಚನೆ ಏನು ಎಂಬುದೇ ತಿಳಿಯುತ್ತಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿ, ಅನರ್ಹಗೊಂಡ 17 ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮೊದಲು ಅವರ ಕಡೆಗೆ ಗಮನ ಕೊಡಬೇಕಿದೆ. ಉಪಮುಖ್ಯಮಂತ್ರಿ–ಸಚಿವರ ಕಿತ್ತಾಟ ನಿಲ್ಲಬೇಕಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ಹಾದಿಯನ್ನೇ ಹಿಡಿಯೋದು ಬೇಕಿಲ್ಲ. ಜನರಿಗೆ ಉತ್ತಮ ಆಡಳಿತ ನೀಡುವ ಜವಾಬ್ದಾರಿಯನ್ನು ಈಗಿನ ಸರ್ಕಾರ ನಿಭಾಯಿಸಬೇಕು’ ಎಂದರು.

ADVERTISEMENT

‘ಸ್ವಾರ್ಥವೇ ಹೆಚ್ಚಾಗಿದ್ದು, ಇಂತಹ ಹೊತ್ತಲ್ಲಿ ನಾನು ಮಾತನಾಡಿದರೂ ಯಾರಾದರೂ ಕೇಳ್ತಾರಾ?’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾಜಪೇಯಿ ನೇತೃತ್ವದ ಎನ್‌ಡಿಎ ಅಜೆಂಡಾಗೂ, ಈಗಿನ ಎನ್‌ಡಿಎ ಅಜೆಂಡಾಗೂ ಅಜಗಜಾಂತರವಿದೆ ಎಂದ ಶ್ರೀನಿವಾಸಪ್ರಸಾದ್‌, ದಲಿತ ಕಾಲೊನಿ, ನಗರದ ಕೊಳೆಗೇರಿಗಳ ಬಗ್ಗೆ ತಾವು ಪ್ರಧಾನಿಯನ್ನೂ ಪ್ರಶ್ನಿಸಿದ್ದಾಗಿ ಹೇಳಿದರು.

ಮೀಸಲಾತಿ ಬೇಕು:‘ಮೀಸಲಾತಿ ವಿಷಯದಲ್ಲಿ ಆರ್‌ಎಸ್‌ಎಸ್‌ನ ಸರಸಂಘ ಚಾಲಕ ಮೋಹನ್‌ ಭಾಗವತ್ ನೀಡಿದ ಹೇಳಿಕೆ ವೈಯಕ್ತಿಕವಾದುದು. ಈ ದೇಶದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಎಲ್ಲಿಯವರೆಗೂ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಬೇಕಿದೆ’ ಎಂದು ಸಂಸದರು ಹೇಳಿದರು.‌

‘ನಾನೂ ಎಡಗೈ ವಿರೋಧಿಯಲ್ಲ. ಸ್ಪೃಶ್ಯ–ಅಸ್ಪೃಶ್ಯ ಮಾಡುವವನೂ ಅಲ್ಲ. ಒಳ ಮೀಸಲಾತಿ ಸಂವಿಧಾನ ವಿರೋಧಿ ಎಂದು ಆಂಧ್ರಪ್ರದೇಶದಲ್ಲಿನ ಮೀಸಲಾತಿಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ನಮಗೆ ನಿದರ್ಶನವಾಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.