ADVERTISEMENT

ಹುಲಿ ಮಾಸ್ತಮ್ಮ ಜಾತ್ರೆ: ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:21 IST
Last Updated 14 ಫೆಬ್ರುವರಿ 2026, 5:21 IST
ಸರಗೂರು ತಾಲ್ಲೂಕಿನ ಕಾಟವಾಳು ಗ್ರಾಮದಲ್ಲಿ ಹುಲಿಮಾಸ್ತಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ದೇವರ ದರ್ಶನ ಪಡೆದ ಭಕ್ತರು   
ಸರಗೂರು ತಾಲ್ಲೂಕಿನ ಕಾಟವಾಳು ಗ್ರಾಮದಲ್ಲಿ ಹುಲಿಮಾಸ್ತಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ದೇವರ ದರ್ಶನ ಪಡೆದ ಭಕ್ತರು      

ಸರಗೂರು: ತಾಲ್ಲೂಕಿನ ಕಾಟವಾಳು ಗ್ರಾಮದ ಹುಲಿಮಾಸ್ತಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಕೊಂಡೋತ್ಸವ, ವಿಶೇಷ ಪೂಜೆ ಗುರುವಾರ ವಿಜೃಂಭಣೆಯಿಂದ ನಡೆಯಿತು.

ದೇವರಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ, ವಿದ್ಯುತ್ ದ್ವೀಪಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಹೋಮ ನೆರವೇರಿಸಲಾಯಿತು. ಗಣಪತಿ ಹೋಮ, ಕಳಶ ಪ್ರತಿಷ್ಠಾಪನೆ, ದುರ್ಗಾ ಹೋಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ದೇವರಿಗೆ ಪಂಜಿನ ಸೇವೆ, ಮಹಾ ಮಂಗಳಾರತಿ ನಡೆಯಿತು. ಗುರುವಾರ ಬೆಳಿಗ್ಗೆ ನದಿಗೆ ತೆರಳಿ ಗಂಗೆಪೂಜೆ ನಡೆಸಿ ಹುಲಿಮಾಸ್ತಮ್ಮ ಉತ್ಸವಮೂರ್ತಿಯನ್ನು ಪೂರ್ಣಕುಂಭ ಕಳಶದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಕುಣಿತ ಹಾಗೂ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ADVERTISEMENT

ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ ರಥದ ಮೇಲೆ ಉತ್ಸವಮೂರ್ತಿ ಕೂರಿಸಲಾಯಿತು. ಭಕ್ತರು ರಥ ಎಳೆದರು. ಭಕ್ತರು ಪೂರ್ಣಕುಂಭ ಕಳಶ ಹೊತ್ತು ಸಾಗಿದರು. ದೇವರ ಉತ್ಸವ ಮೂರ್ತಿ ದೇವಸ್ಥಾನ ಬಳಿ ಬಂದ ಕೂಡಲೇ ಭಕ್ತರು ಕೆಂಡದ ಮೇಲೆ ನಡೆದು ಹರಕೆ ತಿರಿಸಿದರು.

ಕಾಟವಾಳು ಗ್ರಾಮದ ಗೌಡಿಕೆ ಕೆ.ಎಸ್.ವೀರಭದ್ರಪ್ಪ, ಕೆ.ಎ.ರಾಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುತ್ತುರಾಜು, ಕೆ.ಎಂ.ಬಸಪ್ಪ, ಜಿ.ಗುರುಸ್ವಾಮಿ, ಶಿವರುದ್ರಪ್ಪ, ಪರಶಿವಮೂರ್ತಿ, ಕೆ.ಎಸ್.ಮಂಜು, ಕೆ.ಎಸ್.ಮಲ್ಲಪ್ಪ, ಬಸವರಾಜಪ್ಪ, ಗುರುಸ್ವಾಮಿ, ಮಂಜು, ಸಿದ್ದು, ಸುನೀಲ್, ಶೇಖರ್, ಮಹದೇವಸ್ವಾಮಿ, ಮಲ್ಲಿಕಾರ್ಜುನ, ನಿಜಗುಣ, ಮಹೇಂದ್ರ, ಆನಂದ, ಮಹದೇವಸ್ವಾಮಿ, ಚಂದ್ರಮೌಳಿ, ಸೋಮಪ್ಪ ಸೇರಿದಂತೆ ಗ್ರಾಮಸ್ಥರು, ಯುವಕ ಮಂಡಳಿಯವರು ಭಾಗವಹಿಸಿದ್ದರು. ಕಾಟವಾಳು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.