ಮೈಸೂರು: ಬಲೂನು ಮಾರಲೆಂದು ಕುಟುಂಬದೊಂದಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆಯು ಆತಂಕಕ್ಕೆ ಕಾರಣವಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಹೊರ ಜಿಲ್ಲೆ ಅಥವಾ ರಾಜ್ಯಗಳ ಬೀದಿಬದಿ ವ್ಯಾಪಾರಿಗಳಿಗೆ ನಗರವು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಜೊತೆಗೆ, ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನೂ ಸಾರಿದೆ.
ದಸರಾ ಮೊದಲಾದ ಉತ್ಸವದ ಸಂದರ್ಭದಲ್ಲಿ, ವರ್ಷಾಂತ್ಯದಲ್ಲಿ ಮೈಸೂರಿಗೆ ವಿವಿಧೆಡೆಯಿಂದ ಮಕ್ಕಳು ಸೇರಿದಂತೆ ಇಡೀ ಕುಟುಂಬದೊಂದಿಗೆ ಬಹಳಷ್ಟು ಮಂದಿ ಬರುತ್ತಾರೆ. ಹೆಚ್ಚು ಜನರು ಸೇರುವುದರಿಂದ ನಾಲ್ಕು ಕಾಸು ದುಡಿಯಬಹುದು ಎನ್ನುವುದು ಅವರ ಭರವಸೆ.
ಇದಕ್ಕಾಗಿ ಅವರು, ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಬೆಟ್ಟದ ಪಾದ, ದೊಡ್ಡಕೆರೆ ಮೈದಾನದ ವಸ್ತುಪ್ರದರ್ಶನ ಬಳಿ, ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳು, ಕೆ.ಆರ್. ವೃತ್ತ ಸಮೀಪ, ದೇವರಾಜ ಅರಸು ರಸ್ತೆ, ಕೋಟೆ ಆಂಜನೇಯ ದೇವಸ್ಥಾನದ ಬಳಿ ಸೇರಿದಂತೆ ವಿವಿಧೆಡೆ ಅವರು ಬಲೂನು, ಆಟಿಕೆ, ತಿಂಡಿತಿನಿಸುಗಳು ಮೊದಲಾದವುಗಳನ್ನು ಮಾರುತ್ತಾರೆ. ಹೀಗೆ ವ್ಯಾಪಾರ ಮುಗಿದ ಮೇಲೆ ಅವರು ರಸ್ತೆಬದಿಯಲ್ಲೋ, ರಾಜಕಾಲುವೆ ಅಥವಾ ಚರಂಡಿಯ ದಂಡೆಯಲ್ಲೋ ಮಲುಗುತ್ತಾರೆ. ತ್ಯಾಜ್ಯ ಸಂಗ್ರಹವಾಗುವ ಸ್ಥಳಗಳೇ ಅವರ ‘ವಾಸಸ್ಥಾನ’. ಅವರಿಗೆ ಸುರಕ್ಷಿತ ಸ್ಥಳದ ಲಭ್ಯತೆ ಇಲ್ಲದಿರುವುದು ಅಥವಾ ಕಲ್ಪಿಸದಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತಿದೆ.
ಬಯಲಲ್ಲೇ ಶೌಚ!
ಅವರಿಗೆ ಶೌಚಕ್ಕೂ, ಸ್ನಾನಕ್ಕೂ ವ್ಯವಸ್ಥೆ ಇರುವುದಿಲ್ಲ. ಇರುವಲ್ಲೇ ಹಾಕಿಕೊಂಡ ಜೋಪಡಿಯಲ್ಲೋ, ಪ್ಲಾಸ್ಟಿಕ್‌ನಿಂದ ಕಟ್ಟಿಕೊಂಡ ತಾತ್ಕಾಲಿಕ ಟೆಂಟ್‌ನಲ್ಲೋ ಉಳಿಯುತ್ತಾರೆ. ಅವರು ಬಯಲನ್ನೇ ಶೌಚಾಲಯ ಮಾಡಿಕೊಳ್ಳುವುದು ಅನಿವಾರ್ಯವೂ ಹೌದು! ಇದು, ಅನೈರ್ಮಲ್ಯಕ್ಕೂ ಕಾರಣವಾಗುತ್ತಿದೆ. ಅವರ ಅರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
‘ಅಸುರಕ್ಷಿತ ಸ್ಥಳದಲ್ಲಿ, ಅನೈರ್ಮಲ್ಯದ ನಡುವೆಯೇ ಉಳಿಯುವ ಅವರೊಂದಿಗೆ ಬರುವ ಮಕ್ಕಳ ಬಾಲ್ಯವೂ ಕಮರುತ್ತಿದೆ. ಬರೆಯುವ ಕೈಗಳಿಗೆ ಬರೆ ಬೀಳುತ್ತಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆಯು ಕಣ್ಣಿಗೆ ರಾಚುವಂತೆಯೇ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಡಿವಾಣ ಹಾಕುವ ನಿಟ್ಟಿನಲ್ಲಿ ಕಣ್ಣೆತ್ತಿ ನೋಡದಿರುವುದು, ಜಾಗೃತಿ ಮೂಡಿಸದಿರುವುದು ಕಳವಳಕಾರಿ ಸಂಗತಿಯಾಗಿದೆ’ ಎನ್ನುವುದು ಪ್ರಜ್ಞಾವಂತರ ಆರೋಪವಾಗಿದೆ.
ವ್ಯವಸ್ಥೆ ಮಾಡಬೇಕು
‘ದಸರಾ ಸಮಯದಲ್ಲಿ ವಿವಿಧೆಡೆಗಳಿಂದ ಅಲೆಮಾರಿಗಳು ಬರುತ್ತಾರೆ. ಅವರು ನಗರದ ವಿವಿಧ ರಸ್ತೆ ಬದಿಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಉಳಿದುಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿಯೇ ‘ನಿತ್ಯಕರ್ಮ’ ಮುಗಿಸುತ್ತಾರೆ. ಇದರಿಂದ ಸ್ಥಳೀಯರೂ ತೊಂದರೆಗೆ ಒಳಗಾಗುತ್ತಿದ್ದಾರೆ. ಅಂಥವರಿಗೆಂದು ಪ್ರತ್ಯೇಕ ಜಾಗದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಿ ಮೂಲಸೌಕರ್ಯ ಒದಗಿಸಬೇಕು. ಉತ್ಸವಕ್ಕೆ ವೆಚ್ಚವಾಗುವ ಕೋಟ್ಯಂತರ ರೂಪಾಯಿಯಲ್ಲಿ ಈ ಕೆಲಸಕ್ಕೂ ಒಂದಷ್ಟು ಬಳಸಲಿ’ ಎಂದು ಟೀಂ ಮೈಸೂರು ಮುಖಂಡ ಗೋಕುಲ್ ಗೋವರ್ಧನ್ ಒತ್ತಾಯಿಸಿದರು.
ವಿವಿಧೆಡೆಯಿಂದ ಬರುವ ವಲಸಿಗರು ಕಂದಮ್ಮಗಳ ಜೊತೆಗೇ ವಾಸಿಸುವ ಕುಟುಂಬ ಮಹಿಳಾ, ಮಕ್ಕಳ ಹಕ್ಕುಗಳೂ ಉಲ್ಲಂಘನೆ
ಉಲ್ಲಂಘನೆ ತಡೆಯುತ್ತಿಲ್ಲ: ಆರೋಪ
‘ಇಂತಹ ವ್ಯಾಪಾರಿಗಳ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದೆ. ದೌರ್ಜನ್ಯ ತಡೆಯಲು ಕಾನೂನು ಇದ್ದರೂ ಪಾಲನೆ ಆಗುತ್ತಿಲ್ಲ. ಮುಖ್ಯಮಂತ್ರಿ ತವರಿನಲ್ಲೇ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ’ ಎಂದು ಮಾನವ ಹಕ್ಕು ಹೋರಾಟಗಾರ ಪ್ರಸನ್ನ ದೂರಿದರು. ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲರೂ ಎಚ್ಚೆತ್ತುಕೊಂಡಿದ್ದರೆ ಬಾಲಕಿಯ ಕೊಲೆ ಆಗುತ್ತಿರಲಿಲ್ಲ’ ಎಂದು ಹೇಳಿದರು.
‘30 ಮಕ್ಕಳ ರಕ್ಷಿಸಿದ್ದೇವೆ’
‘ನಗರದಲ್ಲಿ ತಿಂಗಳಿಂದೀಚೆಗೆ ಭಿಕ್ಷೆ ಬೇಡುತ್ತಿದ್ದ ಹಾಗೂ ವ್ಯಾಪಾರದಲ್ಲಿ ತೊಡಗಿದ್ದ 30ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ಬಾಲಮಂದಿರಗಳಿಗೆ ಕಳುಹಿಸಲಾಗಿದೆ. ಮೂರು ದಿನಗಳಿಗೆ ಒಮ್ಮೆ ದಾಳಿ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಡರಾತ್ರಿ ನಂತರ...
ತಡರಾತ್ರಿವರೆಗೂ ನಗರದಲ್ಲಿ ಸಂಚರಿಸುತ್ತಾ ವ್ಯಾಪಾರ ಮಾಡುವ ವ್ಯಾಪಾರಿಗಳಲ್ಲಿ ಬಹುತೇಕರು ದಸರಾ ವಸ್ತುಪ್ರದರ್ಶನ ಸಮೀಪದ ಇಟ್ಟಿಗೆಗೂಡು ಪ್ರದೇಶದಲ್ಲಿ ಉಳಿಯುತ್ತಾರೆ. ಗದ್ದಲವನ್ನೂ ಮಾಡುತ್ತಾರೆ. ಇದರಿಂದ ಅಲ್ಲಿನ ನಿವಾಸಿಗಳಿಗೂ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬ ದೂರುಗಳಿವೆ. ‘ದಸರಾ ಸಂದರ್ಭದಲ್ಲಿ ಪ್ರತಿ ವರ್ಷವೂ ಬೇರೆ ಬೇರೆ ಕಡೆಗಳಿಂದ ಬಹಳಷ್ಟು ಸಂಖ್ಯೆಯಲ್ಲಿ ವ್ಯಾಪಾರಿಗಳು ಕುಟುಂಬದೊಂದಿಗೆ ಬರುತ್ತಾರೆ. ಅವರಿಗೆ ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ಅಲ್ಲಿ ಶೌಚಾಲಯದ ವ್ಯವಸ್ಥೆ ಕುಡಿಯುವ ನೀರನ್ನು ಒದಗಿಸಬಹುದು. ಇದರಿಂದ ಅವರ ಹಕ್ಕು ಉಲ್ಲಂಘನೆ ಆಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು’ ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.