ADVERTISEMENT

ಹುಣಸೂರು | ಸಾರ್ವಜನಿಕ ಸ್ಥಳದಲ್ಲಿ ಅರಳಿದ ಚಿತ್ರಾವಳಿ

ಎಚ್.ಎಸ್.ಸಚ್ಚಿತ್
Published 5 ಫೆಬ್ರುವರಿ 2026, 4:07 IST
Last Updated 5 ಫೆಬ್ರುವರಿ 2026, 4:07 IST
ಹುಣಸೂರು ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಂತ್ರಣಕ್ಕೆ ತ್ಯಾಜ್ಯ ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರ, ಕಲಾಕೃತಿಗಳನ್ನು ಅರಳಿಸಿರುವ ದೃಶ್ಯ
ಹುಣಸೂರು ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಂತ್ರಣಕ್ಕೆ ತ್ಯಾಜ್ಯ ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರ, ಕಲಾಕೃತಿಗಳನ್ನು ಅರಳಿಸಿರುವ ದೃಶ್ಯ   

ಹುಣಸೂರು: ನೈರ್ಮಲ್ಯ ನಿರ್ವಹಣೆಗೆ ವಿನೂತನ ಮಾರ್ಗ ಅಳವಡಿಸಿಕೊಂಡಿರುವ ಇಲ್ಲಿನ ನಗರಸಭೆಯು ಸಾರ್ಜನಿಕರಲ್ಲಿ ಜಾಗೃತಿ ಮೂಡಿಸಿ ತ್ಯಾಜ್ಯ ನಿರ್ವಹಣೆಗೆ ಮುಂದಾಗಿದೆ. 

ತ್ಯಾಜ್ಯ ನಿರ್ವಹಣೆ ಮತ್ತು ಜಾಗೃತಿ ಅಭಿಯಾನ ಹೆಸರಿನಲ್ಲಿ ಸಾರ್ವಜನಿಕರು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಸ್ಥಳವನ್ನು ಗುರುತಿಸಿ, ಆ ಸ್ಥಳವನ್ನು ನಗರಸಭೆ ಪೌರಕಾರ್ಮಿಕ ಸಿಬ್ಬಂದಿ ಮತ್ತು ಸಮುದಾಯ ಸಂಚಾಲಕಿಯರು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ಮರುಬಳಕೆ ವಸ್ತುಗಳಿಂದ ನಿರ್ಮಿಸಿದ ವಿವಿಧ ಕಲಾಕೃತಿಗಳನ್ನು ಅಳವಡಿಸಿ ಕಸ ಹಾಕದಂತೆ ತಿಳಿ ಹೇಳಲಾಗುತ್ತಿದೆ.

ಕಂಗೊಳಿಸುವ ಗೋಡೆ: ನಗರದಲ್ಲಿ 39 ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೆ ಸಂಗ್ರಹವಾಗುತ್ತಿದ್ದ ತ್ಯಾಜ್ಯ ಈಗ ಕಣ್ಮರೆಯಾಗಿದೆ. ಈ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡದಂತೆ ಆ ಪ್ರದೇಶದ ಸಾರ್ವಜನಿಕರೇ ಎಚ್ಚೆತ್ತುಕೊಂಡಿದ್ದಾರೆ.

ADVERTISEMENT

‘ಸ್ವಚ್ಚ ಭಾರತ್‌ ಅಭಿಯಾನ ಯೋಜನೆ ಅಡಿಯಲ್ಲಿ 11 ಚದರ ಕಿ.ಮೀ. ವ್ಯಾಪ್ತಿಯಲ್ಲಿನ ಹತ್ತಾರು ಬಡಾವಣೆಗಳ ತ್ಯಾಜ್ಯ ಸಂಗ್ರಹ ಮತ್ತು ಸಾಗಾಣಿಕೆಗೆ ವಾಹನ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡಿದ್ದರೂ ಸಾರ್ವಜನಿಕರ ಸಹಕಾರವಿಲ್ಲದೆ ನಗರ ಸೌಂದರ್ಯ ಕಾದುಕೊಳ್ಳುವುದು ಕಷ್ಟ. ಜನಸಂಖ್ಯೆಯೂ 60 ಸಾವಿರ ಗಡಿದಾಟುತ್ತಿದ್ದು, ಈ ಯೋಜನೆ ಅಡಿಯಲ್ಲಿ ಜನ ಜಾಗೃತಿ ಅಭಿಯಾನವೂ ಅಗತ್ಯ’ ಎಂದು ನಗರಸಭೆ ಆಯುಕ್ತೆ ಮಾನಸ ‘ಪ್ರಜಾವಾಣಿ’ಗೆ ತಿಳಿಸಿದರು.

‘8 ಸಮುದಾಯ ಸಂಚಾಲಕರನ್ನು ನಿಯೋಜಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ದಿನ 23 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು 4 ಎಕರೆ ಪ್ರದೇಶದಲ್ಲಿ ಸಂಗ್ರಹಿಸುತ್ತಿದ್ದೇವೆ. ಹೋಟೆಲ್‌, ಕಲ್ಯಾಣ ಮಂಟಪಗಳಲ್ಲಿ 100 ಕೆ.ಜಿ.ಗಿಂತ ಹೆಚ್ಚು ಉತ್ಪತ್ತಿಯಾಗುವ ಹಸಿರು ತ್ಯಾಜ್ಯ ಅವರೇ ಸಂಸ್ಕರಿಸಿ ಕಾಂಪೋಸ್ಟ್‌ ಗೊಬ್ಬರ ಮಾಡುವ ಬಗ್ಗೆ ಕ್ರಮವಹಿಸಲಾಗಿದೆ’ ಎಂದರು. 

‘ಸ್ವಚ್ಚ ಭಾರತ್‌ ಅಭಿಯಾನ ಯೋಜನೆಯಲ್ಲಿ 2017ರಿಂದ 20ರವರೆಗೆ ಸತತವಾಗಿ ನಗರಸಭೆಯು ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಈ ಸಾಲಿನಲ್ಲಿ ‘ನಮ್ಮ ತ್ಯಾಜ್ಯ ನಮ್ಮ ಹೊಣೆ’ ಘೋಷಣೆಯಲ್ಲಿ ಘನತ್ಯಾಜ್ಯ ಸಂಗ್ರಹ ಘಟಕದಲ್ಲಿ ಗೊಬ್ಬರ ತಯಾರಿಕೆ, ಜನರಲ್ಲಿ ಜಾಗೃತಿ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡಿದ್ದು, 2025–26ನೇ ಸಾಲಿನ ಪ್ರಶಸ್ತಿ ದೊರೆಯುವ ನಿರೀಕ್ಷೆ ಇದೆ’ ಎಂದರು.

ಹುಣಸೂರು ನಗರದ ವಿವಿಧ ಬಡಾವಣೆಯ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿಯಂತ್ರಣಕ್ಕೆ ತ್ಯಾಜ್ಯ ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರ ಕಲಾಕೃತಿಗಳನ್ನು ಅರಳಿಸಿರುವ ದೃಶ್ಯ
ಚಿತ್ರಕಲಾ ಕಾಯಕದಲ್ಲಿ ತೊಡಗಿರುವ ಹುಣಸೂರು ನಗರಸಭೆ ಪೌರಕಾರ್ಮಿಕ ಸುರೇಶ್‌

39 ಸಾರ್ವಜನಿಕ ಸ್ಥಳಗಳಲ್ಲಿಜಾಗೃತಿ ಅಭಿಯಾನ ನಗರಸಭೆ: 60 ಸಾವಿರ ಗಡಿಯತ್ತ ಜನಸಂಖ್ಯೆ  ಸ್ವಚ್ಚ ಭಾರತ್‌ ಅಭಿಯಾನ; ರಾಷ್ಟ್ರೀಯ ಪ್ರಶಸ್ತಿಗೆ ನಿರೀಕ್ಷೆ 

ಜಾಗೃತಿ ಅಭಿಯಾನಕ್ಕೆ ವಿಶೇಷ ಅನುದಾನ ಬಳಸಿಕೊಳ್ಳದೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಬಣ್ಣಗಳನ್ನು ಪಡೆದು ಚಿತ್ರ ಕಲೆ ಬಿಡಿಸಲಾಗುತ್ತಿದೆ. 5 ತಿಂಗಳಿಂದ ನಿರಂತರವಾಗಿ ನಡೆದಿದ್ದು ಸ್ವಚ್ಛತಾ ಕಾರ್ಯಕ್ಕೆ ಉಪಯುಕ್ತವಾಗಿದೆ
ಸೌಮ್ಯ ನಗರಸಭೆ ಪರಿಸರ ಎಂಜಿನಿಯರ್‌
‘ಪೌರಕಾರ್ಮಿನೇ ಕಲಾವಿದ’
ಅಭಿಯಾನದ ಭಾಗವಾಗಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯಿಂದ ಎದುರಾಗುವ ಸಮಸ್ಯೆ ಕುರಿತ ಜಾಗೃತಿ ಚಿತ್ರವನ್ನು ಗೋಡೆ ಟೈಯರ್‌ಗಳ ಮೇಲೆ ಬರೆಯುತ್ತಿರುವುದು ಪೌರಕಾರ್ಮಿಕ ಚಿತ್ರ ಕಲಾವಿದ ಸುರೇಶ್‌. ‘ಈ ಕೆಲಸಕ್ಕೆ ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಪೌರಕಾರ್ಮಿಕ ವೃತ್ತಿಗೆ ನೀಡುವ ವೇತನ ಪಡೆದು ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವೆ’ ಎಂದು ತಿಳಿಸಿದರು.. ‘ನೈರ್ಮಲ್ಯತೆ ಕಾದುಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ನಿಗದಿತ ಸ್ಥಳದಲ್ಲಿ ಕಸ ವಿಲೇವಾರಿ ಮಾಡುವುದರಿಂದ ನಗರ ಸುಂದರವಾಗಲಿದೆ’ ಎಂದು ತಾಲ್ಲೂಕು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪುರುಶೋತ್ತಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.