
ಹುಣಸೂರು: ತಟ್ಟೆಕೆರೆ ಮತ್ತು ಮುತ್ತುರಾಯನಹೊಸಹಳ್ಳಿ ಭಾಗದ ಹೊಲ ಮತ್ತು ತೋಟದಲ್ಲಿ ಕಾಣಿಸಿಕೊಂಡ ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ವೀರಾಜಪೇಟೆ ಮುಖ್ಯ ರಸ್ತೆ ತಡೆದು ಪ್ರತಿಭಟಿಸಿದರು. ಪ್ರತಿಭಟನೆಯಿಂದ ಅಂತರ ರಾಜ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ರಸ್ತೆ ಸಂಚಾರ ಏರುಪೇರಾಗಿತ್ತು.
ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನನಾಯಕ, ಮುಖಂಡರಾದ ಜಗದೀಶ್ ಮಾತನಾಡಿ, ಗ್ರಾಮದಲ್ಲಿ ರೈತರು ನೆಮ್ಮದಿಯಿಂದ ಹೊಲ–ಗದ್ದೆ, ತೋಟಕ್ಕೆ ಹೋಗುವ ಪರಿಸ್ಥಿತಿ ಇಲ್ಲವಾಗಿದೆ. ಹಗಲು ಹುಲಿ ಕಾಣಿಸಿಕೊಳ್ಳುತ್ತಿದ್ದು, ಯಾವ ಹಂತದಲ್ಲಾದರು ನಮ್ಮ ಮೇಲೆ ದಾಳಿ ಮಾಡಬಹುದು. ವನ್ಯ ಜೀವಿಗಳ ಹಾವಳಿಯಿಂದಾಗಿ ಗ್ರಾಮದಲ್ಲಿ ನೆಮ್ಮದಿಯಿಂದ ಬದುಕು ನಡೆಸಲಾಗುತ್ತಿಲ್ಲ ಎಂದರು.
ಬಲಿ: ಹುಣಸೂರು ತಾಲ್ಲೂಕಿನ ಗುರುಪುರ ಪಂಚಾಯಿತಿ ವ್ಯಾಪ್ತಿಗೆ ಸೇರಿದ ವಿನೋಬ ಕಾಲೊನಿ ನಿವಾಸಿ ಪ್ರಭಾಕರ್ ಎಂಬುವವರಿಗೆ ಸೇರಿದ ಹಸು ಮೇಲೆ ಹುಲಿ ಶನಿವಾರ ದಾಳಿ ನಡೆಸಿ ಬಲಿ ಪಡೆದಿದೆ. ಈ ಸಂಬಂಧ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ಸ್ಥಳಕ್ಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಬೀಡು: ಮುತ್ತುರಾಯನಹೊಸಹಳ್ಳಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮತ್ತು ಪಶುವೈದ್ಯಾಧಿಕಾರಿ ಡಾ.ಆದರ್ಶ್ ಬೀಡು ಬಿಟ್ಟಿದ್ದು, ರಾತ್ರಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹಗಲು ಎಲ್ಲಿಯೂ ಹುಲಿ ಪತ್ತೆಯಾಗಿಲ್ಲ. ಹೆಜ್ಜೆ ಗುರುತು ಮಾತ್ರ ಕಂಡಿದೆ ಎಂದರು.
ಹುಲಿ ಪತ್ತೆಯಾಗಿಲ್ಲ: ಎಸಿಎಫ್
ಹನಗೋಡು ಹೋಬಳಿ ಮತ್ತು ಮುತ್ತುರಾಯನಹೊಸಹಳ್ಳಿ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಥರ್ಮಲ್ ಡ್ರೋನ್ ಕೊಂಬಿಂಗ್‌ನಲ್ಲಿ ಹುಲಿ ಪತ್ತೆಯಾಗಿಲ್ಲ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಇಲಾಖೆ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ. ಹುಣಸೂರು ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಸ್ಥಳೀಯರು ರಸ್ತೆ ತಡೆ ಚಳುವಳಿ ನಡೆಸಿ ಹುಲಿ ಸೆರೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಇಲಾಖೆ ಕೈಗೊಂಡ ಕಾರ್ಯಾಚರಣೆಯಲ್ಲಿ ಥರ್ಮಲ್ ಡ್ರೋನ್ ಸೇರಿದಂತೆ 50 ಸಿಬ್ಬಂದಿ ಹಾಗೂ ಆನೆ ವರಲಕ್ಷ್ಮಿ ಏಕಲವ್ಯ ಭಾಗವಹಿಸಿ ಎರಡು ದಿನದಿಂದ ಹುಡುಕಾಟ ನಡೆಸಿದ್ದು ಹುಲಿ ಪತ್ತೆಯಾಗಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಸಂತತಿ: ನಾಗರಹೊಳೆ ಅರಣ್ಯದಲ್ಲಿ ಹುಲಿ ಸಂತತಿ ಹೆಚ್ಚಾಗಿದ್ದು ಪ್ರಾಯದ ಹುಲಿ ಮರಿಗಳು ತನ್ನ ವಾಸಸ್ಥಳ ಗುರುತಿಸಿಕೊಳ್ಳುವ ಹಂತದಲ್ಲಿ ಹಳೆಯ ಹುಲಿಗಳು ಹೆಚ್ಚಾಗಿ ವಾಸಿಸುವ ಕೋರ್ ಅರಣ್ಯ ಪ್ರದೇಶದಿಂದ ಹೊರಗೆ ಬಂದು ತನ್ನ ವ್ಯಾಪ್ತಿ ಗುರುತಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದ್ದು ನಾಗರಹೊಳೆಗೆ ಸೇರಿದ ಪ್ರಾದೇಶಿಕ ಅರಣ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.