
ಹುಣಸೂರು: ‘ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಉತ್ತಮ ದರಕ್ಕೆ ಒತ್ತಾಯಿಸುವ ಸಂಬಂಧ ರೈತ ಸಂಘ ಕರೆದಿದ್ದ ಸಭೆಯಲ್ಲಿ, ತಾತ್ಕಾಲಿಕವಾಗಿ ಮಾರುಕಟ್ಟೆ ಬಂದ್ ಮಾಡದೆ ಉತ್ತಮ ದರಕ್ಕೆ ಒತ್ತಡ ಹಾಕುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ತಂಬಾಕು ಬೆಳೆಗಾರರ ಸಭೆಯಲ್ಲಿ ಮಾತನಾಡಿ, ರಾಜ್ಯದ ವರ್ಜೀನಿಯ ತಂಬಾಕು ವಿಶ್ವದಲ್ಲಿ ಬೇಡಿಕೆ ಇದ್ದರು ಕರ್ನಾಟಕ ತಂಬಾಕಿಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ದರ ಸಿಗುತ್ತಿಲ್ಲ. ಆಂಧ್ರಪ್ರದೇಶದ ತಂಬಾಕಿಗೆ ₹450 ಸಿಗುತ್ತಿದ್ದು, ರಾಜ್ಯದಲ್ಲಿ ಉತ್ತಮ ತಂಬಾಕಿಗೆ ₹320 ನೀಡುತ್ತಿದ್ದಾರೆ ಎಂದರು.
‘ಮಾರುಕಟ್ಟೆ ಆರಂಭದಿಂದಲೂ ಒಂದೇ ದರ ನೀಡುತ್ತಿದ್ದು, ಉತ್ಪಾದನ ವೆಚ್ಚಕ್ಕೆ ಸರಿಯಾಗಿ ಮಾರುಕಟ್ಟೆ ದರ ರೈತರಿಗೆ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗಮನಕ್ಕೆ ತಂದಿದ್ದು, ಡಿಸೆಂಬರ್ ತಿಂಗಳಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ತಂಬಾಕು ಬೆಳೆಗಾರರ ನಿಯೋಗ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಲಿಲ್ಲ’ ಎಂದು ತಿಳಿಸಿದರು.
ಬೇಡಿಕೆ: ರಾಜ್ಯಕ್ಕೆ 100 ಮಿಲಿಯನ್ ಕೆ.ಜಿ ತಂಬಾಕು ಉತ್ಪತ್ತಿಗೆ ಅವಕಾಶ ನೀಡಿದ್ದರು, ಪ್ರಾಕೃತಿಕ ವಿಕೋಪದಿಂದ 70ರಿಂದ 80 ಮಿಲಿಯನ್ ಕೆ.ಜಿಗೆ ಸೀಮಿತಗೊಂಡಿದ್ದೇವೆ. ಆಂಧ್ರಪ್ರದೇಶಕ್ಕೆ 145 ಮಿಲಿಯನ್ ಕೆ.ಜಿ ನೀಡಿದ್ದು, 250ರಷ್ಟು ಬೆಳೆಯಲಾಗುತ್ತಿದೆ. ಹೆಚ್ಚುವರಿ ಬೆಳೆದ ತಂಬಾಕಿಗೂ ಉತ್ತಮ ದರ ನೀಡಿ ಖರೀದಿಸುತ್ತಿದ್ದು, ರಾಜ್ಯದ ಬೆಳೆಗಾರರಿಗೆ ಸಮಸ್ಯೆ ಸೃಷ್ಟಿಯಾಗಿದ್ದು, ಕಡಿವಾಣ ಹಾಕಬೇಕು’ ಎಂದಿ ತಿಳಿಸಿದರು.
ತಂಬಾಕು ಬೆಳೆಗಾರರಿಗೆ ಹುಡಿ ಮಾರಾಟ ಮಾಡಲು ಮಂಡಳಿ ಹರಾಜು ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ವಿದೇಶಿ ಕಂಪನಿಗಳು ಹಾಲು ಮತ್ತು ಮೀನು ಖರೀದಿಸಲು ಅವಕಾಶ ಕಲ್ಪಿಸಬೇಕು. ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟವಾದ ತಂಬಾಕಿಗೆ 4ರಿಂದ 5 ದಿನದೊಳಗೆ ಹಣ ಪಾವತಿಯಾಗುವ ರೀತಿ ಮಂಡಳಿ ಕ್ರಮ ವಹಿಸಬೇಕು ಎಂದರು.
ರೈತ ಸಭೆಯಲ್ಲಿ ಕಾಫ್ ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್, ಚಂದ್ರೇಗೌಡ, ಮೋದೂರು ಶಿವಣ್ಣ, ಪ್ರಕಾಶ್ ರಾಜ ಅರಸು, ದಶರಥ, ಮಹದೇವ್, ರಾಜು, ಹರೀಶ್, ವಿಷಕಂಠಪ್ಪ, ಬೀರೇಗೌಡ, ಶಿವರಾಜು, ಮಹದೇವೇಗೌಡ, ಶಿವಶಂಖರ್ ಬೆಳೆಗಾರರು ಭಾಗವಹಿಸಿದ್ದರು.
ಮಾರುಕಟ್ಟೆ ದರ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣದೆ ಕಳೆದ ಎರಡು ದಿನದಿಂದ ಅಲ್ಪಮಟ್ಟದ ದರ ಜಿಗಿತ ಕಂಡಿದೆ. ಈ ಅಲ್ಪ ಪ್ರಮಾಣದ ದರ ಏರಿಕೆ ರೈತರಿಗೆ ಯಾವುದೇ ಅನುಕೂಲವಿಲ್ಲ. ರಾಜ್ಯದ ನಾಲ್ಕು ಜಿಲ್ಲೆಯ ಸಂಸದರ ಕಚೇರಿ ಎದುರು ಜನವರಿ 5ರಿಂದ ತಂಬಾಕು ಬೆಳೆಗಾರರು ಧರಣಿ ನಡೆಸಲು ಸಭೆ ತೀರ್ಮಾನಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.