ADVERTISEMENT

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ಬಿ.ವೈ. ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 11:28 IST
Last Updated 17 ಜನವರಿ 2025, 11:28 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

- ಫೇಸ್‌ಬುಕ್ ಚಿತ್ರ

ಮೈಸೂರು: ‘ನಾನೇ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುತ್ತೇನೆಂದರೆ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂಬ ಅರ್ಥ ತಾನೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ADVERTISEMENT

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದ ಎಲ್ಲ ಗೊಂದಲಗಳು ಬೇಗನೆ ಬಗೆಹರಿಯುತ್ತವೆ. ಭಿನ್ನಮತೀಯರ ಮಾತುಗಳೂ ನಿಲ್ಲುತ್ತವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ಒಂದು ವರ್ಷ ನಿಭಾಯಿಸಿರುವೆ. ಮುಂದೆಯೂ ಶ್ರಮ ವಹಿಸುವೆ’ ಎಂದರು.

‘ಬಿ.ಎಸ್‌.ಯಡಿಯೂರಪ್ಪ ಹಳ್ಳಿಯಿಂದ ಪಕ್ಷ ಕಟ್ಟಿದ್ದಾರೆ. ಅವರ ವಿರುದ್ಧ ಮಾತನಾಡಿದರೆ ಕಾರ್ಯಕರ್ತರಿಗೆ ನೋವಾಗುತ್ತದೆ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕೆಂದು ಈ ಹಿಂದೆ ರಮೇಶ್‌ ಜಾರಕಿಹೊಳಿ ಸೇರಿದಂತೆ ಅನೇಕರಿಗೆ ಹೇಳಿದ್ದೆ’ ಎಂದು ಹೇಳಿದರು.

‘ಬೀದರ್‌ನಲ್ಲಿ ಎಟಿಎಂ ದರೋಡೆ, ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣಗಳು ನಡೆದಿವೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ದೇಶದ್ರೋಹಿಗಳನ್ನು ಮಟ್ಟ ಹಾಕುತ್ತಿಲ್ಲ. ತುಷ್ಟೀಕರಣ ನೀತಿ ಅದಕ್ಕೆ ಕಾರಣ’ ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಚಾಣಾಕ್ಷ:

‘ಸಿದ್ದರಾಮಯ್ಯ ರಾಜಕೀಯ ಚಾಣಾಕ್ಷ. ಅಧಿಕಾರಾವಧಿ ಮುಗಿಯುತ್ತಿದೆ ಎಂದು ರಾಜಕೀಯ ತಂತ್ರ– ಕುತಂತ್ರ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ರಾಜಕೀಯ ದಾಳ ಉರುಳಿಸುತ್ತಿದ್ದಾರೆ’ ಎಂದು ವಿಜಯೇಂದ್ರ ಹೇಳಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ನನ್ನದು ಸಿಂಹಪಾಲೆಂದು ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬಾರದೆಂದು ಔತಣಕೂಟ ರಾಜಕೀಯ ನಡೆಯುತ್ತಿದೆ. ಆಡಳಿತ ಪಕ್ಷದ ಸಚಿವರೇ ಶಿವಕುಮಾರ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪೂರ್ಣಾವಧಿ ಮುಖ್ಯಮಂತ್ರಿ ಆಗುವುದಿಲ್ಲ. ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು. ಸಿ.ಎಂ ಕುರ್ಚಿಗಾಗಿ 8 ಮಂದಿ ಟವೆಲ್ ಹಾಕಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.