ADVERTISEMENT

ಅಕ್ರಮ ಗಣಿಗಾರಿಕೆ: ನಷ್ಟ ವಸೂಲಿಗೆ ಕ್ರಮವಹಿಸಿ; ಎಸ್.ಆರ್. ಹಿರೇಮಠ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 21:45 IST
Last Updated 4 ಸೆಪ್ಟೆಂಬರ್ 2025, 21:45 IST
ಎಸ್.ಆರ್. ಹಿರೇಮಠ
ಎಸ್.ಆರ್. ಹಿರೇಮಠ   

ಮೈಸೂರು: ‘ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ₹1.5 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿ, 12 ಶಿಫಾರಸುಗಳ ಅನುಷ್ಠಾನಕ್ಕೆ ಸೂಚಿಸಿರುವ ಸಚಿವ ಎಚ್‌.ಕೆ.ಪಾಟೀಲ್‌ ಅಧ್ಯಕ್ಷತೆಯ ಸಂಪುಟ ಉಪಸಮಿತಿಯ ವರದಿಯಂತೆ ಸರ್ಕಾರ ಶೀಘ್ರ ಕ್ರಮಕ್ಕೆ ಮುಂದಾಗಬೇಕು’ ಎಂದು ‌ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಿತಿ ಸೂಚನೆಯಂತೆ ನಷ್ಟ ವಸೂಲಾತಿಗೆ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು. ತಪ್ಪಿತಸ್ಥರನ್ನು ಶಿಕ್ಷಿಸಲು ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಮುಖ್ಯವಾಗಿ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ಗಣಿ ಪ್ರದೇಶಗಳ ಹರಾಜು ಪ್ರಕ್ರಿಯೆ ನಡೆಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಅವರನ್ನು ಬದಲಿಸಿ, ಪ್ರಾಮಾಣಿಕರನ್ನು ಸಚಿವರನ್ನಾಗಿ ನೇಮಿಸಬೇಕು. ಇದರಿಂದ ಮಾತ್ರ ವರದಿ ಉದ್ದೇಶ ಸಫಲವಾಗಲಿದೆ’ ಎಂದರು.

‘ಉಪಸಮಿತಿಯ ವರದಿಯನ್ನು ನಾವು ಬೆಂಬಲಿಸುತ್ತೇವೆ. ಜನಾಂದೋಲನ ಮಹಾಮೈತ್ರಿ, ಗಣಿಬಾಧಿತ ಪರಿಸರ– ಜನ ಬದುಕು ಪುನಶ್ಚೇತನ ಹೋರಾಟ ಸಮಿತಿ, ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಮಿತಿ (ಎನ್‌ಸಿಪಿಎನ್‌ಆರ್‌) ಹೋರಾಟದ ಫಲವಿದು. ಇದನ್ನು ವ್ಯರ್ಥವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಜನಾಂದೋಲನ ಮಹಾಮೈತ್ರಿಯ ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.