ADVERTISEMENT

ಅಕ್ರಮ ನಿವೇಶನ | ಯಡಿಯೂರಪ್ಪ ಸಂಬಂಧಿಯೂ ಭಾಗಿ: ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:03 IST
Last Updated 22 ಜುಲೈ 2024, 14:03 IST
<div class="paragraphs"><p>ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ</p></div>

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

   

ಮೈಸೂರು: ‘ಭೂಸಂತ್ರಸ್ತ ಕುಟುಂಬವೊಂದಕ್ಕೆ ಮುಡಾ ವಿಜಯನಗರ ಮೂರನೇ ಹಂತದಲ್ಲಿ ಶೇ 50:50 ಅನುಪಾತದಲ್ಲಿ ಅಕ್ರಮವಾಗಿ ಬದಲಿ ನಿವೇಶನ ಮಂಜೂರು ಮಾಡಿದ್ದು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಸಹೋದರಿ ಪ್ರೇಮಾ ಅವರ ಮಗ ಎಸ್‌.ಸಿ. ರಾಜೇಶ್‌ ಕೆಲವೇ ದಿನದ‌ಲ್ಲಿ ಅದನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಗಳೇ ನಾಪತ್ತೆಯಾಗಿದ್ದು, ತನಿಖೆ ನಡೆಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಒತ್ತಾಯಿಸಿದರು.

‘ಮೈಸೂರು ತಾಲ್ಲೂಕಿನ ಹಿನಕಲ್‌ ಗ್ರಾಮದ ಸರ್ವೆ ಸಂಖ್ಯೆ 255/3ರಲ್ಲಿ ಕಮಲಮ್ಮ ಎಂಬುವರಿಗೆ ಸೇರಿದ 33 ಗುಂಟೆ ಜಾಗವನ್ನು ಮುಡಾ 1984ರಲ್ಲಿ ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಿಸಿತ್ತು. ನಂತರ ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಗಳು ಹಾಗೂ ಭೂ ಪರಿಹಾರದ ದಾಖಲೆಗಳೇ ಮಾಯವಾಗಿವೆ. ಹೀಗಿದ್ದೂ ಮುಡಾ ಆಯುಕ್ತರು ಅವರಿಗೆ ಶೇ 50:50 ಅನುಪಾತದಲ್ಲಿ ಒಟ್ಟು 8,984 ಚದರ ಅಡಿ ನಿವೇಶನವನ್ನು ಮಂಜೂರು ಮಾಡಿರುವುದು ಅಕ್ರಮ‌’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 

ADVERTISEMENT

‘ಭೂದಾಖಲೆಗಳೇ ಇಲ್ಲದಿದ್ದರೂ, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇದ್ದಾಗ್ಯೂ ಆಯುಕ್ತರು ಭೂಸಂತ್ರಸ್ತರಿಗೆ ಭಾರಿ ಮೌಲ್ಯದ ನಿವೇಶನ ಮಂಜೂರು ಮಾಡಿರುವುದು ಮೊದಲ ಅಕ್ರಮ. ಹಳೆಯ ಪ್ರಕರಣವನ್ನು ಶೇ 50: 50 ಅನುಪಾತಕ್ಕೆ ಪರಿಗಣಿಸಿರುವುದು ಮತ್ತೊಂದು ಲೋಪ. ಕಮಲಮ್ಮ ಪುತ್ರ ಶಿವಾನಂದ ಅವರಿಗೆ ಮಂಜೂರಾದ ನಿವೇಶನಗಳ ಪೈಕಿ ಕೆಲವನ್ನು ರಾಜೇಶ್‌ ಕೆಲವೇ ದಿನದಲ್ಲಿ ತಮ್ಮ ಹೆಸರಿಗೆ ನೋಂದಣಿ ಹಾಗೂ ಖಾತೆ ಮಾಡಿಸಿಕೊಂಡಿದ್ದಾರೆ. ಎಲ್ಲವನ್ನೂ ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

‘ಇದೇ ರೀತಿ, ವಿಜಯನಗರ ಮೂರನೇ ಹಂತದ ‘ಸಿ’ ಬ್ಲಾಕ್‌ನಲ್ಲಿ ಮಹೇಂದ್ರ ಎಂಬುವರಿಗೆ ಪರಿಹಾರದ ರೂಪದಲ್ಲಿ 19 ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಇದೆಲ್ಲವೂ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ನಡೆದಿದ್ದು, ಪಕ್ಷದ ನಾಯಕರು ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರೂ ಕೈಗಾರಿಕೆಗೆ ಮೀಸಲಾದ ಜಾಗದಲ್ಲಿ ಅಕ್ರಮವಾಗಿ ಸೈಟ್‌ ಪಡೆದಿದ್ದು, ಆ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ದಾಖಲೆ ಬಿಡುಗಡೆ ಮಾಡುವೆ. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ, ಕಾನೂನಾತ್ಮಕವಾಗಿ ನಿವೇಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬವನ್ನು ತೇಜೋವಧೆ ಮಾಡುತ್ತಿರುವುದು ಖಂಡನೀಯ’ ಎಂದರು.

‘ಕೆಸರೆ ಗ್ರಾಮದ ಭೂಮಿಯನ್ನು ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಲು ದೇವರಾಜು ಹಾಗೂ ಅವರ ಸಹೋದರರಾದ ಮಲ್ಲಯ್ಯ, ಮೈಲಾರಯ್ಯ ಮತ್ತು ಕುಟುಂಬ ಒಪ್ಪಿಗೆ ಸೂಚಿಸಿರುವ ದಾಖಲೆಗಳಿವೆ. ಬಿಜೆಪಿ ನಾಯಕರು ದಾಖಲೆಯೊಂದಿಗೆ ಮಾತನಾಡಲಿ, ನಾನು ಅವರ ಕಚೇರಿಗೆ ಬಂದು ಚರ್ಚಿಸಲೂ ಸಿದ್ದ’ ಎಂದರು.

ಕಾಂಗ್ರೆಸ್‌ ನಗರ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಶಿವಣ್ಣ, ಮಹೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.