ADVERTISEMENT

ಮೈಸೂರು: ಜ. 14ರಂದು ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನ

ಹವ್ಯಾಸಿಗಳತ್ತ ಚಿತ್ತ ಹರಿಸಿದ ರಂಗಾಯಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 9:32 IST
Last Updated 13 ಜನವರಿ 2021, 9:32 IST
‘ಸೀತಾ ಸ್ವಯಂವರ’ ನಾಟಕದ ಒಂದು ದೃಶ್ಯ
‘ಸೀತಾ ಸ್ವಯಂವರ’ ನಾಟಕದ ಒಂದು ದೃಶ್ಯ   

ಮೈಸೂರು: ಸುಬ್ಬಯ್ಯನಾಯ್ಡು ಅಭಿನಯ ರಂಗ ತರಬೇತಿ ಶಿಬಿರದ ಕಲಾವಿದರು ನಟಿಸಿರುವ ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನವು ಜ. 14ರಂದು ಸಂಜೆ 6.30ಕ್ಕೆ ರಂಗಾಯಣದ ‘ವನರಂಗ’ದಲ್ಲಿ ನಡೆಯಲಿದೆ. ಇದು ಕೊರೊನಾ ಲಾಕ್‌ಡೌನ್‌ ನಂತರ ರಂಗಾಯಣದ ಮೊದಲ ಹೊಸ ನಾಟಕ ಎನಿಸಿದೆ.

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ನ ಅಧ್ಯಕ್ಷ ಎನ್.ವಿ.ಫಣೀಶ್‌ ನಾಟಕದ ಕರಪತ್ರ ಬಿಡುಗಡೆ ಮಾಡಲಿದ್ದಾರೆ. ಎಂ.ಎಲ್.ಶ್ರೀಕಂಠೇಗೌಡ ಅವರ ಈ ನಾಟಕದ ರಂಗ ವಿನ್ಯಾಸವನ್ನು ಎಚ್.ಕೆ.ದ್ವಾರಕನಾಥ್ ನಿರ್ವಹಿಸಿದ್ದು, ಜೀವನ್‌ಕುಮಾರ್ ಬಿ ಹೆಗ್ಗೂಡು ನಿರ್ದೇಶಿಸಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ರಂಗತರಬೇತಿ ಶಿಬಿರದಲ್ಲಿ ಒಟ್ಟು 26 ಮಂದಿ ಹವ್ಯಾಸಿ ಕಲಾವಿದರು ಭಾಗವಹಿಸಿದ್ದರು. ಇವರಲ್ಲಿ ಶೇ 60ರಷ್ಟು ಮಂದಿ ಎಂಜಿನಿಯರಿಂಗ್ ಪದವೀಧರರೇ ಆಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿಯೂ ರಂಗಾಯಣವು ಕಲಾವಿದರಿಗಾಗಿ ಇಂತಹ ಶಿಬಿರ ಏರ್ಪಡಿಸಿ, ಅವರ ನೆರವಿಗೆ ಧಾವಿಸಿದೆ ಎಂದರು.

ADVERTISEMENT

ಆರ್.ನಾಗರತ್ನಮ್ಮ ಮಹಿಳಾ ತರಬೇತಿ ಶಿಬಿರವೂ ಆರಂಭವಾಗಲಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸುಮಾರು 40 ಮಂದಿ ಕಲಾವಿದರಿಗೆ ಕೆಲಸ ನೀಡಿದ್ದೇವೆ ಎಂದು ಹೇಳಿದರು.

‘ಸಾಹೇಬ್ರು ಬಂದವೇ!!!’ ಪ್ರದರ್ಶನ ನಾಳೆ

ಜ. 15ರಂದು ಸಂಜೆ 6.30ಕ್ಕೆ ‘ಭೂಮಿಗೀತ’ ರಂಗಮಂದಿರದಲ್ಲಿ ರಂಗಾಯಣ, ಕರ್ನಾಟಕ ಅರೆಭಾಷೆ ಸಂಸ್ಕೃತಿ–ಸಾಹಿತ್ಯ ಅಕಾಡೆಮಿಯ ಅರೆಭಾಷೆ ನಾಟಕ ‘ಸಾಹೇಬ್ರು ಬಂದವೇ!!!’ ಪ್ರದರ್ಶನ ಕಾಣಲಿದೆ. ಇದಕ್ಕೂ ಮುನ್ನ ಶಾಸಕ ಕೆ.ಜಿ.ಬೋಪಯ್ಯ, ಕೊಡಗುಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ, ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರೊಂದಿಗೆ ಮಾತುಕತೆ ಕಾರ್ಯಕ್ರಮ ಇರಲಿದೆ ಎಂದು ಅವರು ಮಾಹಿತಿ ನೀಡಿದರು.

ನಾಟಕದ ಮೂಲ ‘ನಿಖೋಲಾಯ್ ಗೊಗಲ್‌ನ ‘ದಿ ಇನ್‌ಸ್ಪೆಕ್ಟರ್ ಜನರಲ್’ ಆಗಿದ್ದು, ಕನ್ನಡಕ್ಕೆ ಕೆ.ವಿ.ಸುಬ್ಬಣ್ಣ, ಅರೆಭಾಷೆಗೆ ಜಯಪ್ರಕಾಶ್‌ ಕುಕ್ಕೇಟಿ ತಂದಿದ್ದಾರೆ. ನಾಟಕವನ್ನು ಜೀವನ್‌ರಾಂ ಸುಳ್ಯ ನಿರ್ದೇಶಿಸಿದ್ದಾರೆ ಎಂದರು.

ಏಪ್ರಿಲ್‌ನಲ್ಲಿ ಬಹುರೂಪಿ

ಚಳಿಯ ವಾತಾವರಣದಲ್ಲಿ ಕೊರೊನಾ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ‘ಬಹುರೂಪಿ’ ಉತ್ಸವವನ್ನು ಏಪ್ರಿಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.