
ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ಪ್ರತಿಗೆ ರೈತರ ಬೆಂಕಿ
ಮೈಸೂರು: ‘ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ರೈತರ ಮರಣ ಶಾಸನವಾಗಿದೆ’ ಎಂದು ಆರೋಪಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದವರು, ಒಪ್ಪಂದದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಗನ್‌ಹೌಸ್ ಸಮೀಪದ ಕುವೆಂಪು ಉದ್ಯಾನದಲ್ಲಿ ಭಾನುವಾರ ಸಂಘಟನೆಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಕರೆಯ ಮೇರೆಗೆ ಪ್ರತಿಭಟನೆ ನಡೆಯಿತು. ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ನಡೆಯ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ‘ಕೇಂದ್ರ ಸರ್ಕಾರ ಇತ್ತೀಚೆಗೆ ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದ ರೈತರ ಮರಣಶಾಸನ ಬರೆದಿದೆ’ ಎಂದು ಆರೋಪಿಸಿದರು.
ನಮ್ಮವರು ಸಾಲಗಾರರಾಗುತ್ತಾರೆ: ‘ಕೃಷಿ ಹಾಗೂ ಹೈನು ಉತ್ಪನ್ನಗಳು ಅಮೆರಿಕದಿಂದ ಭಾರತದ ದೇಶಕ್ಕೆ ಆಮದಾಗಲು ಯಾವುದೇ ಸುಂಕವಿಲ್ಲದೆ ವಿನಾಯಿತಿ ನೀಡಿರುವುದು ನಮ್ಮ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗುತ್ತದೆ. ಜೊತೆಗೆ ದೇಶದ ಉತ್ಪನ್ನಗಳಿಗೆ ಬೆಲೆ ದೊರೆಯುವುದಿಲ್ಲ. ಇದರಿಂದ ರೈತರು ಸಾಲಗಾರರಾಗುತ್ತಾರೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಅಮೆರಿಕದವರು ದೊಡ್ಡ ರೈತರು. ಅವರಿಗೆ ಶೇ 200ರಷ್ಟು ಸಹಾಯಧನ ಸಿಗುತ್ತದೆ. ನಮ್ಮ ರೈತರು ಸಣ್ಣ ಹಿಡುವಳಿ ಹೊಂದಿರುವವರು, ದೊರೆಯುವುದು ಶೇ 3ರಷ್ಟು ಸಹಾಯಧನವಷ್ಟೆ. ಹೀಗಿರುವಾಗ, ನಾವು ಪೈಪೋಟಿ ನಡೆಸಿ ಉತ್ಪನ್ನ ಮಾರಲು ಕಷ್ಟವಾಗುತ್ತದೆ. ಬೀದಿಗೆ ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದರು.
ಎಲ್ಲ ವರ್ಗದವರ ಮೇಲೆ ಪರಿಣಾಮ: ‘ಈ ಒಪ್ಪಂದದಿಂದ ದೇಶದ ಎಲ್ಲ ವರ್ಗದ ವ್ಯಾಪಾರಸ್ಥರು ಹಾಗೂ ಜನರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ದೇಶವನ್ನು ಆಕ್ರಮಿಸಿಕೊಂಡು ಆಳಿದರು. ಆದರೆ, ಈಗ ನಮ್ಮ ಪ್ರತಿನಿಧಿಗಳೇ ಅಮೆರಿಕ ದೇಶಕ್ಕೆ ದಾಸರಾಗಿ ರೈತರನ್ನು ಮಾರಾಟ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಆ ಒಪ್ಪಂದದಿಂದ ಹೊರ ಬರಬೇಕು. ಇಲ್ಲದಿದ್ದರೆ ದೇಶದ ರೈತರ ತೀವ್ರ ಆಕ್ರೋಶಕ್ಕೆ ಗುರಿ ಆಗಬೇಕಾಗುತ್ತದೆ. ಸಂಸದರು, ಕೇಂದ್ರ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಲಕ್ಷ್ಮೀಪುರ ವೆಂಕಟೇಶ್, ವರಕೂಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೊಡ್ಡಕಾಟೂರು ಮಹದೇವಸ್ವಾಮಿ, ಕಾಟೂರು ಶಿವಣ್ಣ, ವಾಜಮಂಗಲ ಮಹಾದೇವು, ಗಿರೀಶ್, ಮಹೇಶ್, ಪಿ. ನಾಗೇಂದ್ರ, ಪ್ರಭಾಕರ್, ಶಿವಣ್ಣ, ಚಿಕ್ಕಳ್ಳಿ ನಾಗರಾಜು, ಪಾಳ್ಯಸ್ವಾಮಿ, ಚಿನ್ನನಾಯಕ, ಕಮಲಮ್ಮ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.