ADVERTISEMENT

ಮೈಸೂರು: ಖಗೋಳ ವಿಜ್ಞಾನ ಉಳಿಯಲಿ; ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:07 IST
Last Updated 8 ಡಿಸೆಂಬರ್ 2025, 6:07 IST
ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ನಿರ್ಮಿಸಿರುವ ‘ಜಂತರ್ ಮಂತರ್ ವೇದಶಾಲೆಯ ಮಧ್ಯಪದವನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅಭಿನವ ಶಂಕರಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಲ್. ಶಂಕರನಾರಾಯಣ ಜೋಯಿಸ್, ಪ್ರಕಾಶಾನಂದೇಂದ್ರ ಸರಸ್ವತಿ ಸ್ವಾಮೀಜಿ, ಮುಖೇಶ್‌ ಶರ್ಮ, ಅಶೋಕ ಹಾರನಹಳ್ಳಿ, ಡಾ. ಗಿರಿಧರ ಕಜೆ ಜೊತೆಗಿದ್ದರು
ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ನಿರ್ಮಿಸಿರುವ ‘ಜಂತರ್ ಮಂತರ್ ವೇದಶಾಲೆಯ ಮಧ್ಯಪದವನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅಭಿನವ ಶಂಕರಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಲ್. ಶಂಕರನಾರಾಯಣ ಜೋಯಿಸ್, ಪ್ರಕಾಶಾನಂದೇಂದ್ರ ಸರಸ್ವತಿ ಸ್ವಾಮೀಜಿ, ಮುಖೇಶ್‌ ಶರ್ಮ, ಅಶೋಕ ಹಾರನಹಳ್ಳಿ, ಡಾ. ಗಿರಿಧರ ಕಜೆ ಜೊತೆಗಿದ್ದರು   

ಮೈಸೂರು: ‘ಭಾರತಿ ಯೋಗಧಾಮ ಸಂಸ್ಥೆಯ ಆವರಣದಲ್ಲಿ ವೇದಶಾಲೆಯ ಸ್ಥಾಪನೆ ಶ್ಲಾಘನೀಯ. ಎಲ್ಲರೂ ಇಂತಹ ಕೆಲಸಗಳಿಗೆ ಸಹಕಾರ ನೀಡಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದಲ್ಲಿ ನಿರ್ಮಿಸಿರುವ ‘ಜ್ಯೋತಿರ್ಧಾಮ ಜಂತರ್ ಮಂತರ್ ’ ವೇದಶಾಲೆಯ ಮಧ್ಯಪದವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನಲ್ಲಿ ಇಂತಹ ಕೆಲಸಗಳು ಬಹಳ ವಿಶೇಷವಾಗಿ ಆಗಬೇಕು ಎಂದು ಆಶಿಸಿದರು.

ADVERTISEMENT

ಕೂಡಲಿ ಶೃಂಗೇರಿ ಮಠದ ಅಭಿನವ ಶಂಕರಭಾರತಿ ಸ್ವಾಮೀಜಿ ಮಾತನಾಡಿ, ‘ಭಾರತೀಯ ಖಗೋಳ ವಿದ್ಯೆ ಉಳಿಯಬೇಕು. ನಮ್ಮ ದೇಶದಲ್ಲಿ ಇಂತಹ ವಿದ್ಯೆಗಳನ್ನು ವ್ಯವಸ್ಥಿತವಾಗಿ ಬೆಳೆಸುವ ಕೆಲಸ ಆಗಬೇಕು. ಇಂತಹ ವಿದ್ಯೆ ಉಳಿಯಲು ಭಾರತಿ ಯೋಗಧಾಮದ ಜೊತೆ ಸರ್ಕಾರ ಕೈಜೋಡಿಸಬೇಕು’ ಎಂದರು.

ಭಾರತಿ ಯೋಗಧಾಮದ ಸಂಸ್ಥಾಪಕ ಕೆ.ಎಲ್. ಶಂಕರನಾರಾಯಣ ಜೋಯಿಸ್, ‘ಆಕಾಶಕಾಯಗಳನ್ನು ಅರಿಯುವ ಭಾರತೀಯ ಮಾದರಿಯ ವೇದಶಾಲೆಗಳು ಇರುವುದು ಪ್ರಧಾನವಾಗಿ ರಾಜಸ್ಥಾನದ ಜೈಪುರದಲ್ಲಿ, ಉಜ್ಜಯನಿ ಮತ್ತು ದೆಹಲಿಯಲ್ಲಿ. ಚಿಕ್ಕಪ್ರಮಾಣದಲ್ಲಿ ಕಾಶಿಯಲ್ಲೂ, ಮಥುರಾದಲ್ಲೂ ಇದೆ. ಇವುಗಳ ಹೊರತಾಗಿ ಸದ್ಯ ಮೈಸೂರಿನ ಭಾರತಿ ಯೋಗಧಾಮದಲ್ಲಿ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ಜ್ಯೋತಿಷ ಶಾಸ್ತ್ರದ ಅಂಗಗಳಾದ ಗಣಿತ ಮತ್ತು ಖಗೋಳದ ಕುರಿತಾದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಇಲ್ಲಿ ಅವಕಾಶವಿದೆ. ಈಗ ಮೈಸೂರಿನಲ್ಲಿಯೇ ಅದನ್ನು ಪುನರ್ದರ್ಶನ ಮಾಡಬಹುದಾಗಿದೆ. ಗ್ರಹ, ನಕ್ಷತ್ರ ಮೊದಲಾದ ಆಕಾಶ ಕಾಯಗಳ ನಿರ್ದಿಷ್ಟ ಸ್ಥಾನಗಳು, ಆಕಾಶದಲ್ಲಿ ಗೋಚರಿಸುವ ಗ್ರಹಣ, ವಿಷುವ, ಅಯನ ಇತ್ಯಾದಿಗಳನ್ನು ಇಲ್ಲಿನ ಯಂತ್ರಗಳ ಮೂಲಕ ಅರಿಯಬಹುದಾಗಿದೆ ಎಂದರು.

ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಜೈಪುರ ಜ್ಯೋತಿರ್ಧಾಮ ವೇದಶಾಲೆ ನಿರ್ದೇಶಕ ಮುಖೇಶ್‌ ಶರ್ಮ, ವಕೀಲ ಅಶೋಕ ಹಾರನಹಳ್ಳಿ, ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ, ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ಅಡಿಗ, ಜ್ಯೋತಿಷಿ ವೆಂಕಟೇಶ್ ಭಟ್, ಆಯುರ್ವೇದ ವೈದ್ಯ ಚಂದ್ರಶೇಖರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.