ADVERTISEMENT

ಕಾನೂನು ಸುವ್ಯವಸ್ಥೆ ಇಲ್ಲದೇ ಕೈಗಾರಿಕೆಗಳು ರಾಜ್ಯದಿಂದ ಹೊರಕ್ಕೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 14:20 IST
Last Updated 8 ಏಪ್ರಿಲ್ 2022, 14:20 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದರಿಂದಲೇ, ಸುಮಾರು 10 ಸಾವಿರ ಉದ್ಯೋಗ ನೀಡಬಲ್ಲ ಓಲಾ ಬೈಕ್ ಉದ್ಯಮ ತಮಿಳುನಾಡಿಗೆ ಹೋಗಿದೆ. ಅನೇಕ ಕೈಗಾರಿಕೆಗಳು ಅನ್ಯರಾಜ್ಯಗಳ ಕಡೆಗೆ ಹೋಗುತ್ತಿವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಷಾದಿಸಿದರು.

‘ಕಾನೂನು ಸುವ್ಯವಸ್ಥೆ ಸರಿ ಹೋಗದಿದ್ದರೆ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ. ಅದರಿಂದ ಆರ್ಥಿಕ ಕುಸಿತ ಉಂಟಾಗುತ್ತದೆ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಹಿಜಾಬ್‌, ಹಲಾಲ್, ಮಸೀದಿಯಲ್ಲಿ ಮೈಕ್ ನಿರ್ಬಂಧದ ನಂತರ, ಮಾವಿನಹಣ್ಣನ್ನು ಮುಸ್ಲಿಂ ವ್ಯಾಪಾರಿಗಳಿಂದ ಖರೀದಿಸಬಾರದು ಎಂದು ಹೇಳುತ್ತಿದ್ದಾರೆ. ಹಲಾಲ್‌ ಮಾಂಸವನ್ನು ನಾವು ಹಿಂದೆ ತಿಂದಿರಲಿಲ್ಲವೇ? ಬೆಲೆ ಏರಿಕೆ ಕುರಿತು ಮಾತನಾಡದೆ, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಎರಡೂ ಧರ್ಮದ ನಡುವೆ ಹುಳಿ ಹಿಂಡುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಗೃಹಸಚಿವರಾಗಿರಲು ಆರಗ ಜ್ಞಾನೇಂದ್ರ ನಾಲಾಯಕ್. ಬೆಂಗಳೂರಿನ ಯುವಕನ ಕೊಲೆ ಪ್ರಕರಣ ಕುರಿತು ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಹಾಗೂ ಗುಪ್ತಚರ ವಿಭಾಗ ಇದ್ದರೂ ಮಾಹಿತಿ ಇಲ್ಲದೇ ಮಾತನಾಡಿದರು ಎನ್ನುವುದು ಸರಿಯಲ್ಲ. ಕೂಡಲೇ ಮುಖ್ಯಮಂತ್ರಿ ಅವರ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಅಮಿತ್‌ಶಾ ನಮ್ಮ ಮಾತೃಭಾಷೆಯ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ ಎಂಬ ಅವರ ಹೇಳಿಕೆ ಬಾಲಿಶ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೆ ವಿರುದ್ಧ. ಹಿಂದಿ ರಾಷ್ಟ್ರಭಾಷೆ ಅಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಬಲವಂತವಾಗಿ ಹಿಂದಿ ಹೇರಿದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.