ADVERTISEMENT

ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳ ಬಗ್ಗೆ ಮೈಸೂರಲ್ಲೇ ಮಾಹಿತಿ

ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಕೇಂದ್ರ

ಎಂ.ಮಹೇಶ್
Published 1 ಏಪ್ರಿಲ್ 2025, 5:23 IST
Last Updated 1 ಏಪ್ರಿಲ್ 2025, 5:23 IST
ಮೈಸೂರಿನಲ್ಲಿರುವ ಜಿಲ್ಲಾ ಕೌಶಲ ಅಭಿವೃದ್ಧಿ ಕಚೇರಿ
ಮೈಸೂರಿನಲ್ಲಿರುವ ಜಿಲ್ಲಾ ಕೌಶಲ ಅಭಿವೃದ್ಧಿ ಕಚೇರಿ   

ಮೈಸೂರು: ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗದ ಅವಕಾಶಗಳ ಬಗ್ಗೆ ನಗರದಲ್ಲೇ ಮಾಹಿತಿ ದೊರೆಯಲಿದೆ.

ವಿವಿಧ ವಿದ್ಯಾರ್ಹತೆ ಹಾಗೂ ಕೌಶಲ ಹೊಂದಿ ವಿದೇಶಗಳಲ್ಲಿ ಉದ್ಯೋಗ ಕಂಡುಕೊಳ್ಳಲು ಬಯಸುವವರಿಗೆ ‘ಅಧಿಕೃತ ಮಾಹಿತಿ’ಯನ್ನು ಪಡೆಯುವುದು ಸವಾಲಿನ ಸಂಗತಿಯೂ ಹೌದು. ಖಾಸಗಿ ಕಂಪನಿಗಳ ಮೊರೆ ಹೋದರೆ ಎಲ್ಲಿ ಮೋಸ ಹೋದೀವೆಂಬ ಭಯವೂ ಅಭ್ಯರ್ಥಿಗಳಿಗೆ ಇರುತ್ತದೆ. ಈವರೆಗೆ ಸರ್ಕಾರದಿಂದ ಮಾಹಿತಿ ನೀಡುವ ವ್ಯವಸ್ಥೆಯನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಂತರರಾಷ್ಟ್ರೀಯ ವಲಸೆ ಕೇಂದ್ರಕ್ಕೇ (ಐಎಂಸಿಕೆ) ಹೋಗಬೇಕಾಗಿತ್ತು.

ಮೈಸೂರು ಪ್ರದೇಶದ ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಬೇಕಾದ್ದರಿಂದ ಎದುರಾಗುವ ತೊಂದರೆ ನಿವಾರಿಸಲು ಇಲ್ಲಿನ ಹುಣಸೂರು ರಸ್ತೆಯಲ್ಲಿರುವ ವಿಜಯನಗರ 3ನೇ ಹಂತದ ವಿಜಯಶ್ರೀಪುರದಲ್ಲಿರುವ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ಇಲ್ಲಿಯೇ ಮಾಹಿತಿ– ಮಾರ್ಗದರ್ಶನ ದೊರೆಯುವುದರಿಂದ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಸಮಯದೊಂದಿಗೆ ಹಣವೂ ಉಳಿತಾಯವಾಗುತ್ತದೆ ಎಂದು ಆಶಿಸಲಾಗಿದೆ.

ವಿದೇಶಗಳಲ್ಲಿ ಉದ್ಯೋಗಕ್ಕೆ ಹೋಗುವವರು ಹಾಗೂ ಆ ಬಗ್ಗೆ ವಿಚಾರಿಸುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಆಯ್ಕೆಯಾದವರಿಗೆ ಆಯಾ ದೇಶದ ಭಾಷೆಯೊಂದಿಗೆ ಇಂಗ್ಲಿಷ್ ಕಲಿಕೆಯ ತರಬೇತಿಯನ್ನೂ ನೀಡಲಾಗುವುದು.

ಏನಿದರ ಮಹತ್ವ?:

‘ಈ ಮಾಹಿತಿ ಕೇಂದ್ರದಲ್ಲಿ ಅಭ್ಯರ್ಥಿಗಳು ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ಮೈಸೂರು, ಮಂಗಳೂರು, ಕಲಬುರಗಿ ಮೊದಲಾದ ಕಡೆಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ನಗರದ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲೇ ಕೇಂದ್ರ ಸಜ್ಜುಗೊಳಿಸಲಾಗುತ್ತಿದೆ. ನಂತರದ ಹಂತವಾದ ನೋಂದಣಿ ಹಾಗೂ ಸಂದರ್ಶನಕ್ಕೆ ಹೋಗುವವರು ಬೆಂಗಳೂರಿನಲ್ಲಿ ಇಲಾಖೆಯಿಂದ ನಿರ್ವಹಿಸಲಾಗುತ್ತಿರುವ ಅಂತರರಾಷ್ಟ್ರೀಯ ವಲಸೆ ಕೇಂದ್ರಕ್ಕೆ ತೆರಳಬೇಕಾಗುತ್ತದೆ’ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ.ನಾರಾಯಣಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಯಾವ ದೇಶದಲ್ಲಿ ಎಂತಹ ಹುದ್ದೆಗಳು ಖಾಲಿ ಇವೆ, ಅದಕ್ಕೆ ಬೇಕಾಗುವ ವಿದ್ಯಾರ್ಹತೆ ಮೊದಲಾದ ಮಾಹಿತಿಯನ್ನು ಒದಗಿಸಲಾಗುವುದು. ಎಲ್ಲೆಲ್ಲಿ ಹುದ್ದೆ ಖಾಲಿ ಇವೆ ಎಂಬುದನ್ನು ವಿದೇಶಾಂಗ ಇಲಾಖೆಯ ರಾಯಭಾರಿ ಕಚೇರಿಯಿಂದ ಅಧಿಕೃತವಾಗಿ ಕೊಡಲಾಗುತ್ತದೆ. ಖಾಸಗಿಯವರು ತಪ್ಪು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಸರ್ಕಾರವೇ ನೆರವಾಗುತ್ತಿದೆ’ ಎನ್ನುತ್ತಾರೆ ಅವರು.

ವಿದೇಶಗಳಲ್ಲಿ ಉದ್ಯೋಗಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಗೆಲಸದವರಿಂದ ಹಿಡಿದು ಎಂಜಿನಿಯರ್‌ ಹುದ್ದೆವರೆಗೂ ಏನೇನು ಅವಕಾಶವಿದೆ ಎಂಬುದನ್ನು ಮಾಹಿತಿ ಕೇಂದ್ರದಲ್ಲಿ ತಿಳಿಸಿಕೊಡಲಾಗುವುದು.
ಕೆ.ನಾರಾಯಣಮೂರ್ತಿ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ

‘ಕೆಲಸಕ್ಕೆ ಆಯ್ಕೆಯಾದವರಿಗೆ ಸರ್ಕಾರದಿಂದಲೇ ಉಚಿತವಾಗಿ ವೀಸಾ ಒದಗಿಸಲಾಗುವುದು. ಕೌಶಲ ಅಭಿವೃದ್ಧಿ ಇಲಾಖೆ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಹಯೋಗದಲ್ಲಿ ಇದೆಲ್ಲವನ್ನೂ ನಿರ್ವಹಿಸಲಾಗುತ್ತದೆ. ಅಭ್ಯರ್ಥಿಗಳೇನಾದರೂ ಖಾಸಗಿ ಕಂಪನಿಗಳ ಮೊರೆ ಹೋದರೆ, ಬ್ಯುಸಿನೆಸ್ ವೀಸಾ ಕೊಡಿಸುತ್ತಾರೆ (2ರಿಂದ 3 ತಿಂಗಳ ಅವಧಿಯದ್ದು). ಇದರಿಂದ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಆದರೆ, ಇಲಾಖೆಯಿಂದ ‘ಎಂಪ್ಲಾಯ್‌ಮೆಂಟ್‌ ವೀಸಾ’ ಕೊಡಿಸಲಾಗುತ್ತದೆ. ಅಭ್ಯರ್ಥಿಯು ಆಯ್ಕೆಯಾದ ಕಂಪನಿಯವರು ಅಲ್ಲಿಯೇ ಉದ್ಯೋಗದಲ್ಲಿ ಮುಂದುವರಿಸಲು ಬಯಸಿದರೆ ನವೀಕರಿಸಿಕೊಳ್ಳಲು ಅವಕಾಶ ಇರುತ್ತದೆ’ ಎಂದು ಅವರು ಹೇಳಿದರು.

ವಿದೇಶಿ ಭಾಷೆ ಕಲಿಯಲು ಅವಕಾಶ

‘ನಗರದ ಎನ್‌.ಆರ್. ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಕಾಲೇಜಿನಲ್ಲಿ ‘ಲಾಂಗ್ವೇಜ್ ಲ್ಯಾಬ್‌’ (ಭಾಷಾ ಪ್ರಯೋಗಾಲಯ) ಸಿದ್ಧವಾಗಿದೆ. ಅಲ್ಲಿ ವಿದೇಶಗಳ ಭಾಷೆಗಳ ಕಲಿಕೆಯ ಬಗ್ಗೆ ಉಚಿತವಾಗಿ ತರಬೇತಿ ಪಡೆಯಬಹುದು. ಉದ್ಯೋಗ ಪಡೆದುಕೊಂಡವರಲ್ಲದೇ ಆಸಕ್ತರು ಕೂಡ ಬಂದು ಕಲಿಯಬಹುದು. ಇಲಾಖೆಯನ್ನು ಸಂಪರ್ಕಿಸಿ ಆ ಮೂಲಕ ಅವಕಾಶ ಪಡೆದುಕೊಳ್ಳಬಹುದು’ ಎಂದು ನಾರಾಯಣಮೂರ್ತಿ ತಿಳಿಸಿದರು.

ಭಾಷೆಯ ತರಬೇತಿಯೂ ಉಚಿತ...

‘ನಿರ್ದಿಷ್ಟ ಹುದ್ದೆಗೆ ಆಯ್ಕೆಯಾದ ಮೇಲೆ ಉದಾಹರಣೆಗೆ ಜರ್ಮನಿಯಲ್ಲಿನ ಕೆಲಸ ಪಡೆದುಕೊಂಡರೆ ಇಲಾಖೆಯಿಂದ ನಡೆಸಲಾಗುತ್ತಿರುವ ‘ಲಾಂಗ್ವೇಜ್‌ ಲ್ಯಾಬ್‌’ನಲ್ಲಿ ಜರ್ಮನ್‌ ಜೊತೆಗೆ ಇಂಗ್ಲಿಷ್ ಭಾಷೆಯ ಕಲಿಕೆಯ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ತೆರಳುವ 15 ದಿನಗಳಿಗೆ ಮುನ್ನ ‘ಪ್ರೀ ಡಿಪಾರ್ಚರ್ ಅಂಡ್ ಓರಿಯೆಂಟೇಷನ್‌ ಟ್ರೈನಿಂಗ್‌’ (ಪಿಡಿಒಟಿ) ಕೊಟ್ಟು ₹10 ಸಾವಿರ ಮೌಲ್ಯದ ಕಿಟ್ ನೀಡಲಾಗುವುದು. ಅದರಲ್ಲಿ ಆ ದೇಶದಲ್ಲಿರುವ ಕಾನೂನು ಮೊದಲಾದ ಮಾಹಿತಿಯ ಬುಕ್‌ಲೆಟ್‌ ನೀಡಲಾಗುವುದು’ ಎಂದು ನಾರಾಯಣಮೂರ್ತಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.