ADVERTISEMENT

ಒಳಮೀಸಲು | ಬಲಗೈನವರಿಗೆ ಅನ್ಯಾಯ: ಕೋರ್ಟ್‌ ಮೆಟ್ಟಿಲೇರಬೇಕಿದೆ; ಕೃಷ್ಣಮೂರ್ತಿ ಬೇಸರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಎ.ಆರ್‌. ಕೃಷ್ಣಮೂರ್ತಿ
ಎ.ಆರ್‌. ಕೃಷ್ಣಮೂರ್ತಿ   

ಮೈಸೂರು: ‘ಒಳ ಮೀಸಲಾತಿ ಸಮೀಕ್ಷೆ ಎರಡು ಬಾರಿ ನಡೆದರೂ, ಬಲಗೈ ಸಮುದಾಯಕ್ಕೆ ಅನ್ಯಾಯವೇ ಆಗಿದೆ’ ಎಂದು ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು. 

ಇಲ್ಲಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ‘ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ’ ಏರ್ಪಡಿಸಿದ್ದ ‘ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ವರದಿ ಕೊಟ್ಟವರನ್ನು ಬಹಳ ನಂಬಿದ್ದೆವು. ಆದರೆ, ಸಮುದಾಯವನ್ನು ಒಡೆದು ಛಿದ್ರ ಮಾಡಿದ್ದಾರೆ. ನ್ಯಾಯಾಲಯದ ಕದ ತಟ್ಟುವ ಕೆಲಸವನ್ನು ಸಮುದಾಯದ ಬೌದ್ಧಿಕ ವಲಯವು ನಿರ್ಧರಿಸಲಿ’ ಎಂದರು. 

ADVERTISEMENT

‘ಬಡ್ತಿ ಮೀಸಲಾತಿಯಲ್ಲಿ ಎ, ಬಿ, ಸಿ, ಡಿ ವಿಭಾಗಗಳಿದ್ದು, ಬಲಗೈ ಸಮಾಜದವರನ್ನು ಕೆಳಕ್ಕೆ ತಳ್ಳಲಾಗಿದೆ. ಅದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಿದೆ’ ಎಂದು ಪ್ರತಿಪಾದಿಸಿದರು.  

‘ಬಲಗೈ ಸಮುದಾಯದ ಸಾವಿರಾರು ಜನರು ಸಮೀಕ್ಷೆಯಲ್ಲಿ ‘ಹೊಲೆಯ’ ಎಂದು ನಮೂದಿಸಲು ಹಿಂಜರಿದರು. ಹೀಗಾಗಿ, ಜನಸಂಖ್ಯೆ ಕಡಿಮೆ ದಾಖಲಾಗಿದೆ. ಸಮೀಕ್ಷೆಯಿಂದ ನೋವಾಗಿದೆ’ ಎಂದರು.

‘ಬಾಡಿಗೆ ಮನೆಗಾಗಿ ಹಲವರು ಸುಳ್ಳು ಜಾತಿ ಹೇಳಿದ್ದಾರೆ. ನಮ್ಮ ಜಾತಿಯನ್ನು ಸ್ವಾಭಿಮಾನದಿಂದ ಹೇಳಿಕೊಳ್ಳದಿದ್ದರೆ ಇದ್ದರೂ ಸತ್ತಂತೆ. ಮುಂದಿನ ಪೀಳಿಗೆಗೆ ಮಣ್ಣು ಹಾಕಿದಂತೆ’ ಎಂದರು. 

‘ಒಳ ಮೀಸಲಾತಿ ಜಾರಿ ಆದಾಗ ಎಡಗೈ ಸಮುದಾಯದವರು ವಿಜಯೋತ್ಸವ ಆಚರಿಸಿದರು, ನಾವು ಮೌನವಾಗಿದ್ದೇವೆ. ಸಮೀಕ್ಷೆಯ ಅಂಕಿ– ಅಂಶ ನಮಗೆ ಸಮಾಧಾನ ಕೊಟ್ಟಿಲ್ಲ’ ಎಂದು ಹೇಳಿದರು.

‘ಮನುವಾದದತ್ತ ಸಮಾಜ’ 

ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘1925ರಲ್ಲಿ ಹುಟ್ಟಿದ ಮನುವಾದಿ ಸಂಘಟನೆ ಸೋದರ ಸಮಾಜವನ್ನು ಒಡೆದು ಹಾಕಿದೆ‘ ಎಂದು ದೂರಿದರು. ‘ಮತ್ತೆ ಮನುವಾದಕ್ಕೆ ಸಮಾಜ ತಿರುಗುತ್ತಿದೆ.ಯಶಸ್ಸಿಗೆ ಒಗ್ಗಟ್ಟು ಅಗತ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.