ADVERTISEMENT

ಎರಡೂ ಸಮುದಾಯಕ್ಕೂ ನ್ಯಾಯ ದೊರಕಿಸಲು ಒತ್ತಾಯ: ಹರಿಹರ ಆನಂದಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 12:38 IST
Last Updated 2 ಮಾರ್ಚ್ 2026, 12:38 IST
   

ಮೈಸೂರು: ‘ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿನ ಗೊಂದಲ ಸರಿಪಡಿಸುವ ಮೂಲಕ ಎಡ- ಬಲ ಜಾತಿಗಳ ನಡುವಿನ ನಿಜವಾದ ತಾರತಮ್ಯ ಹೋಗಲಾಡಿಸಬೇಕು. ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಪದ್ಧತಿ ಅನುಸರಿಸಿ ನೇಮಕಾತಿ ನಡೆಸಲು ನಮ್ಮ ಬೆಂಬಲವಿದೆ’ ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಯು ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಕ್ರಿಯೆ ಎಂದು ಭಾವಿಸಲಾಗಿತ್ತು. ಆದರೆ, ಈ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳು ಅಸ್ಪೃಶ್ಯ ಸಮಾಜಗಳನ್ನು ಛಿದ್ರಗೊಳಿಸುವತ್ತ ಸಾಗಿವೆ’ ಎಂದು ದೂರಿದರು.

‘ಬಹಳ ಭರವಸೆ ಇಟ್ಟುಕೊಂಡು ಅಸ್ಪೃಶ್ಯರು ಸರ್ಕಾರ ರಚನೆಗೆ ಬೆಂಬಲಿಸಿದರು. ಆದರೆ, ಸರ್ಕಾರ ಈ ಮೀಸಲಾತಿ ವರ್ಗೀಕರಣದಲ್ಲಿ ಕ್ಷುಲ್ಲಕ ರಾಜಕಾರಣ ನಡೆಸಿದಂತೆ ಕಂಡುಬರುತ್ತಿದೆ. ನಾಗಮೋಹನ ದಾಸ್ ಆಯೋಗದ ಬಗ್ಗೆ ಅಸ್ಪೃಶ್ಯರೆಲ್ಲರೂ ಹೆಚ್ಚು ಭರವಸೆ ಹೊಂದಿದ್ದರು. ಆದರೆ, ಪ್ರಸ್ತುತ ಅಸ್ಪೃಶ್ಯರ ನಡುವಿನ ಸ್ಥಿತಿಗತಿ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಆಯೋಗ ಕಾಟಾಚಾರಕ್ಕೆ ವರದಿ ಸಿದ್ಧಗೊಳಿಸಿದೆ’ ಎಂದು ಆರೋಪಿಸಿದರು.

ADVERTISEMENT

‘ಅಸ್ಪೃಶ್ಯರ ಎಡ–ಬಲ ಸಮೂಹಗಳ ಜನಸಂಖ್ಯೆ ಮಾಹಿತಿಯನ್ನು ಕಲೆ ಹಾಕುವ ವೇಳೆ ದೋಷಕ್ಕೆ ಎಡೆ ಮಾಡಿಕೊಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ರೋಸ್ಟರ್ ವ್ಯವಸ್ಥೆ ಸಿದ್ಧಪಡಿಸಲಾಗಿತ್ತು. ಮೇಲ್ನೋಟಕ್ಕೆ ನ್ಯಾಯ ದೊರೆತಿದೆ ಎಂದು ಭ್ರಮ ಮೂಡಿಸಿದ್ದರೂ ಕಚ್ಚಾಡುವಂತೆ ಮಾಡಲಾಗಿದೆ’ ಎಂದು ದೂರಿದರು.

‘ಸರ್ಕಾರ ಎರಡೂ ಸಮೂಹಕ್ಕೆ ನ್ಯಾಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು‘ ಎಂದು ಒತ್ತಾಯಿಸಿದರು.

ಮುಖಂಡರಾದ ದೇವಗಳ್ಳಿ ಸೋಮಶೇಖರ್, ಸೋಮಯ್ಯ ಮಲೆಯೂರು, ಬಿ. ರಾಚಯ್ಯ ಕಿನಕನಹಳ್ಳಿ, ಟಿ. ಈರಯ್ಯ, ಎಚ್.ಡಿ. ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.