ADVERTISEMENT

ಬಿಜೆಪಿ ಸರ್ಕಾರದ ಅವ್ಯವಹಾರ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಿರ್ಧಾರ

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:08 IST
Last Updated 6 ಜುಲೈ 2020, 16:08 IST
ಕೊರೊನಾ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಖಂಡಿಸಿ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಕ್ಷದ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿದರು. ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಎಂ.ಲಕ್ಷ್ಮಣ್‌ ಇದ್ದಾರೆ
ಕೊರೊನಾ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಖಂಡಿಸಿ, ಮೈಸೂರು ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಕ್ಷದ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿದರು. ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಎಂ.ಲಕ್ಷ್ಮಣ್‌ ಇದ್ದಾರೆ   

ಮೈಸೂರು: ಕೋವಿಡ್–19 ನಿಯಂತ್ರಣಕ್ಕಾಗಿ ರಾಜ್ಯದ ಬಿಜೆಪಿ ಸರ್ಕಾರ ಪ್ರಸ್ತುತ ವ್ಯಯಿಸುತ್ತಿರುವ ವೆಚ್ಚದಲ್ಲಿ ಸಾಕಷ್ಟು ಅವ್ಯವಹಾರ ಎಸಗಿದ್ದು, ಇದರ ವಿರುದ್ಧ ಪ್ರಬಲ ಹೋರಾಟ ರೂಪಿಸಲು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು, ಕೆಪಿಸಿಸಿ ವಕ್ತಾರರು, ಕಾನೂನು ಘಟಕ ಪ್ರತಿನಿಧಿಸುವ ಪ್ರಮುಖ ವಕೀಲರು ಭಾಗಿಯಾಗಿ ತಮ್ಮ ಸಲಹೆ ನೀಡಿದರು.

ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿದ ನಂತರ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ 6 ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಿದರು. ಎಲ್ಲರೂ ಸರ್ವಾನುಮತದ ಒಪ್ಪಿಗೆ ನೀಡಿದರು.

ADVERTISEMENT

ಅಕ್ರಮದ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸುವುದು. ಸಿಬಿಐ ತನಿಖೆಗೆ ಆಗ್ರಹಿಸುವುದು. ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಸಚಿವರ ರಾಜೀನಾಮೆಗೆ ಒತ್ತಾಯಿಸುವುದು. ಕೆಪಿಸಿಸಿ ನಿರ್ದೇಶನದ ಮೇರೆಗೆ ಎಲ್ಲೆಡೆ ಹೋರಾಟ ರೂಪಿಸುವುದು. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸುವುದು ಸೇರಿದಂತೆ ಹಿರಿಯ ವಕೀಲ ಸಿ.ಎಂ.ಜಗದೀಶ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಕಾನೂನು ಹೋರಾಟಕ್ಕೆ ವೇದಿಕೆ ರೂಪಿಸುವ ನಿರ್ಣಯ ಅಂಗೀಕಾರಗೊಂಡವು.

ಜಿಲ್ಲಾ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಮಂಜುಳಾ ಮಾನಸ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾ ಗ್ರಾಮಾಂತರ ಕಾನೂನು ಘಟಕದ ಅಧ್ಯಕ್ಷ ಪಾಳ್ಯ ಸುರೇಶ್, ನಗರ ಘಟಕದ ಅಧ್ಯಕ್ಷ ವೈದ್ಯನಾಥ್, ಹಿರಿಯ ವಕೀಲರಾದ ಸಿ.ಎಂ.ಜಗದೀಶ್, ಸಿ.ಬಿ.ಬಸವರಾಜ್, ಮಡ್ಡಿಕೆರೆ ಗೋಪಾಲ್, ಆನಂದ್, ಲಕ್ಷ್ಮಣ್, ಮೀನಾಕ್ಷಿ, ಕವಿತಾ, ಮನೋನ್ಮಣಿ ತಮ್ಮ ಅಭಿಪ್ರಾಯ ದಾಖಲಿಸಿದರು. ಇದೇ ಸಂದರ್ಭ ಹಲವು ವಕೀಲರು ಬಿಜೆಪಿ ವಿರುದ್ಧ ಹರಿಹಾಯ್ದರು.

ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.