ADVERTISEMENT

ಹುಣಸೂರು | ಪಿ.ಎಂ. ಜನಮನ ಶಾಲೆ: 221 ಮಕ್ಕಳಿಗೆ ಸಿಗಲಿದೆ ಶೈಕ್ಷಣಿಕ ಲಾಭ

ಎಚ್.ಎಸ್.ಸಚ್ಚಿತ್
Published 31 ಆಗಸ್ಟ್ 2025, 3:06 IST
Last Updated 31 ಆಗಸ್ಟ್ 2025, 3:06 IST
ಹನಗೋಡು ಹೋಬಳಿ ಅಯ್ಯನಕೆರೆ ಹಾಡಿಯಲ್ಲಿ ಪಿ.ಎಂ. ಜನಮನ ಯೋಜನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಗಿರಿಜನ ವಸತಿ ಶಾಲೆ ಕಟ್ಟಡ
ಹನಗೋಡು ಹೋಬಳಿ ಅಯ್ಯನಕೆರೆ ಹಾಡಿಯಲ್ಲಿ ಪಿ.ಎಂ. ಜನಮನ ಯೋಜನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಗಿರಿಜನ ವಸತಿ ಶಾಲೆ ಕಟ್ಟಡ   

ಹುಣಸೂರು: ನೈಜ ದುರ್ಬಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಜೇನುಕುರುಬ ಮತ್ತು ಕೊರಗ ಮಕ್ಕಳಿಗೆ ಶಿಕ್ಷಣದ ಮೂಲಕ ಸಮಾಜಮುಖಿಯಾಗಿಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನಮನ ಯೋಜನೆಯಲ್ಲಿ ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಅಯ್ಯನಕೆರೆ ಹಾಡಿಯಲ್ಲಿ ವಸತಿ ನಿಲಯ ನಿರ್ಮಾಣವಾಗುತ್ತಿದೆ.

2023-24 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆಯ–ವ್ಯಯದಲ್ಲಿ ಗಿರಿಜನ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪಿ.ಎಂ. ಜನಮನ ಯೋಜನೆಯಲ್ಲಿ ಅನುದಾನ ಕಾದಿಟ್ಟು ವಸತಿ ಶಾಲೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಈ ಯೋಜನೆಯನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಅಯ್ಯನಕೆರೆ ಹಾಡಿ ಆಯ್ಕೆ ಮಾಡಿದ್ದು, ಈ ಭಾಗದ ಜೇನುಕುರುಬ ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯ ನಿರ್ಮಿಸಲು ಸೂಚಿಸಿದ್ದರು. ರಾಷ್ಟ್ರಪತಿಗಳ ಸೂಚನೆ ಮೇಲೆ ಯೋಜನೆ ಅನುಷ್ಟಾನಗೊಂಡು ₹2.25 ಕೋಟಿ ಅನುದಾನದಲ್ಲಿ ವಸತಿ ಶಾಲೆ ನಿರ್ಮಾಣ ಹಂತದಲ್ಲಿದೆ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್‌ ಹೇಳಿದರು.

‘ನಾಗರಹೊಳೆ ಅರಣ್ಯಕ್ಕೆ ಕೂಗಳತೆಯಲ್ಲಿರುವ ಅಯ್ಯನಕೆರೆ ಹಾಡಿ ಇದ್ದು, ಹಾಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 40 ಜೇನುಕುರುಬ ಸಮುದಾಯದ ವಿದ್ಯಾರ್ಥಿಗಳು 1 ರಿಂದ 5 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳ ಶಿಕ್ಷಣ ಪರಿಪೂರ್ಣಗೊಳಿಸಲು ಪಿ.ಎಂ. ಜನಮನ ಯೋಜನೆಯಲ್ಲಿ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲಾ ಹಂತದವರೆಗೆ ಆರಂಭಿಸುವ ಅವಕಾಶ ಈ ಯೋಜನೆಯಲ್ಲಿ ಕಲ್ಪಿಸಲಾಗಿದೆ’ ಎಂದರು.

ADVERTISEMENT

ನಿರ್ವಹಣೆ: ಪಿ.ಎಂ. ಜನಮನ ಯೋಜನೆ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ನಿರ್ವಹಣೆ ಜವಾಬ್ದಾರಿ ನೀಡಿದ್ದು, ಕಟ್ಟಡ ಕಾಮಗಾರಿಗೆ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಣ ಬಿಡುಗಡೆಯಾಗಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಹೇಮಲತಾ ಹೇಳಿದರು.

ಯೋಜನೆಯಲ್ಲಿ ಶಿಕ್ಷಣ ಇಲಾಖೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಕಾಲ ಕಾಲಕ್ಕೆ ವರದಿಯನ್ನು ಎಸ್.‌ಎಸ್.‌ ಕೆ. ಗೆ ಸಲ್ಲಿಸಬೇಕು. ಈ ಕೇಂದ್ರಕ್ಕೆ ಶಿಕ್ಷಕ ಮತ್ತು ವಸತಿ ನಿಲಯದ ಸಿಬ್ಬಂದಿ ನಿಯೋಜನೆ ಎಲ್ಲವೂ ಸಮಗ್ರ ಶಿಕ್ಷಣ ಕರ್ನಾಟಕದಿಂದ ನಡೆಯಲಿದೆ ಎಂದರು. ‌

ಗಂಗಾಧರ್‌ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಜೇನುಕುರುಬ ಸಮುದಾಯದ ಮಕ್ಕಳಿಗೆ ಅಯ್ಯನಕೆರೆ ಹಾಡಿಯಲ್ಲಿ ವಸತಿ ಶಾಲೆ ಮತ್ತು ಈ ಸಮುದಾಯದವರಿಗೆ 9 ಹಾಡಿಗಳಲ್ಲಿ ಬಹು ಉದ್ದೇಶಿತ ಕೇಂದ್ರಗಳು ನಿರ್ಮಾಣವಾಗುತ್ತಿದ್ದು ಗಿರಿಜನರ  ಅಭಿವೃದ್ಧಿಗೆ ಪೂರಕವಾಗಲಿವೆ 
ಗಂಗಾಧರ್‌ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಶಿವಣ್ಣ ಅಯ್ಯನಕೆರೆ ಹಾಡಿ ಜೇನುಕುರುಬ ಸಮುದಾಯದ ಮುಖಂಡ
ಕೊಡಗಿನ ಕಾಫಿ ತೋಟಕ್ಕೆ ಕೂಲಿಗೆ ಹೋಗುವ ಗಿರಿಜನರು ತಮ್ಮ ಮಕ್ಕಳೊಂದಿಗೆ ಹೋಗುವ ಅಭ್ಯಾಸವಿದೆ. ಕೇಂದ್ರ ಸರ್ಕಾರ ವಸತಿ ಶಾಲೆ ಆರಂಭಿಸುತ್ತಿರುವುದು ಜೇನುಕುರುಬ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದೆ 
ಶಿವಣ್ಣ ಅಯ್ಯನಕೆರೆ ಹಾಡಿ ಜೇನುಕುರುಬ ಸಮುದಾಯದ ಮುಖಂಡ
ಪಿ.ಎಂ. ಜನಮನ ಯೋಜನೆ ಲಾಭ
ಅಯ್ಯನಕೆರೆ ಹಾಡಿಯಲ್ಲಿ ನಿರ್ಮಾಣವಾಗುತ್ತಿರುವ ಪಿ.ಎಂ. ಜನಮನ ಶಿಕ್ಷಣ ವ್ಯವಸ್ಥೆಯ ಲಾಭ ಹನಗೋಡು ಹೋಬಳಿಯ ಬಲ್ಲೇನಹೊಸಹಳ್ಳಿ ಹಾಡಿ ಚಂದನಗಿರಿ ಹಾಡಿ ಅಯ್ಯನಕೆರೆ ಹಾಡಿ ಹೆಬ್ಬಳ್ಳ ಹಾಡಿ ಮಾಸ್ತಮನ ಹಾಡಿ ಭೀರತಮ್ಮನಹಾಡಿಗೆಯಲ್ಲಿ ಒಟ್ಟು 575 ಗಿರಿಜನ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದು ಈ ಹಾಡಿಯಲ್ಲಿ ಶಾಲೆಗೆ ಹೋಗುವ ವಯಸ್ಸಿನ 221 ಮಕ್ಕಳಿಗೆ ಯೋಜನೆ ಲಾಭ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.