ADVERTISEMENT

ಜಯಪುರ: ಮಳೆಗೆ ಆಸ್ತಿ, ಬೆಳೆ ಹಾನಿ

ಜಯಪುರ ಹೋಬಳಿಯಾದ್ಯಂತ ಗುಡುಗುಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:09 IST
Last Updated 24 ಅಕ್ಟೋಬರ್ 2021, 3:09 IST
ಜಯಪುರ ಹೋಬಳಿಯ ಬರಡನಪುರ ಗ್ರಾಮದಲ್ಲಿ ಬಿರುಗಾಳಿಸಹಿತ ಮಳೆಯಿಂದ ನರ್ಸರಿ ಶೆಡ್‌ಗೆ ಹಾನಿಯಾಗಿದೆ
ಜಯಪುರ ಹೋಬಳಿಯ ಬರಡನಪುರ ಗ್ರಾಮದಲ್ಲಿ ಬಿರುಗಾಳಿಸಹಿತ ಮಳೆಯಿಂದ ನರ್ಸರಿ ಶೆಡ್‌ಗೆ ಹಾನಿಯಾಗಿದೆ   

ಜಯಪುರ: ಹೋಬಳಿಯಾದ್ಯಂತ ಶನಿವಾರ ಮುಂಜಾನೆ ಗುಡುಗುಸಹಿತ ಧಾರಾಕಾರ ಮಳೆ ಬಿದ್ದಿದೆ. ಉದ್ಬೂರು ಮತ್ತು ಕಳಲವಾಡಿ, ಜಯಪುರ, ಬರಡನಪುರ, ದೊಡ್ಡಕಾಟೂರು ಗ್ರಾಮಗಳಲ್ಲಿ ಅಪಾರ ಹಾನಿ ಉಂಟಾಗಿದೆ.

ಮೈಸೂರು– ಮಾನಂದವಾಡಿ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರಗಳು ಉರುಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ದೊಡ್ಡಕಾಟೂರು ಗ್ರಾಮದಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದೆ. ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮದ ನಿವಾಸಿ ಬಸವರಾಜು ಆಗ್ರಹಿಸಿದ್ದಾರೆ.

ADVERTISEMENT

ನಗರ್ತಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದಿದೆ. ಜಯಪುರದ ಕೆಗ್ಗೆರೆ, ಹಾರೋಹಳ್ಳಿ, ಗುಜ್ಜೇಗೌಡನಪುರ, ದಾರಿಪುರ, ದೂರ, ಮಾರ್ಬಳ್ಳಿ, ಅರಸಿನಕೆರೆ ಕೆರೆಗಳು ತುಂಬಿದ್ದು, ನಳನಳಿಸುತ್ತಿವೆ.

ಬರಡನಪುರ ಗ್ರಾಮದಲ್ಲಿ ಗಿರೀಶ್ ಎಂಬುವರ ಎರಡು ಎಕರೆ ಬಾಳೆ ತೋಟ ನೆಲಕಚ್ಚಿದೆ. ಧನಗಹಳ್ಳಿ, ಬರಡನಪುರದಲ್ಲಿ ಬೀನ್ಸ್‌, ಟೊಮೆಟೊ, ಎಲೆಕೋಸು ಸೇರಿದಂತೆ ತರಕಾರಿ ಬೆಳೆಗಳು ಜಲಾವೃತಗೊಂಡಿವೆ. ಹಲವೆಡೆ ನರ್ಸರಿಗಳ ಶೆಡ್‌ಗಳು ಬಿರುಗಾಳಿಗೆ ತೂರಿ ಹೋಗಿವೆ. ತೆಂಗಿನ ಮರಗಳು ಉರುಳಿವೆ.

‘ರೈತರ ಜಮೀನುಗಳು ಕೆರೆಯಂತಾಗಿವೆ. ರಾಗಿ, ಸೋಯಾ ಅವರೆ, ತೊಗರಿ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಿದೆ. ಆದರೆ, ಹೊಲಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ’ ಎಂದು ಜಯಪುರ ಗ್ರಾಮದ ರೈತ ಸಣ್ಣಪ್ಪ ಹೇಳಿದರು.

‘ಮಳೆ ಹಾನಿ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರ ನೀಡಲಾಗುವುದು’ ಎಂದು ಜಯಪುರ ನಾಡಕಚೇರಿ ರಾಜಸ್ವ ನಿರೀಕ್ಷಕ ಆರ್.ಪ್ರಭಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.