
ಮೈಸೂರು: ಜಿಲ್ಲೆಯಲ್ಲಿ ಎದುರಾಗಲಿರುವ ವಿವಿಧ ಚುನಾವಣೆಗಳ ಹೊಸ್ತಿಲಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್)ದ ಸಾರಥಿಗಳನ್ನು ಬದಲಾಯಿಸುವ ಮೂಲಕ ನವಚೈತನ್ಯ ತುಂಬುವ ಪ್ರಯತ್ನ ನಡೆದಿದೆ. ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದೆ.
ಮೈಸೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಗರಪಾಲಿಕೆ ಮಾಜಿ ಸದಸ್ಯ, ಸಹಕಾರ ವಲಯದಲ್ಲೂ ಗುರುತಿಸಿಕೊಂಡಿರುವ ಎಸ್.ಬಿ.ಎಂ. ಮಂಜು ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಇಬ್ಬರೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು.
ನಗರ ಘಟಕದ ಅಧ್ಯಕ್ಷರಾಗಿ ನಗರಪಾಲಿಕೆ ಮಾಜಿ ಸದಸ್ಯ ಕೆ.ಟಿ. ಚೆಲುವೇಗೌಡ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನರಸಿಂಹಸ್ವಾಮಿ ಹಲವು ವರ್ಷಗಳಿಂದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಈಗ, ಬದಲಾಯಿಸಿ ಯುವಕರಿಗೆ ಸಂಘಟನೆಯ ನೊಗ ಹೊರಿಸಲಾಗಿದೆ.
ಜಾತಿ ಸಮೀಕರಣ:
ಮೈಸೂರು ಮಹಾನಗರಪಾಲಿಕೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ಮುಂಬರಲಿರುವ ಚುನಾವಣೆಗಳಿಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ‘ಜಾತಿ ಸಮೀಕರಣ’ಕ್ಕೂ ಮಣೆ ಹಾಕಿರುವ ವರಿಷ್ಠರು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.
ಜಿಲ್ಲೆಯ ಒಕ್ಕಲಿಗ ಸಮುದಾಯದ ಪ್ರಮುಖ ರಾಜಕಾರಣಿ, ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಚಟುವಟಿಕೆಗಳಿಂದ ‘ದೂರ ಸರಿದಿರುವ’ ಈ ಸನ್ನಿವೇಶದಲ್ಲಿ ಸಂಘಟನೆಯನ್ನು ‘ಶಕ್ತ’ಗೊಳಿಸುವ ಸವಾಲಿನ ಸಂದರ್ಭದಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮಾಜಿ ಸಚಿವ ಸಾ.ರಾ. ಮಹೇಶ್, ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಹಾಗೂ ಕೆ.ವಿವೇಕಾನಂದ ಅವರ ‘ಬೆಂಬಲದ ಬಲ’ವನ್ನು ಹೊಸ ಪದಾಧಿಕಾರಿಗಳು ನೆಚ್ಚಿಕೊಂಡಿದ್ದಾರೆ.
ಜೊತೆಗೆ, ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪದೇ ಪದೇ ಮೈಸೂರು ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ, ‘ಪ್ರಾಬಲ್ಯ ಮರುಸ್ಥಾಪನೆಗೆ’ ಯತ್ನಿಸುತ್ತಿದ್ದಾರೆ.
ಫಲ ಕೊಡುವುದೇ?:
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 8, ಜೆಡಿಎಸ್ 2 ಹಾಗೂ ಬಿಜೆಪಿ ಒಂದು ಸ್ಥಾನ ಗಳಿಸಿದೆ. ಜೆಡಿಎಸ್‌ನ ಚಿಹ್ನೆಯಲ್ಲಿ ಗೆದ್ದಿರುವ ಇಬ್ಬರಲ್ಲಿ ಒಬ್ಬರು (ಜಿ.ಡಿ. ಹರೀಶ್‌ಗೌಡ) ಮಾತ್ರವೇ ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬ ಶಾಸಕರಾದ ಜಿ.ಟಿ. ದೇವೇಗೌಡ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಈ ನಡುವೆ, ‘ಜಿ.ಟಿ. ದೇವೇಗೌಡ ಅವರು ಈಗ ನಮ್ಮೊಂದಿಗಿಲ್ಲ, ಚಾಮುಂಡೇಶ್ವರಿಯಿಂದ ಸ್ಪರ್ಧಿಸಲು ನಮ್ಮಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯು ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಈ ನಡುವೆ, ಸಂಘಟನೆ ವೃದ್ಧಿಸಲು ಹೊಸ ಪದಾಧಿಕಾರಿಗಳ ನೇಮಕದ ಮೂಲಕ ಹೊಸನೀರನ್ನು ಪಕ್ಷ ಹರಿಸಿದೆ. ಇದು ಎಷ್ಟರಮಟ್ಟಿಗೆ ಫಲ ಕೊಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್.ಬಿ.ಎಂ. ಮಂಜು, ‘ವಿದ್ಯಾರ್ಥಿ ಜನತಾ ದಳದಿಂದ ಹಿಡಿದು 32 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾಮಟ್ಟದ ನಾಯಕರು ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಸಂಘಟನೆಗೆ ಒತ್ತು ನೀಡಲಾಗುವುದು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಲಾಗುವುದು’ ಎಂದು ಹೇಳಿದರು.
ಸದಸ್ಯತ್ವ ನೋಂದಣಿ ಹೆಚ್ಚಿಸಲು...
‘ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ದೊರೆಯುವಂತೆ ಮಾಡುವುದು ನಮ್ಮ ಪ್ರಮುಖ ಸವಾಲಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡುವ ಬಯಕೆ ನಮ್ಮೆಲ್ಲರದಾಗಿದೆ. ಇದಕ್ಕಾಗಿ ವಾರ್ಡ್ ಕ್ಷೇತ್ರ ಹಾಗೂ ನಗರ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಳ್ಳಲಾಗುವುದು. ವಿದ್ಯಾರ್ಥಿ ಯುವ ಘಟಕದಿಂದ ಹಿಡಿದು ಎಲ್ಲವನ್ನೂ ಸಂಘಟಿಸುವ ಕೆಲಸವನ್ನು ಮಾಡಲಾಗುವುದು’ ಎನ್ನುತ್ತಾರೆ ಎಸ್.ಬಿ.ಎಂ. ಮಂಜು. ‘ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಗುರಿ. ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಮೊದಲ ಹೆಜ್ಜೆಯಾಗಿ ಫೆ. 24ರಂದು ಬನ್ನೂರಿನ ಡೈರಿ ಸಮೀಪ ‘ಜನರೊಂದಿಗೆ ಜಾತ್ಯತೀತ ಜನತಾದಳ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಶ್ವಿನ್‌ಕುಮಾರ್ ತಿಳಿಸಿದರು.
ಹಂತ ಹಂತವಾಗಿ ನಗರದ ಎಲ್ಲ ವಿಭಾಗದ ಅಧ್ಯಕ್ಷರನ್ನೂ ಹೊಸದಾಗಿ ನೇಮಕ ಮಾಡಲಾಗುವುದು. ಪ್ರಮುಖರ ಸಮಿತಿ ರಚಿಸಲಾಗುವುದುಎಸ್ಬಿಎಂ ಮಂಜು, ಅಧ್ಯಕ್ಷ, ಮೈಸೂರು ನಗರ ಜಿಲ್ಲಾ ಘಟಕ ಜೆಡಿಎಸ್
ಗ್ರಾಮೀಣ ಪ್ರದೇಶದಲ್ಲಿ ಪಕ್ಷ ಸದೃಢಗೊಳಿಸಲು ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರೇರಣೆ ನೀಡಲಾಗುವುದು.ಎಂ.ಅಶ್ವಿನ್‌ಕುಮಾರ್, ಅಧ್ಯಕ್ಷ , ಮೈಸೂರು ಗ್ರಾಮಾಂತರ ಜಿಲ್ಲಾ ಘಟಕ ಜೆಡಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.