ADVERTISEMENT

ಗ್ರೀಕರನ್ನೂ ಪ್ರಭಾವಿಸಿದ್ದ ಕನ್ನಡಿಗರು: ಲೇಖಕ ಚಂದ್ರಶೇಖರ ಕಂಬಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 11:41 IST
Last Updated 26 ಜೂನ್ 2025, 11:41 IST
<div class="paragraphs"><p>ಚಂದ್ರಶೇಖರ ಕಂಬಾರ</p></div>

ಚಂದ್ರಶೇಖರ ಕಂಬಾರ

   

ಮೈಸೂರು: ‘ಹರಪ್ಪ– ಮೊಹೆಂಜೊದಾರೊದಷ್ಟೇ ಕರ್ನಾಟಕವೂ ಅತ್ಯಂತ ಪ್ರಾಚೀನ ದೇಶ. ಗ್ರೀಕರೂ ಸೇರಿದಂತೆ ವಿಶ್ವದ ಪ್ರಾಚೀನ ನಾಗರಿಕತೆಗಳನ್ನು ಕನ್ನಡಿಗರು ಪ್ರಭಾವಿಸಿದ್ದರು’ ಎಂದು ಲೇಖಕ ಚಂದ್ರಶೇಖರ ಕಂಬಾರ ಪ್ರತಿಪಾದಿಸಿದರು. 

ನಗರದ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗವು ಗುರುವಾರ ಆಯೋಜಿಸಿದ್ದ ‘ಕವಿರಾಜಮಾರ್ಗ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 

ADVERTISEMENT

‘ಗ್ರೀಕ ನಾಟಕವೊಂದರಲ್ಲಿ ‘ಬೇರೆ ಕೊಂಚ ಮಧು ಪಾತ್ರಕ್ಕೆ ಹಾಕಿ’ ಎಂಬ ಸಂಭಾಷಣೆ ಬರುತ್ತದೆ. ಇದು ಕೊಡುಕೊಳ್ವಿಕೆಯನ್ನು ಜಗತ್ತಿನ ಎಲ್ಲ ನಾಗರಿಕತೆಗಳೊಂದಿಗೆ ಕನ್ನಡಿಗರು ಸಾಧಿಸಿದ್ದರು ಎಂಬುದಕ್ಕೆ ಸಾಕ್ಷಿ. ದೇಶದ ಯಾವುದೇ ಭಾಷೆಗಿಂತ ಕನ್ನಡ ವಿಶ್ವವನ್ನು ಪ್ರಭಾವಿಸಿತ್ತು’ ಎಂದರು. 

‘ಗದುಗಿನ ಡೋಣಿಯಿಂದ ಚಿಕ್ಕನಾಯಕನಹಳ್ಳಿವರೆಗೂ ಪಚ್ಚೆಕಲ್ಲುಗಳ ಪ್ರದೇಶವಿದ್ದು, ಇಲ್ಲಿ ಬಂಗಾರ ಸಿಗುತ್ತಿತ್ತು. ಹರಪ್ಪ ಸಂಸ್ಕೃತಿಯವರು ಕನ್ನಡ ನಾಡಿನಿಂದ ಬಂಗಾರ ಆಮದು ಮಾಡಿಕೊಳ್ಳುತ್ತಿದ್ದರು. ಚಿನ್ನದ ನಾಡಿನ ಚರಿತ್ರೆಯನ್ನು ಪ್ರತಿಯೊಬ್ಬರು ಮಾತನಾಡಬೇಕಿದೆ’ ಎಂದು ಹೇಳಿದರು. 

‘ಮಹಾಭಾರತದಲ್ಲಿ ಔನ್ನತ್ಯಕ ದೇಶವೆಂದು ಕನ್ನಡ ನಾಡನ್ನು ಕರೆಯಲಾಗುತ್ತಿತ್ತು. ಎರಡು ಜನಾಂಗಗಳು ಒಂದಾದದ್ದನ್ನು ಜಮದಗ್ನಿ–ಯಲ್ಲಮ್ಮ–ಪರಶುರಾಮರ ಕಥೆ ಹೇಳುತ್ತದೆ. ಜಾತಿ ವ್ಯವಸ್ಥೆಗೂ ಇದು ಆಧಾರವಾಗಿದೆ. ಈ ಆದಿ ಕಥೆಯು ಆರ್ಯ– ದ್ರಾವಿಡ, ಉತ್ತರ– ದಕ್ಷಿಣದ ಬೆರಕೆಯನ್ನು ತೋರಿಸುತ್ತದೆ’ ಎಂದರು. 

‘ಗ್ರೀಕರ ನಾಲಿಗೆಯಲ್ಲಿ ಕನ್ನಡವು ನಲಿದಿದೆ. ಕನ್ನಡ ದೇಶದೊಂದಿಗೆ ಗ್ರೀಕರು ವ್ಯಾಪಾರ– ವ್ಯವಹಾರ ಇಟ್ಟುಕೊಂಡಿದ್ದರು. ಭಾರತದ ಇತಿಹಾಸದಲ್ಲಿ ಗ್ರೀಕರ ಕನ್ನಡ ತಿಳಿವಳಿಕೆಯು ದಾಖಲಾಗಿಲ್ಲ. ಅವರು ತಯಾರಿಸುವ ಮಧು (ವಿಸ್ಕಿ) ಇಲ್ಲಿ ಮಾರಾಟವಾದರೆ, ಇಲ್ಲಿಂದ ಚಿನ್ನ, ತಾಮ್ರ, ಬೆಳ್ಳಿ ಅಲ್ಲಿಗೊಯ್ಯುತ್ತಿದ್ದರು’ ಎಂದು ವಿವರಿಸಿದರು. 

ವಿಮರ್ಶಕ ಪ್ರೊ.ಪ್ರಧಾನ ಗುರುದತ್ತ ಮಾತನಾಡಿ, ‘ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ನಟ ಕಮಲ್‌ಹಾಸನ್‌ ವಾದ ಪೊಳ್ಳು. ಕನ್ನಡ ಸಾಹಿತ್ಯ ಸಂಸ್ಕೃತದ ಪಡಿನೆಳಲ್ಲ ಎಂಬುದನ್ನು ಕವಿರಾಜಮಾರ್ಗಕಾರನಿಂದ ನಾವು ಅರ್ಥಮಾಡಿಕೊಳ್ಳಬೇಕು’ ಎಂದರು. 

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಎಂ.ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಬಿ.ಪ್ರಭುಸ್ವಾಮಿ ಇದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.