
ಮೈಸೂರು: ‘ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವಷ್ಟು ಆದ್ಯತೆಯನ್ನು ಕರ್ನಾಟಕ ಲೇಖಕಿಯರ ಸಂಘಕ್ಕೆ ಕೊಡುತ್ತಿಲ್ಲವೇಕೆ?’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ ಕೇಳಿದರು.
ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಲೇಖಕಿಯರ ಟ್ರಸ್ಟ್, ಕನ್ನಡ ಲೇಖಕಿಯರ ಸಂಘ ಹಾಗೂ ಕಸಾಪ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ನಮ್ಮ ಸಂಘವೀಗ ಚಿಕ್ಕದಾದ ಜಾಗದಲ್ಲಿ ಕೆಲಸ ಮಾಡುತ್ತಿದೆ. ಕಸಾಪ ಜಿಲ್ಲಾ ಘಟಕಕ್ಕೆ ಇರುವಷ್ಟು ಸ್ಥಳಾವಕಾಶವೂ ಇಲ್ಲ. ಜಾಗ ಹಾಗೂ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಹಿಂದಿನಿಂದಲೂ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಸ್ಪಂದನೆ ದೊರೆತಿಲ್ಲ. ಮುಂದಿನ ದಿನಗಳಲ್ಲಿ ಗಟ್ಟಿ ಧ್ವನಿಯಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸುತ್ತೇವೆ. ಇದಕ್ಕೆ ಲೇಖಕಿಯರು ದನಿಗೂಡಿಸಬೇಕು’ ಎಂದರು.
ಸಮಾನ ಅವಕಾಶ ಕೊಡಿ: ‘ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಗೋಷ್ಠಿಗಳಲ್ಲೂ ಲೇಖಕಿಯರಿಗೆ ಸಮಾನ ಅವಕಾಶ ಕೊಡಬೇಕು. ಮಹಿಳಾ ಗೋಷ್ಠಿಯಷ್ಟೆ ಏಕೆಂದು ಪರಿಷತ್ತನ್ನು ಕೇಳುತ್ತೇವೆ’ ಎಂದು ತಿಳಿಸಿದರು.
‘ಲೇಖಕಿಯರಿಂದ ಸಾಕಷ್ಟು ಕೃತಿಗಳು ಬಂದಿವೆ. ಆದರೆ, ನಮಗೇಕೆ ‘ಪಂಪ’ ಪ್ರಶಸ್ತಿ ಕೊಟ್ಟಿಲ್ಲ?’ ಎಂದು ಕೇಳಿದರು.
‘ಲೇಖಕಿಯರು ಬರವಣಿಗೆ ಜೊತೆಗೆ ಮಾತನಾಡಬೇಕು. ಪ್ರಸ್ತುತಪಡಿಸಿಕೊಳ್ಳುವಲ್ಲಿ ಹಿಂದೆ ಬೀಳಬಾರದು. ನಮಗಾಗಿ (ಸ್ಪೇಸ್) ಅಗತ್ಯವಾದ ರಾಜಕಾರಣ, ವಿಮರ್ಶೆ ಹಾಗೂ ಬರವಣಿಗೆಯನ್ನು ಮಾಡಲೇಬೇಕಾಗಿದೆ’ ಎಂದರು.
6 ತಿಂಗಳೊಳಗೆ ಬೈಲಾ: ‘ಆರು ತಿಂಗಳ ಒಳಗೆ ಕಾರ್ಯಕ್ರಮಗಳ ಜೊತೆಗೆ ಬೈಲಾ (ಉಪವಿಧಿ) ಸಿದ್ಧಪಡಿಸಲಾಗುವುದು. ಸದಸ್ಯರಿಗೆ ಅಸ್ತಿತ್ವದ ಪ್ರಜ್ಞೆ ತಂದುಕೊಡುವ ಕೆಲಸ ಮಾಡಲಾಗುವುದು. ಪ್ರಾದೇಶಿಕವಾಗಿಯೂ ಅಸ್ತಿತ್ವದ ಬೆಂಬಲವನ್ನು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಮಹಿಳಾ ಪರವಾದ ಹೋರಾಟ ಬೆಂಬಲಿಸಲಾಗುವುದು’ ಎಂದು ತಿಳಿಸಿದರು.
‘ಹಿಂದೆ, ಮಹಿಳಾ ಸಾಹಿತ್ಯವನ್ನು ಅಡುಗೆ ಮನೆಯ ಸಾಹಿತ್ಯ ಎಂದು ಬಿಂಬಿಸಿ ಮೂಲೆಗುಂಪು ಮಾಡಲಾಗಿತ್ತು. ನಮ್ಮ ಬರವಣಿಗೆ ಓದುವ ಮನಸ್ಸು ಪುರುಷರಿಗೆ ಇರಲಿಲ್ಲ. ಓದಲಾಗದಂತಹ ರಾಜಕಾರಣವನ್ನು ಕಟ್ಟಲಾಗಿತ್ತು. 1990ರ ದಶಕದ ನಂತರ ಹೆಣ್ಣು ಮಕ್ಕಳೇ ವಿಮರ್ಶೆ ಮಾಡುತ್ತಿದ್ದಾರೆ. ಈಗ ಯಾರೂ ಮಹಿಳಾ ಸಾಹಿತ್ಯದ ಬಗ್ಗೆ ಹಗುರವಾಗಿ ಮಾತನಾಡಲು ಆಗುವುದಿಲ್ಲ; ನಾವು ಬಿಡುವುದೂ ಇಲ್ಲ’ ಎಂದರು.
ಜಿಲ್ಲಾ ಹಂತಕ್ಕೆ ತರಬೇಕಾಗಿದೆ: ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಕನ್ನಡ ಲೇಖಕಿಯರ ಟ್ರಸ್ಟ್ ಉಪಾಧ್ಯಕ್ಷೆ ಮಂಜುಳಾ ಮಾನಸ, ‘ಬೆಂಗಳೂರಿನಲ್ಲಿ ನಿಂತಿರುವ ಸಂಘದ ರಥವನ್ನು ಜಿಲ್ಲಾಮಟ್ಟಕ್ಕೆ ಎಳೆದು ತರಬೇಕಾಗಿದೆ. ಹೊಸ ತಲೆಮಾರಿನ ಲೇಖಕಿಯರನ್ನು ಬೆಳಕಿಗೆ ತರಬೇಕಾಗಿದೆ’ ಎಂದು ಹೇಳಿದರು.
ಲೇಖಕಿ ಎಂ.ಎಸ್. ವೇದಾ ಅಭಿನಂದನಾ ಭಾಷಣ ಮಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಅಧ್ಯಕ್ಷೆ ಉಷಾ ನರಸಿಂಹನ್, ಕನ್ನಡ ಲೇಖಕಿಯರ ಟ್ರಸ್ಟ್ ಕಾರ್ಯದರ್ಶಿಗಳಾದ ಮೀನಾ ಮೈಸೂರು ಹಾಗೂ ಹೇಮಾ ನಂದೀಶ್ ಪಾಲ್ಗೊಂಡಿದ್ದರು.