ADVERTISEMENT

ಹುಣಸೂರು: ನಾಮಫಲಕ ಕನ್ನಡದಲ್ಲಿ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:52 IST
Last Updated 17 ಸೆಪ್ಟೆಂಬರ್ 2025, 2:52 IST
ಹುಣಸೂರು ನಗರದಲ್ಲಿ ಕರವೇ ಕಾರ್ಯಕರ್ತರು ನಗರದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಅಂಗಡಿಗಳ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸದಿರುವುದನ್ನು ಖಂಡಿಸಿ ಪ್ರತಿಭಟಿಸಿ, ತಹಶೀಲ್ದಾರ್‌ ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು
ಹುಣಸೂರು ನಗರದಲ್ಲಿ ಕರವೇ ಕಾರ್ಯಕರ್ತರು ನಗರದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಅಂಗಡಿಗಳ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸದಿರುವುದನ್ನು ಖಂಡಿಸಿ ಪ್ರತಿಭಟಿಸಿ, ತಹಶೀಲ್ದಾರ್‌ ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು   

ಹುಣಸೂರು: ಅಂಗಡಿ ನಾಮಫಲಕಗಳು ಶೇ 60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರದ ಆದೇಶವಿದ್ದರೂ ಇಂದಿಗೂ ಹುಣಸೂರು ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಂಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್‌ ಆಕ್ರೋಶ ವ್ಯಕ್ತಪಡಿಸಿದರು. 

ನಗರದಲ್ಲಿ ಕರವೇ(ಶಿವರಾಮೇಗೌಡ ಬಣ) ಕಾರ್ಯಕರ್ತರು ಸಂವಿಧಾನ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಪುರುಷೋತ್ತಮ್‌, ಕನ್ನಡ ಭಾಷೆ, ನೆಲ, ಜಲದ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆ ಇಲ್ಲ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿದೇಯಕ 2024ರ ಅನ್ವಯ ಸರ್ಕಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿ ಸೇರಿ ಅಂಗಡಿಗಳ ನಾಮಫಲಕದಲ್ಲಿ ಕನ್ನಡದ ಹೆಸರು ಶೇ 60:40 ಅನುಪಾತದಲ್ಲಿ ಇರಬೇಕೆಂದು ಸೂಚಿಸಿತ್ತಾದರೂ ಹುಣಸೂರು ತಾಲ್ಲೂಕಿನಲ್ಲಿ ಈವರೆಗೂ ಈ ಕಾಯ್ದೆ ಅನುಷ್ಠಾನಕ್ಕೆ ಬಂದಿಲ್ಲ ಎಂದರು.

ADVERTISEMENT

ಇಂಗ್ಲಿಷ್‌ ಭಾಷೆಗೆ ಆದ್ಯತೆ ನೀಡಿರುವ ನಾಮಫಲಕಗಳು ರಾರಾಜಿಸುತ್ತಿವೆ. ಕನ್ನಡ ನಾಡಿನಲ್ಲಿ ಇಂಗ್ಲಿಷ್‌ ಭಾಷೆಗೆ ಸಿಗುತ್ತಿರುವ ಆದ್ಯತೆ ಮಾತೃಭಾಷೆಗೆ ಸಿಗುತ್ತಿಲ್ಲ. ಕನ್ನಡಿಗರು ಸ್ವಾಭಿಮಾನದ ಬದುಕು ನಡೆಸಬೇಕಿದ್ದರೂ ಇಂದಿಗೂ ಇಂಗ್ಲಿಷ್‌ ಆಳ್ವಿಕೆ ಸಂಸ್ಕೃತಿ ಜೀವಂತವಾಗಿಟ್ಟುಕೊಂಡಿರುವುದು ತಲೆ ತಗ್ಗಿಸುವ ಸಂಗತಿ ಎಂದರು.

ಸ್ಥಳೀಯವಾಗಿ ಕನ್ನಡದಲ್ಲಿ ನಾಮಫಲಕ ಇರುವ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತ ನಗರಸಭೆ ಮತ್ತು ಶಿಕ್ಷಣ ಇಲಾಖೆ ಯಾವುದೇ ಚಕಾರವೆತ್ತದೆ ಮೌನಕ್ಕೆ ಶರಣಾಗಿದ್ದು, ಇಂಗ್ಲಿಷ್‌ ಭಾಷೆಯ ನಾಮಫಲಕಗಳು ಹೆಚ್ಚಾಗಲು ಕಾರಣವಾಗಿದೆ. ಈ ಎರಡೂ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸರ್ಕಾರದ ಆದೇಶವನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕರವೆ ಮುಂದಿನ ದಿನದಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಮಂಜುನಾಥ್‌, ಕನ್ನಡ ಭಾಷೆ ಕಡ್ಡಾಯವಾಗಿ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ಥಳಿಯ ಆಡಳಿತದ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ರಮೇಶ್‌, ಶ್ರೀನಿವಾಸ್‌, ರಫಿಕ್‌ ಅಹಮ್ಮದ್‌, ಜಬಿ, ಮುನ್ನಾ, ರಸೋಲ್‌, ಸ್ವಾಮಿ ಹೊಸಕೋಟೆ, ರಜಿತ್‌, ಜಯಕ್ಕ, ನಾಗರಾಜ್‌, ಸಂಜೀವ್‌ ಕುಮಾರ್‌, ಸನಾವುಲ್ಲಾ, ಚಂದ್ರು ವಡ್ಡಂಬಾಳು, ಬೆಳ್ತೂರು ವೆಂಕಟೇಶ್‌, ರಾಯನಹಳ್ಳಿ ಸ್ವಾಮಿ, ಮಹೇಶ್‌ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.