ADVERTISEMENT

ಮೈಸೂರು ವಿ.ವಿ; ತಿಂಗಳಾದರೂ ಸಿಗದ ಪದವಿ ಕನ್ನಡ ಪಠ್ಯ!

ಪದವಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರದಾಟ

ಆರ್.ಜಿತೇಂದ್ರ
Published 20 ಆಗಸ್ಟ್ 2025, 6:20 IST
Last Updated 20 ಆಗಸ್ಟ್ 2025, 6:20 IST
ವಿಶ್ವವಿದ್ಯಾಲಯ ಲಾಂಛನ
ವಿಶ್ವವಿದ್ಯಾಲಯ ಲಾಂಛನ   

ಮೈಸೂರು: ಕಾಲೇಜುಗಳು ಶುರುವಾಗಿ‌ ತಿಂಗಳಾದರೂ ಮೈಸೂರು ವಿಶ್ವವಿದ್ಯಾಲಯದ ಪದವಿ ಮೂರನೇ ಸೆಮಿಸ್ಟರ್‌ನ ಕೆಲವು ವಿಷಯಗಳಿಗೆ ಇನ್ನೂ ಕನ್ನಡ ಪಠ್ಯಪುಸ್ತಕವೇ ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿಗಳು– ಅಧ್ಯಾಪಕರು ಸುಮ್ಮನೇ ಕಾಲಾಹರಣ ಮಾಡುವಂತಾಗಿದೆ.

ಮೈಸೂರು ವಿವಿ ಸೇರಿ ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಕಳೆದ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಂಡಿದೆ. ಅದಕ್ಕೆ ಅನುಗುಣವಾಗಿ ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಸಿದ್ಧಪಡಿಸಿ, ಮುದ್ರಿಸಿ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ. ಇಂಗ್ಲಿಷ್‌ ಭಾಷಾ ವಿಷಯದ ಪಠ್ಯ ಕೈ ಸೇರಿದ್ದರೂ, ಕನ್ನಡದ ವಿಷಯದಲ್ಲಿ ಮಾತ್ರ ವಿಳಂಬವಾಗಿದೆ.

ಕನ್ನಡ ಭಾಷೆ ಪಠ್ಯಪುಸ್ತಕದ ರಚನೆಗಾಗಿ ಹಾಸನದ ಹೇಮಗಂಗೋತ್ರಿಯ ಪ್ರೊ. ಎಂ.ಎಸ್. ಶೇಖರ್ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ರಚನೆಯಾಗಿದ್ದು, ಎಸ್‌ಇಪಿಗೆ ಅನುಗುಣವಾಗಿ ಪಠ್ಯಕ್ರಮ ರಚಿಸಿಕೊಡಲು ಜವಾಬ್ದಾರಿ ನೀಡಲಾಗಿತ್ತು. ಬೆಟ್ಟೇಗೌಡ, ಚಿಕ್ಕಮಗಳೂರು ಗಣೇಶ್, ಇಂದಿರಮ್ಮ ಈ ಸಮಿತಿಯಲ್ಲಿದ್ದಾರೆ.

ADVERTISEMENT

ಯಾವುದಕ್ಕೆಲ್ಲ ಸಮಸ್ಯೆ: ಸದ್ಯ ಮೊದಲ ಸೆಮಿಸ್ಟರ್‌ನ ಪಠ್ಯಗಳು ಲಭ್ಯವಿದ್ದರೂ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ವಿಷಯದ ಪಠ್ಯವು ಮುದ್ರಣ ಹಂತದಲ್ಲೇ ಇದೆ.

ಈ ಸೆಮಿಸ್ಟರ್‌ನ ಕಲಾ ಗಂಗೋತ್ರಿ–3 (ಬಿ.ಎ) ಹಾಗೂ ವಿಜ್ಞಾನ ಗಂಗೋತ್ರಿ–3 (ಬಿ.ಎಸ್ಸಿ) ಕನ್ನಡ ಭಾಷಾ ಪಠ್ಯಗಳು ವಾರದ ಹಿಂದಷ್ಟೇ ವಿದ್ಯಾರ್ಥಿಗಳ ಕೈ ಸೇರಿದ್ದು, ಸದ್ಯ ತರಗತಿಗಳು ಆರಂಭವಾಗಿವೆ. ಆದರೆ ವಾಣಿಜ್ಯ ಗಂಗೋತ್ರಿ–3 (ಬಿ.ಕಾಂ), ನಿರ್ವಹಣಾ ಗಂಗೋತ್ರಿ–3 (ಬಿಬಿಎ) ಹಾಗೂ ಗಣಕ ಗಂಗೋತ್ರಿ–3 (ಬಿಸಿಎ) ಪಠ್ಯಗಳು ಮಾರುಕಟ್ಟೆಗೆ ಬರಬೇಕಿದೆ. ಇನ್ನೂ ಮುದ್ರಣ ಹಂತದಲ್ಲಿಯೇ ಬಾಕಿ ಉಳಿದಿದೆ.

‘ಜೂನ್ 31ರಂದು ಪದವಿ ಮೂರನೇ ಸೆಮಿಸ್ಟರ್ ತರಗತಿಗಳು ಆರಂಭವಾಗಿವೆ. ಒಂದೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಅರ್ಧದಷ್ಟು ಪಠ್ಯ ಮುಗಿದು, 10 ಅಂಕಗಳ ಕಿರು ಪರೀಕ್ಷೆ (ಸಿ–1) ಸಹ ನಡೆಯಬೇಕಿತ್ತು. ಆದರೆ ಇನ್ನೂ ಪಠ್ಯವೇ ದೊರಕಿಲ್ಲ. ಹೀಗಾಗಿ ಸುಮ್ಮನೆ ಕಾಲಾಹರಣವಾಗುತ್ತಿದೆ’ ಎಂದು ಕಾಲೇಜುಗಳ ಕನ್ನಡ ಅಧ್ಯಾಪಕರು ಬೇಸರಿಸುತ್ತಾರೆ.

‘ಈ ವರ್ಷ ಮೂರನೇ ಸೆಮಿಸ್ಟರ್‌ಗೆ ಹೊಸ ಪಠ್ಯಕ್ರಮವಿದೆ. ಪಠ್ಯಕ್ಕೆ ಅನುಗುಣವಾಗಿ ಪಾಠ–ಪರೀಕ್ಷೆ ನಡೆಸಬೇಕು. ಮಾದರಿ ಪ್ರಶ್ನೋತ್ತರ ಮಾಲಿಕೆ ಸೇರಿ ಯಾವ ಸಾಮಗ್ರಿಯೂ ಲಭ್ಯವಿಲ್ಲ. ಎರಡೂವರೆ ತಿಂಗಳು ಕಳೆದರೆ ಚಾತುರ್ಮಾಸ ಪರೀಕ್ಷೆಯೇ ಬರುತ್ತದೆ’ ಎಂದು ವಿವರಿಸುತ್ತಾರೆ.

ಪಠ್ಯದಲ್ಲೂ ದೋಷ: ಈಗಾಗಲೇ ಪ್ರಕಟವಾಗಿರುವ ‘ಕಲಾಗಂಗೋತ್ರಿ–3’ ಹಾಗೂ ‘ವಿಜ್ಞಾನ ಗಂಗೋತ್ರಿ–3’ ಪಠ್ಯದಲ್ಲೂ ಹಲವು ದೋಷಗಳು ಉಳಿದಿದ್ದು, ನಂತರ ಎಚ್ಚೆತ್ತು ಸರಿಪಡಿಸಲಾಗಿದೆ. ವಿಜ್ಞಾನ ಗಂಗೋತ್ರಿ–3 ಮುಖಪುಟದಲ್ಲಿ ಸಂಪಾದಕರ ಹೆಸರು ಬದಲಾಗಿದ್ದು, ಅದಕ್ಕೆ ಸ್ಟಿಕ್ಕರ್ ಅಂಟಿಸಿ ಕೊಡಲಾಗುತ್ತಿದೆ.

ಪದವಿ ತರಗತಿಗಳ ಕನ್ನಡ ಭಾಷೆಯ ಎಲ್ಲ ಪಠ್ಯವನ್ನೂ ಈಗಾಗಲೇ ಮುದ್ರಿಸಿ ಹಂಚಲಾಗುತ್ತಿದೆ. ಕಾಲೇಜುಗಳಲ್ಲಿ ಅಧ್ಯಾಪಕರಿಂದ ಪಾಠವೂ ನಡೆಯುತ್ತಿದೆ
ಎಂ.ಎಸ್. ಶೇಖರ್ ಅಧ್ಯಕ್ಷ ಮೈಸೂರು ವಿ.ವಿ. ಕನ್ನಡ ಅಧ್ಯಯನ ಮಂಡಳಿ
ಪಠ್ಯಪುಸ್ತಕ ಸಮಿತಿಯು ಪಠ್ಯಕ್ರಮ ನೀಡಿದ ಕೂಡಲೇ ಮುದ್ರಣಕ್ಕೆ ಕ್ರಮ ವಹಿಸಲಾಗಿದೆ. ಕೆಲವು ಪುಸ್ತಕಗಳು ಸದ್ಯ ಮುದ್ರಣದಲ್ಲಿದ್ದು ಈ ವಾರವೇ ವಿದ್ಯಾರ್ಥಿಗಳ ಕೈ ಸೇರಲಿವೆ
ನಂಜಯ್ಯ ಹೊಂಗನೂರು ನಿರ್ದೇಶಕ ಮೈಸೂರು ವಿ.ವಿ. ಪ್ರಸಾರಾಂಗ

ವಿಳಂಬ ಆಗಿದ್ದೆಲ್ಲಿ?:

ಸಕಾಲದಲ್ಲಿ ಪಠ್ಯಪುಸ್ತಕಗಳು ತಲುಪದೇ ಇರುವುದಕ್ಕೆ ಪಠ್ಯಪುಸ್ತಕ ಸಮಿತಿಯತ್ತಲೇ ಬೆರಳು ಮಾಡಲಾಗುತ್ತಿದೆ. ವಾಸ್ತವದಲ್ಲಿ ತರಗತಿಗಳು ಆರಂಭ ಆಗುವ ಮೊದಲೇ ಸಮಿತಿಯು ಪಠ್ಯ ಅಂತಿಮಗೊಳಿಸಿ ಅದರ ಪ್ರತಿಯನ್ನು ಪ್ರಸಾರಾಂಗಕ್ಕೆ ತಲುಪಿಸಿ ಮುದ್ರಣ ಕಾರ್ಯ ನಡೆಯಬೇಕಿತ್ತು. ಆದರೆ ಮೂಲಗಳ ಪ್ರಕಾರ ಜುಲೈ ಮಧ್ಯಭಾಗದಲ್ಲಿ ಸಮಿತಿಯು ಪಠ್ಯದ ಪ್ರತಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದೆ ಎನ್ನಲಾಗಿದೆ. ‘ಪಠ್ಯಕ್ರಮ ನೀಡಿದ ಕೂಡಲೇ ಸಕಾಲಕ್ಕೆ ಮುದ್ರಣ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇವೆ. ಸಮಿತಿಯಿಂದ ಪಠ್ಯ ಸಿಗುವುದು ವಿಳಂಬವಾಗಿದೆ. ಗಣಕ ಗಂಗೋತ್ರಿ–3 ಪಠ್ಯ ವಾರದ ಹಿಂದಷ್ಟೇ ನಮ್ಮ ಕೈ ಸೇರಿತು. ಈಗಾಗಲೇ ಮುದ್ರಣ ಕಾರ್ಯ ನಡೆದಿದ್ದು ವಾರಾಂತ್ಯದಲ್ಲಿ ಸಿಗಲಿವೆ’ ಎನ್ನುತ್ತಾರೆ ಪ್ರಸಾರಾಂಗದ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.