ADVERTISEMENT

ಚಾಲಕನ ಭಾಷಾ ಪ್ರೇಮ: ಕನ್ನಡ ರಥವಾದ ಕೆಎಸ್‌ಆರ್‌ಟಿಸಿ ಬಸ್

ರವಿಕುಮಾರ್
Published 2 ನವೆಂಬರ್ 2025, 2:52 IST
Last Updated 2 ನವೆಂಬರ್ 2025, 2:52 IST
ಸಾರಿಗೆ ಬಸ್ ಅನ್ನು ಸಿಂಗಾರಗೊಳಿಸಿರುವುದು
ಸಾರಿಗೆ ಬಸ್ ಅನ್ನು ಸಿಂಗಾರಗೊಳಿಸಿರುವುದು   

ಹಂಪಾಪುರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎಚ್.ಡಿ. ಕೋಟೆಯಿಂದ ಹಂಪಾಪುರ ಮಾರ್ಗವಾಗಿ ಮೈಸೂರು ತೆರಳುವ ಕೆಎಸ್‌ಆರ್‌ಟಿಸಿ ಬಸ್ ಅನ್ನು ಚಾಲಕ ನಿಂಗಪ್ಪ ಎಸ್. ಜಮ್ಯಾಳ ಕನ್ನಡಮಯವಾಗಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಮೂಲಕ  ಪ್ರಯಾಣಿಕರ ಮನ ಗೆದ್ದಿದ್ದಾರೆ.

ಎಚ್.ಡಿ. ಕೋಟೆ ಪಟ್ಟಣದ ಬಸ್ ಘಟಕದ ಬಸ್ ಅನ್ನು ಅಲಂಕರಿಸಿ, ‌ಮುಂಭಾಗ ಹಳದಿ ಮತ್ತು ಕೆಂಪು ಮಿಶ್ರಿತ ಚೆಂಡು ಹೂವಿನಿಂದ ಅಲಂಕರಿಸಿದ್ದಾರೆ. ಬಸ್‌ ಒಳಗೆ ಹಾಗೂ ಹೊರಗೆ ಕನ್ನಡ ಬಾವುಟಗಳನ್ನು ಇಟ್ಟು ಸಿಂಗರಿಸಿದ್ದಾರೆ. ಪ್ರತಿ ಕಿಟಕಿಯಲ್ಲಿ  ಮಹನೀಯರಾದ ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕಿತ್ತೂರ ರಾಣಿ ಚನ್ನಮ್ಮ, ಕೃಷ್ಣದೇವರಾಯ, ಜಯಚಾಮರಾಜೇಂದ್ರ ಒಡೆಯರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಗಿರೀಶ್‌ ಕಾರ್ನಾಡ್, ಕೀರ್ತನಕಾರರಾದ ಕನಕದಾಸ, ಪುರಂದರದಾಸ, ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಆದಿಕವಿ ಪಂಪ, ರನ್ನ, ಜನ್ನ ಸೇರಿದಂತೆ ಹಲವು ಸಾಹಿತಿಗಳು ಹಾಗೂ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. 

ರಾಜ್ಯದ ಪಾರಂಪರಿಕ ತಾಣಗಳು, ಪ್ರವಾಸಿ ತಾಣಗಳೂ ಬಸ್‌ನಲ್ಲಿ ಸ್ಥಾನಪಡೆದಿವೆ. ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ನಾಲ್ಕು ವರ್ಷದಿಂದ ಪ್ರತಿ ವರ್ಷ ಬಸ್ ಅನ್ನು ಕನ್ನಡಮಯವಾಗಿಸುತ್ತಿರುವ ಚಾಲಕ ನಿಂಗಪ್ಪ ಹುಬ್ಬಳ್ಳಿಯ ನಿವಾಸಿ. 16 ವರ್ಷಗಳಿಂದ ಎಚ್.ಡಿ. ಕೋಟೆ ಬಸ್ ಘಟಕದಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಪ್ರತಿ ತಿಂಗಳು ಬರುವ ವೇತನದಲ್ಲಿ ಸ್ವಲ್ಪ ಹಣವನ್ನು ರಾಜ್ಯೋತ್ಸವದಂದು ಬಸ್ ಸಿಂಗಾರಗೊಳಿಸಲು ಕೂಡಿಡುತ್ತೇನೆ. ಈ ಬಾರಿ ಕೂಡಿಟ್ಟ ₹ 30 ಸಾವಿರದಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದೇನೆ. ಎಲ್ಲರೂ ಕನ್ನಡಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಸದಾಶಯದಿಂದ ಈ ಕಾರ್ಯವನ್ನು ಪ್ರತಿ ವರ್ಷ ಮಾಡುತ್ತಿದ್ದೇನೆ’ ಎಂದು ಚಾಲಕ ನಿಂಗಪ್ಪ ಎಸ್. ಜಮ್ಯಾಳ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ತಾಲ್ಲೂಕು ಕೇರಳ ಗಡಿ ಭಾಗದಲ್ಲಿರುವುದರಿಂದ ಮಲಯಾಳದ ಪ್ರಭಾವವೂ ಇದೆ. ಇಂತಹ ಸಮಯದಲ್ಲಿ ಚಾಲಕ ನಿಂಗಪ್ಪ ಅವರು ಕನ್ನಡ ಪ್ರೇಮ ಮೆರೆಯುತ್ತಿರುವುದು ಸಂತಸದ ವಿಷಯ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್ ಹೇಳಿದರು.

ಚಾಲಕ ನಿಂಗಪ್ಪ ಎಸ್.ಜಮ್ಯಾಳ
ನಮ್ಮ ಘಟಕದ ಚಾಲಕರು ಸ್ವಯಂ ಪ್ರೇರಣೆಯಿಂದ ರಾಜ್ಯೋತ್ಸವದಲ್ಲಿ ಬಸ್‌ ಅನ್ನು ಅಲಂಕಾರ ಮಾಡುತ್ತಾ ಬಂದಿದ್ದಾರೆ. ಇಂತಹ ಕನ್ನಡ ಅಭಿಮಾನಿಗಳಿಗೆ ಘಟಕದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ
ಮಹದೇವಪ್ರಸಾದ್ ವ್ಯವಸ್ಥಾಪಕ ಎಚ್.ಡಿ. ಕೋಟೆ ಬಸ್ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.