ಮೈಸೂರು: ಮೈಸೂರಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದಿದ ಹುಡುಗರು ವಿಶ್ವದ ಕ್ರೀಡಾಪ್ರಿಯರಿಗೆ ‘ಪ್ಲೇಯೊ’ ಆ್ಯಪ್ ರೂಪಿಸಿದ್ದು, ವಿಶ್ವದಾದ್ಯಂತ 20 ಲಕ್ಷ ಬಳಕೆದಾರರನ್ನು ಹೊಂದಿದೆ. ಇದೀಗ ಕನ್ನಡ ಆವೃತ್ತಿಯಲ್ಲೂ ಆ್ಯಪ್ ತರುತ್ತಿದ್ದಾರೆ!
ನಗರದ ದಾನಿಶ್ ಸುಹೈಲ್, ಕಾರ್ತಿಕ್ ಐಜೂರ್, ಎ.ಎನ್.ಉಮಾಶಂಕರ್ ಅವರು ಆ್ಯಪ್ ಮೂಲಕ ಬೆಂಗಳೂರಿನಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿದರು. ರಾಜ್ಯದ ಎಲ್ಲರೂ ಚಿಕ್ಕಂದಿನಲ್ಲಿ ಆಡಿದ ಆಟಗಳನ್ನು ಆಡುವಂತಾಗಬೇಕು ಎಂಬ ಆಲೋಚನೆ ಬಂದದ್ದೇ, ಆ್ಯಪ್ ರೂಪಿಸಿದರು. ಇದೀಗ ಎಲ್ಲ ಗಡಿಗಳನ್ನು ಮೀರಿ ಕ್ರೀಡಾಪ್ರೇಮಿಗಳು ಒಂದಾಗುವಂತೆ ಮಾಡಿದ್ದಾರೆ.
‘ಪ್ಲೇಯೊ’ನಲ್ಲಿ 25 ಮಂದಿ ಎಂಜಿಯರ್‌ಗಳು ಕೆಲಸ ಮಾಡುತ್ತಿದ್ದು, ಬಹುತೇಕರು ಕನ್ನಡಿಗರು ಎಂಬುದು ವಿಶೇಷ!
‘ಬ್ಯಾಡ್ಮಿಂಟನ್ ಆಟ ಇಷ್ಟವಿದ್ದರೆ ಆಡಲು ಸರಿಸಮನಾದ ಎದುರಾಳಿ, ಅಂಗಳ, ಬಯಸಿದ ಸಮಯ ಆಗಬೇಕು. ಪ್ಲೇಯೊ ಆ್ಯಪ್‌ನಲ್ಲಿ ಇವೆಲ್ಲ ಮಾಹಿತಿ ಇರುತ್ತದೆ. ಬುಕ್ ಮಾಡಿದರೇ ನಾವಿರುವ ಜಾಗದ ಸಮೀಪದ ಅಂಗಳದಲ್ಲಿಯೇ ನಮ್ಮ ಇಷ್ಟದ ಆಟ ಆಡಬಹುದು. ಮೈಸೂರಿನಲ್ಲಿ 10 ಸಾವಿರ ಬಳಕೆದಾರರಿದ್ದಾರೆ’ ಎಂದು ದಾನಿಶ್ ಸುಹೈಲ್ ಹೇಳಿದರು.
‘ನನ್ನ ಪೋಷಕರು ಮೈಸೂರಿನವರು. ತಾಯಿ ಸಬೀಹಾ ಬಾನು ಪ್ರಸಾರ ಭಾರತಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿದ್ದರು. ನನ್ನ ಶಿಕ್ಷಣ ಕನ್ನಡದಲ್ಲೇ ಆಗಬೇಕು ಎಂದು ಓದಿಸಿದರು. ಶಾಲಾ ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ಮೈಸೂರು ಮತ್ತು ಕನ್ನಡ ನನ್ನನ್ನು ಬೆಳೆಸಿದೆ. ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರಿನಲ್ಲಿ ನವೋದ್ಯಮ ಆರಂಭಿಸಿದೆ. ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದಕ್ಕಾಗಿ ಸ್ನೇಹಿತರೊಂದಿಗೆ ಪ್ಲೇಯೊ ಹೊರತಂದೆ’ ಎಂದರು.
‘ದೊಡ್ಡವರಾಗುತ್ತಾ ಸ್ನೇಹಿತರು, ಗೆಳೆಯರು ಸಿಗದೆ ಆಟಗಳನ್ನು ಮರೆಯುತ್ತಾರೆ. ನಗರಗಳಲ್ಲಿ ದುಡಿಯುತ್ತಿರುವ ಕ್ರೀಡಾಸಕ್ತಿ ಇರುವ ಬಹುಭಾಷಿಕರು ಆ್ಯಪ್‌ನಿಂದ ಸ್ನೇಹಿತರಾಗುತ್ತಿರುವುದು ಮತ್ತಷ್ಟು ಹುಡುಕಾಟಕ್ಕೆ ದಾರಿ ತೋರಿದೆ. ಬಂಗಾಳಿ, ಹಿಂದಿ, ತಮಿಳು, ಮಲಯಾಳ ಸೇರಿದಂತೆ ಭಾರತೀಯ ಭಾಷೆಗಳ ಯುವ ಸಮುದಾಯ ಆ್ಯಪ್ ಮೂಲಕ ಒಂದಾಗುತ್ತಿದೆ. ಟೆನಿಸ್, ಬ್ಯಾಡ್ಮಿಂಟನ್, ಫುಟ್‌ಬಾಲ್ ಹಲವು ಆಟ ಆಡುತ್ತಿದ್ದಾರೆ. ಈ ಮೂಲಕ ಕನ್ನಡವೂ ಬೆಳೆಯುತ್ತಿದೆ ಎಂಬುದೇ ಖುಷಿ’ ಎಂದರು.
ಪ್ಲೇಯೊ ಇದೀಗ ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ನಗರಗಳಲ್ಲಿ ವಿಸ್ತರಿಸಿದೆ. ಹೈದರಾಬಾದ್, ಚೆನ್ನೈ, ದೆಹಲಿ, ಕೊಚ್ಚಿ, ತಿರುವನಂತಪುರ, ಪುಣೆ ಸೇರಿದಂತೆ ಭಾರತದ 30ಕ್ಕೂ ಹೆಚ್ಚು ನಗರಗಳು, ದೂರದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ, ಅಬುಧಾಬಿ ಮತ್ತು ಶಾರ್ಜಾ, ಆಸ್ಟ್ರೇಲಿಯಾದ ವಿವಿಧ ಭಾಷಿಕರನ್ನು ಕ್ರೀಡೆ ಮೂಲಕ ಒಂದಾಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.