ADVERTISEMENT

ಪಿರಿಯಾಪಟ್ಟಣ: ಕಾಂಗ್ರೆಸ್‌–ಜೆಡಿಎಸ್‌ ನೇರ ಹಣಾಹಣಿ

ಬಿಜೆಪಿಯಿಂದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ

ಎಂ.ಮಹೇಶ
Published 4 ಏಪ್ರಿಲ್ 2023, 19:30 IST
Last Updated 4 ಏಪ್ರಿಲ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ತಂಬಾಕು ಬೆಳೆಯ ಕಾರಣದಿಂದ ಹೆಸರು ಗಳಿಸಿರುವ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 15 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್‌–ಜೆಡಿಎಸ್‌ ನಡುವೆಯೇ ಪೈಪೋಟಿ ಕಂಡುಬಂದಿದೆ. ಇಲ್ಲಿ ಬಿಜೆಪಿ ಗೆದ್ದಿರುವುದು ಒಮ್ಮೆಯಷ್ಟೆ.

ಹಾಲಿ ಶಾಸಕ ಜೆಡಿಎಸ್‌ನ ಕೆ.ಮಹದೇವ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಮಾಜಿ ಸಚಿವ ಕೆ. ವೆಂಕಟೇಶ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ. ಮೊದಲ ಪಟ್ಟಿಯಲ್ಲೇ ಟಿಕೆಟ್‌ ಪಡೆದಿರುವ ಈ ಇಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ನಾಲ್ಕನೇ ಬಾರಿ ಪೈಪೋಟಿಗೆ ಇಳಿದಿದ್ದಾರೆ. ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಬಿಜೆಪಿಯಿಂದ ಇನ್ನೂ ಟಿಕೆಟ್‌ ಪ್ರಕಟಿಸಿಲ್ಲ. ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕ ಎಚ್‌.ಸಿ. ಬಸವರಾಜು, ಕೌಲನಹಳ್ಳಿ ಸೋಮಶೇಖರ್‌, ಆರ್‌.ಟಿ.ಸತೀಶ್‌ ಕೂಡ ಆಕಾಂಕ್ಷಿಗಳು. ಕೆಆರ್‌ಎಸ್‌ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದಿಂದ ಜೋಗನಹಳ್ಳಿ ಗುರುಮೂರ್ತಿ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ತ್ರಿಕೋನ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗಲಿದೆ.

ADVERTISEMENT

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಬ್ಬರಾದ ವೆಂಕಟೇಶ್‌ ಅವರಿಗೆ ಇದು 9ನೇ ಚುನಾವಣೆ. ಈವರೆಗೆ ಐದು ಬಾರಿ ಆಯ್ಕೆಯಾಗಿದ್ದು, 3 ಬಾರಿ ಸೋತಿದ್ದಾರೆ. ಇವರ ಶಿಷ್ಯ ಎಂದೇ ಕರೆಯಲಾಗುವ ಮಹದೇವ್ ಗುರುವಿಗೆ ಪ್ರಬಲ ಪೈಪೋಟಿ ಕೊಡುತ್ತಾ ಬಂದಿದ್ದಾರೆ.

ಇಬ್ಬರ ನಡುವೆಯೇ ನೇರ ಹಣಾಹಣಿ: ಈ ಕ್ಷೇತ್ರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್‌.ಎಂ. ಮರಿಯಪ್ಪ ಕಾಂಗ್ರೆಸ್‌ನ ಎಚ್‌.ಎಂ. ಚನ್ನಬಸಪ್ಪ ವಿರುದ್ಧ ಗೆದ್ದಿದ್ದರು. 1957ರಲ್ಲಿ ಕಾಂಗ್ರೆಸ್‌ ಎನ್‌.ಆರ್‌. ಸೋಮಣ್ಣ ಪಕ್ಷೇತರರಾದ ಟಿ. ವೆಂಕಟರಾಂ ಅವರನ್ನು ಮಣಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಕೆ.ಎಂ. ದೇವಯ್ಯ ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿದ್ದ ಟಿ. ವೆಂಕಟರಾಂ ವಿರುದ್ಧ ಜಯ ದಾಖಲಿಸಿದ್ದರು. 1967ರಲ್ಲಿ ಪಕ್ಷೇತರರಾದ ಎಚ್‌.ಎಂ. ಚನ್ನಬಸಪ್ಪ ಕಾಂಗ್ರೆಸ್‌ನ ಕೆ.ಪಿ. ಕರಿಯಪ್ಪ ಅವರನ್ನು ಮಣಿಸಿದ್ದರು. 1972ರಲ್ಲಿ ಕಾಂಗ್ರೆಸ್‌ನ ಎಚ್‌.ಎಂ. ಚನ್ನಬಸಪ್ಪ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಪಿ. ಕರಿಯಪ್ಪ ವಿರುದ್ಧ ಗೆದ್ದು 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅವರು ಸಚಿವರೂ ಆಗಿದ್ದರು. ವಿಶೇಷವೆಂದರೆ, ಮೊದಲಿನ ಐದೂ ಚುನಾವಣೆಗಳಲ್ಲಿ ಇಬ್ಬರೇ ಅಭ್ಯರ್ಥಿಗಳು ಕಣದಲ್ಲಿದ್ದರು; ಗೆಲುವಿಗಾಗಿ ಅವರ ನಡುವೆ ನೇರ ಹಣಾಹಣಿ ನಡೆದಿರುವುದು ಇತಿಹಾಸ.

1978ರ ನಂತರ: 1978ರಲ್ಲಿ ಜನತಾ ಪಕ್ಷದ ಕೆ.ಎಸ್‌. ಕಾಳಮರೀಗೌಡ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಪಿ. ಕರಿಯಪ್ಪ ವಿರುದ್ಧ ಗೆದ್ದಿದ್ದರು. ಇದರೊಂದಿಗೆ ಕರಿಯಪ್ಪ ಅವರು ಸತತ 3ನೇ ಚುನಾವಣೆಯಲ್ಲೂ ಗೆಲ್ಲುವುದು ಸಾಧ್ಯವಾಗಲಿಲ್ಲ. 1983ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆ.ಎಸ್‌. ಕಾಳಮರೀಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಆಗ ಜನತಾ ಪಕ್ಷದಿಂದ ಸಿ. ರಾಮರಾಜೇ ಅರಸು, ಬಿಜೆಪಿಯಿಂದ ಡಾ.ಕೆ.ಆರ್‌. ತಮ್ಮಯ್ಯ ಕಣದಲ್ಲಿದ್ದರು.

1985ರಲ್ಲಿ ಜನತಾ ಪಕ್ಷದ ಕೆ.ವೆಂಕಟೇಶ್ ಗೆದ್ದರು. ಆಗ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದವರು ಎಲ್‌.ಆನಂದ್‌. ಬಿಜೆಪಿಯಿಂದ ಕೆ.ಆರ್‌. ತಮ್ಮಯ್ಯ ಸ್ಪರ್ಧಿಸಿದ್ದರು. 1989ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಎಸ್‌. ಕಾಳಮರೀಗೌಡ 3ನೇ ಬಾರಿಗೆ ಗೆಲುವಿನ ದಡ ಸೇರಿದ್ದರು. ಜನತಾಪಕ್ಷದ ಎಸ್‌.ಎಂ. ಅನಂತರಾಮು, ಜನತಾದಳದ ಕೆ. ವೆಂಕಟೇಶ್‌ ನಂತರದ ಸ್ಥಾನಗಳನ್ನು ಪಡೆದಿದ್ದರು. 1994ರಲ್ಲಿ ಜನತಾದಳದ ಕೆ. ವೆಂಕಟೇಶ್‌ 2ನೇ ಬಾರಿಗೆ ಜಯಿಸಿದರು. ಜೆ.ಎಚ್‌.ಪಟೇಲ್ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ಪಡೆದುಕೊಂಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆ.ಎಸ್‌. ಕಾಳಮರೀಗೌಡ, ಬಿಜೆಪಿಯಿಂದ ಚೌಡಯ್ಯ ಕಣದಲ್ಲಿದ್ದರು.

1999ರಲ್ಲಿ ಬಿಜೆಪಿ: ‌1999ರಲ್ಲಿ ಮತದಾರರ ಒಲವು ಬಿಜೆಪಿಯ ಎಚ್‌.ಸಿ. ಬಸವರಾಜು ಅವರಿಗೆ ಸಿಕ್ಕಿತು. ಇಲ್ಲಿ ಬಿಜೆಪಿ ಖಾತೆ ತೆರಯಲು ಸಾಧ್ಯವಾಗಿದ್ದೇ ಈ ಚುನಾವಣೆಯಲ್ಲಿ. ಆಗ, ಕಾಂಗ್ರೆಸ್‌ನಿಂದ ಕೆ.ಎಸ್‌. ಕಾಳಮರೀಗೌಡ, ಜೆಡಿಎಸ್‌ನಿಂದ ಕೆ. ವೆಂಕಟೇಶ್‌ ಕಣದಲ್ಲಿದ್ದರು.

ಬಳಿಕ ನಡೆದ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದವರು ಕೆ.ವೆಂಕಟೇಶ್. 2004ರಲ್ಲಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಎಚ್‌.ಸಿ. ಬಸವರಾಜು ಜನತಾ ಪಕ್ಷದಿಂದ, ಕೆ.ಎಸ್‌. ಚಂದ್ರೇಗೌಡ ಕಾಂಗ್ರೆಸ್‌ನಿಂದ ಹಾಗೂ ಎಚ್‌.ಡಿ. ಗಣೇಶ್‌ ಬಿಜೆಪಿಯಿಂದ ಕಣದಲ್ಲಿದ್ದರು. ಕೆ.ವೆಂಕಟೇಶ್‌ 2008ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೂಡ ಗೆದ್ದರು. ಜೆಡಿಎಸ್‌ನಿಂದ ಕೆ. ಮಹದೇವ್‌, ಬಿಜೆಪಿಯಿಂದ ಎಚ್‌.ಡಿ. ಗಣೇಶ್‌, ಬಿಎಸ್ಪಿಯಿಂದ ಬಿ.ಎಸ್‌. ರಾಮಚಂದ್ರ ಸ್ಪರ್ಧಿಸಿದ್ದರು. 2013ರಲ್ಲೂ ಕಾಂಗ್ರೆಸ್‌ನಿಂದಲೇ ಗೆದ್ದ ವೆಂಕಟೇಶ್‌ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಆಗ ಜೆಡಿಎಸ್‌ನಿಂದ ಕೆ. ಮಹದೇವ್‌, ಬಿಜೆಪಿಯಿಂದ ಆರ್‌.ಟಿ. ಸತೀಶ್‌, ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಎಚ್‌.ಡಿ. ಗಣೇಶ್‌, ಕೆಜೆಪಿಯಿಂದ ಎಚ್‌.ಸಿ. ಬಸವರಾಜು ಕಣದಲ್ಲಿದ್ದರು.

ಸತತ 2 ಬಾರಿ ಸೋಲು ಕಂಡಿದ್ದ ಜೆಡಿಎಸ್‌ನ ಕೆ. ಮಹದೇವ್‌ 2018ರ ಚುನಾವಣೆಯಲ್ಲಿ 77,317 ಮತಗಳನ್ನು ಗಳಿಸಿ ಗೆಲುವಿನ ಸಿಹಿ ಸವಿದರು. ಕಣದಲ್ಲಿದ್ದ ಕಾಂಗ್ರೆಸ್‌ನ ಕೆ. ವೆಂಕಟೇಶ್‌ (69,893 ಮತ), ಬಿಜೆಪಿಯ ಕೆ.ಎಸ್‌. ಮಂಜುನಾಥ್‌ (3,974) ಅವರನ್ನು ಸೋಲಿಸಿದ್ದರು.

ಸಚಿವರಾದವರು...
ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಎಚ್‌.ಎಂ. ಚನ್ನಬಸಪ್ಪ ನೀರಾವರಿ ಸಚಿವರಾಗಿದ್ದರು. ಕೆ.ಎಸ್‌. ಕಾಳಮರೀಗೌಡ ಅವರು ಮೂರು ಬಾರಿ ಗೆದ್ದರೂ ಸಚಿವ ಗಾದಿ ಒಲಿಯಲಿಲ್ಲ. 5 ಬಾರಿ ಗೆದ್ದಿರುವ ಕೆ.ವೆಂಕಟೇಶ್‌ ಸಚಿವರಾಗಿದ್ದರು. ಇಲ್ಲಿನ ಮಾಜಿ ಶಾಸಕ ದಿವಂಗತ ಕಾಳಮರೀಗೌಡ ಹಾಗೂ ಕೆ.ವೆಂಕಟೇಶ್ ದೂರದ ಸಂಬಂಧಿಗಳು. ಕಿತ್ತೂರಿನ ಈ ದಾಯಾದಿಗಳ ನಡುವಿನ ಪೈಪೋಟಿಯಿಂದಾಗಿ ಕ್ಷೇತ್ರ ಗಮನಸೆಳೆದಿತ್ತು. ಇತ್ತೀಚೆಗೆ ಗುರು–ಶಿಷ್ಯರ ನಡುವೆ ಹಣಾಹಣಿ ನಡೆಯುತ್ತಿದೆ.

ಮತದಾರರ ವಿವರ

ಪುರುಷರು;96,930

ಮಹಿಳೆಯರು;96,236

ತೃತೀಯ ಲಿಂಗಿಗಳು;07

ಒಟ್ಟು;19,31,73

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.