ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವೀಶ್ ಗೌಡ ವಿ. ₹ 1.13 ಕೋಟಿ ಚರಾಸ್ತಿ ಹಾಗೂ ₹1.85 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು₹2.98 ಕೋಟಿ ಆಸ್ತಿ ಹೊಂದಿದ್ದಾರೆ.
ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿರುವ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.
40 ವರ್ಷ ವಯಸ್ಸಿನ ಅವರು ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿದ್ದಾರೆ. 2017–18ರಲ್ಲಿ ₹ 15.43 ಲಕ್ಷ, 2018–19ರಲ್ಲಿ ₹ 14.37 ಲಕ್ಷ, 2019–20ರಲ್ಲಿ ₹ 19.83 ಲಕ್ಷ, 2020–21ರಲ್ಲಿ ₹ 4.94 ಲಕ್ಷ ಹಾಗೂ 2021–22ರಲ್ಲಿ ₹ 6.14 ಲಕ್ಷ ಆದಾಯ ತೆರಿಗೆ ಕಟ್ಟಿದ್ದಾರೆ.
ಕೈಯಲ್ಲಿ ₹ 8 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 62.58 ಲಕ್ಷ ಇಟ್ಟಿದ್ದಾರೆ. ಪತ್ನಿ ಪ್ರಗ್ಯಾ ಪ್ರಕಾಶ್ ಕೈಯಲ್ಲಿ ₹ 2.50 ಲಕ್ಷ ಇದೆ. ತಮ್ಮ ಹೆಸರಿನಲ್ಲಿ ಕಾರು, ಚಿನ್ನಾಭರಣ ಹಾಗೂ ಕ್ಲೇಮುಗಳಿಲ್ಲ. ಸಾಲವೂ ಇಲ್ಲ ಎಂದು ಹೇಳಿದ್ದಾರೆ. ಪತ್ನಿ ಬಳಿ ಫೋಕ್ಸ್‌ವ್ಯಾಗಲ್ ಪೋಲೋ ಕಾರಿದೆ ಹಾಗೂ ₹ 14.75 ಲಕ್ಷ ಮೌಲ್ಯದ 250 ಗ್ರಾಂ. ಚಿನ್ನಾಭರಣ ಇದೆ.
ಬಿಇ, ಕಾನೂನು ಪದವೀಧರ ಹಾಗೂ ಯುಕೆಯ ಕಾರ್ಡಿಫ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. ತಮ್ಮ ವೃತ್ತಿ ಕಾನೂನು ಸಲಹೆಗಾರ ಎಂದು ನಮೂದಿಸಿದ್ದಾರೆ. ಅವರ ಪತ್ನಿ ವೈದ್ಯೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.