ADVERTISEMENT

ಮೈಸೂರಲ್ಲಿ ₹ 100 ಕೋಟಿ ವೆಚ್ಚದ ಕ್ಯಾನ್ಸರ್ ಕೇಂದ್ರ:‌ ರೋಗಿಗಳಿಗೆ ವರವಾದ ಕೊಡುಗೆ

ಬಜೆಟ್‌ನಲ್ಲಿ ₹ 100 ಕೋಟಿ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಡಿ.ಬಿ, ನಾಗರಾಜ
Published 9 ಮಾರ್ಚ್ 2021, 4:16 IST
Last Updated 9 ಮಾರ್ಚ್ 2021, 4:16 IST

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ 2021–2022ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ, ಮೈಸೂರು ಜಿಲ್ಲೆಗೆ ಭರಪೂರ ಕೊಡುಗೆ ಘೋಷಿಸಿಲ್ಲ. ಹಾಗೆಂದು, ತೀವ್ರ ನಿರಾಸೆಯನ್ನೂ ಮಾಡಿಲ್ಲ.

ಕಿದ್ವಾಯಿ ಸಂಸ್ಥೆ ಮಾದರಿಯಲ್ಲಿ ಮೈಸೂರಿನಲ್ಲಿ ₹ 100 ಕೋಟಿ ವೆಚ್ಚದ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಆರಂಭಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದು, ಹಳೆ ಮೈಸೂರು ಭಾಗದ ಕ್ಯಾನ್ಸರ್‌ ಪೀಡಿತರಲ್ಲಿ ಆಶಾಭಾವ ಮೂಡಿಸಿದೆ.

ಘೋಷಣೆಯಲ್ಲೇ ‘ಕಿದ್ವಾಯಿ ಸಂಸ್ಥೆ ಮಾದರಿ’ ಎಂದಿರುವುದು ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ‘ಸಂಜೀವಿನಿ’ ಸಿಕ್ಕಂತಾಗಿದೆ. ಭವಿಷ್ಯದಲ್ಲಿ ಬೆಂಗಳೂರಿನ ಅವಲಂಬನೆ ಕಡಿಮೆಯಾಗಲಿದೆ. ಚಿಕಿತ್ಸೆ ಪಡೆಯಲಿಕ್ಕಾಗಿ ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ವಿಮಾ ಯೋಜನೆ, ಸರ್ಕಾರಿ ಯೋಜನೆಯ ಅನುಮೋದನೆಗಾಗಿ ತಿಂಗಳುಗಟ್ಟಲೇ ಕಾಯುವುದು ತಪ್ಪಲಿದೆ ಎಂಬ ಮಾತು ಕೇಳಿ ಬಂದಿದೆ.

ADVERTISEMENT

‘ಮೈಸೂರಿನಲ್ಲಿ ಆದಷ್ಟು ಬೇಗ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಆರಂಭಿ
ಸಲು ಪ್ರಕ್ರಿಯೆ ನಡೆಸಬೇಕು. ಸುಸಜ್ಜಿತ ಕಟ್ಟಡದ ಜೊತೆಗೆ ಅತ್ಯಾಧುನಿಕ ಚಿಕಿತ್ಸೆಗೂ ಸಹಕಾರಿಯಾಗುವಂತಹ ಯಂತ್ರೋಪಕರಣಗಳನ್ನು ಇಲ್ಲಿ ಅಳವಡಿ
ಸಿದರೆ; ಬಡ ಕ್ಯಾನ್ಸರ್‌ ರೋಗಿಗ
ಳಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗು
ತ್ತದೆ. ಓಡಾಟದ ವೆಚ್ಚವೇ ಸಾಕಷ್ಟು ಕಡಿಮೆಯಾಗಲಿದೆ’ ಎಂದು ಕ್ಯಾನ್ಸರ್‌ ಪೀಡಿತರೊಬ್ಬರ ಸಹೋದರಿ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು ನಗರಕ್ಕೆ ನಿರಾಸೆ: ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ₹ 50 ಕೋಟಿ ವೆಚ್ಚದ ಉದ್ಯಾನ ನಿರ್ಮಾಣ ಯೋಜನೆ ಹೊರತುಪಡಿಸಿದರೆ; ಮೈಸೂರು ನಗರ–
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾ
ಗುವ ಮಹತ್ವದ ಬೇರೆ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ.

ಕೋವಿಡ್‌ನಿಂದ ಕಂಗಾಲಾಗಿರುವ ಪ್ರವಾಸೋದ್ಯಮ, ಹೋಟೆಲ್‌ ಉದ್ಯಮಕ್ಕೆ ಉತ್ತೇಜನಕಾರಿಯಾಗುವ ಯಾವೊಂದು ಅಂಶವೂ ಬಜೆಟ್‌ನಲ್ಲಿ ಪ್ರಕಟವಾಗಿಲ್ಲ. ಇದು ಪ್ರವಾಸೋದ್ಯಮ ಹಾಗೂ ಹೋಟೆಲ್‌ ಉದ್ಯಮವನ್ನೇ ನಂಬಿರುವ ಅಪಾರ ಸಂಖ್ಯೆಯ ಕುಟುಂಬಗಳ ಪಾಲಿಗೆ ನಿರಾಸೆಯಾಗಿ ಪರಿಣಮಿಸಿದೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಬಜೆಟ್‌ ಮಂಡನೆ ಮುನ್ನಾ ದಿನಗಳಲ್ಲೇ ಮೈಸೂರಿಗೆ ಎರಡ್ಮೂರು ಬಾರಿ ಭೇಟಿ ನೀಡಿ, ಹಲವು ಯೋಜನೆ ಪ್ರಸ್ತಾಪಿಸಿದ್ದರೂ; ಬಜೆಟ್‌ನಲ್ಲಿ ಯಾವೊಂದು ಯೋಜನೆ, ಹೆಲಿ ಟೂರಿಸಂನ ಪ್ರಸ್ತಾವ ಪ್ರಕಟಗೊಳ್ಳದಿರುವುದಕ್ಕೆ ಮೈಸೂರಿಗರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೋಟೆಲ್‌ ಉದ್ಯಮಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಹುಲಿ, ಆನೆ ಯೋಜನೆಗಳಿಗೆ ಯಾವುದೇ ಅನುದಾನ ಪ್ರಸ್ತಾಪವಾಗಿಲ್ಲ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆ.ಆರ್‌.ನಗರ ತಾಲ್ಲೂಕಿನ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭದ ಪ್ರಸ್ತಾಪವೇ ಆಗದಿರುವುದು ಕಬ್ಬು ಬೆಳೆಗಾರರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ರೈತ ಸಮುದಾಯದಲ್ಲಿ ಇದಕ್ಕೆ ಅಸಮಾಧಾನವೂ ವ್ಯಕ್ತವಾಗಿದೆ.

ಮೈಸೂರಿನ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹ ಯಾವೊಂದು ಉತ್ತೇಜನಕಾರಿ ಘೋಷಣೆ ಬಜೆಟ್‌ನಲ್ಲಿಲ್ಲದಿರುವುದು ಉದ್ಯಮಿಗಳಲ್ಲಿ ಬೇಸರ ಮೂಡಿಸಿದೆ.

ಮೈಸೂರು ಜಿಲ್ಲೆಗೆ ಘೋಷಣೆಯಾದ ಯೋಜನೆ

l ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ ₹ 50 ಕೋಟಿ ವೆಚ್ಚದ ಉದ್ಯಾನ ನಿರ್ಮಾಣ

l ₹ 5 ಕೋಟಿ ವೆಚ್ಚದಲ್ಲಿ ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತುರ್ತು ಚಿಕಿತ್ಸಾ ವಿಭಾಗ ಆರಂಭ

l ಪರ್ವ ನಾಟಕ ಪ್ರದರ್ಶನಕ್ಕೆ ₹ 1 ಕೋಟಿ ಅನುದಾನ

l ಮುಡಾ ವ್ಯಾಪ್ತಿಯ ಪ್ರದೇಶಗಳು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಗೆ ಸೇರ್ಪಡೆ

l ಮೈಸೂರಿನಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಆರಂಭ

l ಮಹಿಳಾ ಸಂಘಗಳು, ಕಿರು ಉದ್ಯಮಗಳ ಉತ್ಪನ್ನ ಮಾರಾಟಕ್ಕಾಗಿ ವರ್ಷಕ್ಕೊಮ್ಮೆ ಮಾರಾಟ ಮೇಳ

l ಸಮುದಾಯ ಮಿಶ್ರಗೊಬ್ಬರ ಘಟಕ
ನಿರ್ಮಾಣ

l ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ

l ನೀರಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ

l ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ಸುಸಜ್ಜಿತವಾದ ತಾತ್ಕಾಲಿಕ ವಸತಿಗೃಹ ಸೌಲಭ್ಯ

l ಮೈಸೂರಿನ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ

l 2 ಸರ್ಕಾರಿ ಕಚೇರಿಯಲ್ಲಿ ಶಿಶುಪಾಲನಾ ಕೇಂದ್ರ ಆರಂಭ

l ತಾಲ್ಲೂಕಿಗೆ ತಲಾ 10 ಮಹಿಳಾ ಕಿರು ಉದ್ಯಮ ಸ್ಥಾಪನೆ

l ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾ‍ಪನೆ

l ಗೋಶಾಲೆ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.