ADVERTISEMENT

ಅತಿವೃಷ್ಟಿ | ಬೆಳೆ ನಷ್ಟ ಪರಿಹಾರ ಪರಿಷ್ಕರಿಸಿ: ಕುರುಬೂರು ಶಾಂತಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:00 IST
Last Updated 17 ಅಕ್ಟೋಬರ್ 2025, 3:00 IST
ಮೈಸೂರಿನ ಜಲದರ್ಶಿನಿಯಲ್ಲಿ ಗುರುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ರೈತರ ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು 
ಮೈಸೂರಿನ ಜಲದರ್ಶಿನಿಯಲ್ಲಿ ಗುರುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ರೈತರ ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿದರು    

ಮೈಸೂರು: ‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ 15 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದ್ದು, ಎಕರೆಗೆ ನಿಗದಿ ಮಾಡಿರುವ ₹ 6,700 ಅನ್ನು ಸರ್ಕಾರ ಪರಿಷ್ಕರಿಸಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು. 

ನಗರದ ಜಲದರ್ಶಿನಿಯಲ್ಲಿ ಗುರುವಾರ ರೈತರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ವಿಪತ್ತು ಸ್ಪಂದನೆ ನಿಧಿ (ಎಸ್‌ಡಿಆರ್‌ಎಫ್‌) ಮಾನದಂಡ ಕಳೆದ 8 ವರ್ಷದಿಂದ ಪರಿಷ್ಕರಣೆಯಾಗಿಲ್ಲ. ಕೇಂದ್ರ ಸರ್ಕಾರ ಅದಕ್ಕೆ ತಿದ್ದುಪಡಿ ತಂದು, ಉತ್ತರ ಕರ್ನಾಟಕದ ರೈತರ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.  

‘ಬಹಳಷ್ಟು ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ‘ಶಾಸನಬದ್ಧ ಬೆಂಬಲ ಬೆಲೆ’ (ಎಫ್‌ಆರ್‌ಪಿ) ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದ ಅವರು, ‘ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅ.24ರಂದು ಬೆಳಿಗ್ಗೆ 11ಕ್ಕೆ ರಾಜ್ಯದಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಹೇಳಿದರು. 

ADVERTISEMENT

‘ಒಂದು ಟನ್ ಕಬ್ಬು ಬೆಳೆಯಲು ₹ 3,700 ವೆಚ್ಚವಾಗುತ್ತದೆ ಎಂದು ರಾಜ್ಯ ಕೃಷಿ ಇಲಾಖೆಯು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ಕೊಟ್ಟಿದೆ. ಅದರಂತೆ ರಾಜ್ಯ ಸರ್ಕಾರವು ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು. 

‘ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ₹ 2,369 ನಿಗದಿ ಮಾಡಿರುವುದು ಅವೈಜ್ಞಾನಿಕ. ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹ 500 ಪ್ರೋತ್ಸಾಹ ಧನ ನೀಡಬೇಕು. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು’ ಎಂದರು. 

ಹಸಿರು ಸೇನೆ ಅಧ್ಯಕ್ಷ ಕರಿಬಸಪ್ಪಗೌಡ, ಮಹೇಶ್ ಬೆಳಗಾಂವ್ಕರ್, ಬಸವರಾಜ್ ಪಾಟೀಲ್, ಅತ್ತಹಳ್ಳಿ ದೇವರಾಜ್, ರಮೇಶ್ ಹೂಗಾರ್, ಪರಶುರಾಮ್ ಎತ್ತಿನಗುಡ್ಡ, ಎಸ್‌.‍ಪಿ.ಸಿದ್ನಾಳ್, ತುಮಕೂರು ಶಿವಕುಮಾರ್, ಶ್ರೀನಿವಾಸಗೌಡ , ಬೈರಾರೆಡ್ಡಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಉಡಿಗಾಲ ರೇವಣ್ಣ, ಉಳುವಪ್ಪ ಬೆಳಗೇರಿ ಪಾಲ್ಗೊಂಡಿದ್ದರು.

‘ಕಲಬುರಗಿಯಲ್ಲಿ ರೈತ ಸಮಾವೇಶ’
‘ಕಲಬುರಗಿಯಲ್ಲಿ ಡಿ.23ರಂದು ವಿಶ್ವ ರೈತ ದಿನಾಚರಣೆ ಪ್ರಯುಕ್ತ ರಾಜ್ಯ ರೈತ ಸಮಾವೇಶ ಆಯೋಜಿಸಲಾಗುವುದು. ವಿವಿಧ ಜಿಲ್ಲೆಗಳ 5 ಸಾವಿರ ರೈತರು ಪಾಲ್ಗೊಳ್ಳುವರು’ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು. ‘ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನ ಆಯೋಜಿಸಲಾಗಿತ್ತು. ದೇಶದ ವಿವಿಧೆಡೆಯಿಂದ ಸಮಾವೇಶಕ್ಕೆ ರೈತರು ಬಂದಿದ್ದರು. ಈ ಬಾರಿಯೂ ವಿಶಿಷ್ಟವಾಗಿ ಆಚರಿಸಲಾಗುವುದು. 10 ಸಾಧಕ ರೈತರನ್ನು ಪುರಸ್ಕರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.