ADVERTISEMENT

ಪ್ರತಾಪ ಸಿಂಹ ನಮ್ಮ ಸಂಸದ ಎನ್ನಲು ಅವಮಾನ ಆಗುತ್ತಿದೆ: ಚಿಂತಕ ಎಸ್.ತುಕಾರಾಂ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 8:30 IST
Last Updated 21 ನವೆಂಬರ್ 2021, 8:30 IST
ಸಂವಿಧಾನದ ಆಶಯಗಳು ಮತ್ತು ದಲಿತರ ಮುಂದಿನ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಚಿಂತಕ ಎಸ್.ತುಕಾರಾಂ ಮಾತನಾಡಿದರು.
ಸಂವಿಧಾನದ ಆಶಯಗಳು ಮತ್ತು ದಲಿತರ ಮುಂದಿನ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಚಿಂತಕ ಎಸ್.ತುಕಾರಾಂ ಮಾತನಾಡಿದರು.    

ಮೈಸೂರು: ಸಂಸದ ಪ್ರತಾಪ ಸಿಂಹ ಅವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನವಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಎಸ್.ತುಕಾರಾಂ ತಿಳಿಸಿದರು.

ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ದಲಿತರ ಮುಂದಿನ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಕುರಿತು ಪ್ರತಾಪಸಿಂಹ ಬಳಸಿದ ಅಸಂವಿಧಾನಿಕ ಪದಗಳು ಬೇಸರ ತರಿಸಿವೆ. ಇಂತಹವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನ ಅನ್ನಿಸುತ್ತದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರು ಆಲಿಸಿ, ಗೌರವಿಸುತ್ತಿದ್ದರು. ಇವರ ಭಾವಚಿತ್ರ ನೋಡಿದರೆ ಪ್ರತಾಪಸಿಂಹ ಅವರ ಅಂತಃಕರಣ ಕಲಕುವುದಿಲ್ಲವೆ ಎಂದು ಪ್ರಶ್ನಿಸಿದರು.

ಹಂಸಲೇಖ ಅವರ ಮಾತನ್ನು ಸ್ವೀಕರಿಸಿದ ರೀತಿಯನ್ನು ನೋಡಿದರೆ ನಮಗೆ ಇನ್ನು ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವ ಅವಕಾಶ ಇಲ್ಲ ಎನ್ನಿಸುತ್ತದೆ ಎಂದರು.

ನಮ್ಮ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ಆಗುವುದಿಲ್ಲ ಎಂದರೆ ನಮಗೂ ತಾಯಿನೆಲ ಇದೆಯೆ ಎಂದು ಪ್ರಶ್ನೆ ಮೂಡುತ್ತದೆ ಎಂದರು.
ಈ ಪ್ರಕರಣಗಳನ್ನು ಗಮನಿಸಿದರೆ ಮನುವಾದಿಗಳ ಪಾರಂಪರಿಕ ಕ್ರೌರ್ಯ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಕುರಿತು ಪ್ರಶ್ನಿಸಲು ಜನಪರ ಚಳವಳಿಗಳು ತಡಮಾಡುತ್ತಿವೆ ಎಂದು ಕಿಡಿಕಾರಿದರು.

ಕೆಲವೆ ಕೆಲವು ಬೆರಳೆಣಿಕೆಯಷ್ಟು ದಲಿತ ರಾಜಕಾರಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಸೇನೆ ಇಲ್ಲದ ದಳಪತಿಗಳಂತೆ. ಅವರ ಜತೆ ಇರುವ ಸೈನ್ಯಕ್ಕೆ ಕೈಕಾಲು ಇಲ್ಲ ಎಂದರು.

ಇದನ್ನೂ ಓದಿ... ವಿಧಾನ ಪರಿಷತ್‌ ಚುನಾವಣೆ: ಬಿಜೆಪಿಗೆ ಜೆಡಿಎಸ್ ಬೆಂಬಲ ಕೋರಿದ ಯಡಿಯೂರಪ್ಪ

ನಾವು ಹಿಂದೂವಾಗಿ ಹುಟ್ಟಿದ್ದೇವೆ ಹಿಂದೂವಾಗಿ ಸಾಯುವುದಿಲ್ಲ ಎಂಬ ನಿರ್ಧಾರ ತಳೆಯಬೇಕು. ಅಗ ಮಾತ್ರ ಈ ಪಾರಂಪರಿಕ ಕ್ರೌರ್ಯ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ದಸಂಸ ರಾಜ್ಯ ಸಂಸ್ಥಾಪಕ ವಿ.ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಎಸ್.ನರೇಂದ್ರಕುಮಾರ, ಹೋರಾಟಗಾರ ಬಸವರಾಜ ದೇವನೂರ, ಆರ್.ಎಸ್.ದೊಡ್ಡಣ್ಣ, ಅಕ್ಕಮಹಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.