
ಮೈಸೂರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ ನೇತೃತ್ವದ ಏಕಸದಸ್ಯ ಸತ್ಯಶೋಧನಾ ಸಮಿತಿಯು ಬುಧವಾರ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಲವರ ವಿಚಾರಣೆ ನಡೆಸಿತು.
ವಿಶ್ವವಿದ್ಯಾಲಯದ ಹಿಂದಿನ ಕುಲಸಚಿವರ (ಆಡಳಿತ) ವಿರುದ್ಧ ಲಂಚ, ಭ್ರಷ್ಟಾಚಾರದ ಆರೋಪವಿದ್ದು, ಅದರ ತನಿಖೆಗಾಗಿ ಸರ್ಕಾರವು ಬಿ.ಎ.ಪಾಟೀಲ ಅಧ್ಯಕ್ಷತೆಯ ಸಮಿತಿಯನ್ನು ಈಚೆಗೆ ರಚಿಸಿತ್ತು.
ವಾರದ ಹಿಂದಷ್ಟೇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದ ಸಮಿತಿಯು ವಿಚಾರಣೆಗೆ ಬರುವಂತೆ ಹಲವರಿಗೆ ನೋಟಿಸ್ ನೀಡಿತ್ತು. ಅವರನ್ನು ಬುಧವಾರ ವಿಚಾರಣೆಗೆ ಒಳಪಡಿಸಿತು. ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೂ ವಿಚಾರಣೆ ನಡೆಯಿತು. 175 ಪುಟಕ್ಕೂ ಹೆಚ್ಚಿನ ದಾಖಲೆಗಳನ್ನು ಪರಿಶೀಲಿಸಿತು.
ಮಾಜಿ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ, ಕಾಯಂ ಅಧ್ಯಾಪಕರ ಸಂಘದ ಕಾರ್ಯದರ್ಶಿ ಜಗದೀಶ್ ಬಾಬು, ಬೋಧಕರೇತರ ಸಂಘದ ಕಾರ್ಯದರ್ಶಿ ಪ್ರದೀಪ್‌ಗಿರಿ, ಗೀತಾ, ಪುಟ್ಟಸ್ವಾಮಿ ಸೇರಿ ಹಲವರಿಂದ ಮಾಹಿತಿ ಸಂಗ್ರಹಿಸಲಾಯಿತು.
ಹಿಂದಿನ ಕುಲಸಚಿವರ ವಿರುದ್ಧ ಲಂಚ, ಭ್ರಷ್ಟಾಚಾರದ ಆರೋಪ ಹೊರಿಸಿ ವಿಶ್ವವಿದ್ಯಾಲಯದ ಸಿಬ್ಬಂದಿ ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಇದು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಸರ್ಕಾರವು ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ) ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಅವರಿಂದ ತನಿಖೆ ಮಾಡಿಸಿತ್ತು.
ಪ್ರಾಥಮಿಕ ತನಿಖಾ ವರದಿಯಲ್ಲಿ ಅಕ್ರಮಗಳು ನಡೆದಿರುವುದು ಕಂಡುಬಂದ ಕಾರಣಕ್ಕೆ, ವರದಿಯ ಶಿಫಾರಸಿನಂತೆ ಕರಾಮುವಿವಿ ಕಾಯ್ದೆ 1992ರ ಸೆಕ್ಷನ್ 8ರ ಅಡಿಯಲ್ಲಿ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ನಂತರ ಸರ್ಕಾರವು ಏಕ ಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.