ADVERTISEMENT

ಧರ್ಮಾಪುರ: ಕಾಶಿಲಿಂಗೇಶ್ವರ ದೇಗುಲದಲ್ಲಿ ಶಿವಾರಾತ್ರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:03 IST
Last Updated 15 ಫೆಬ್ರುವರಿ 2026, 4:03 IST
ಧರ್ಮಾಪುರ ಸಮೀಪದ ಕಾಶಿಲಿಂಗೇಶ್ವರ ದೇವಾಲಯದ ಹೊರನೋಟ
ಧರ್ಮಾಪುರ ಸಮೀಪದ ಕಾಶಿಲಿಂಗೇಶ್ವರ ದೇವಾಲಯದ ಹೊರನೋಟ   

ಧರ್ಮಾಪುರ: ಸಮೀಪದ ತರಿಕಲ್ ಗ್ರಾಮದ ಪುರಾತನ ಕಾಶಿಲಿಂಗೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಆಚರಣೆ ಸಿದ್ಧತೆ ನಡೆದಿದೆ.

ಶಿವರಾತ್ರಿ ಅಂಗವಾಗಿ ಭಾನುವಾರ ಬೆಳಿಗ್ಗೆ ದೇವಾಲಯದಲ್ಲಿ ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮ ನಡೆಯಲಿದೆ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಹಾಸ್ಯ ನಟ ಗುಂಜಪ್ಪ ಅವರಿಂದ ಮನರಂಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಅರ್ಧಕ್ಕೆ ನಿಂತ ಜೀರ್ಣೋದ್ಧಾರ: ಕಾಶಿಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು 2022ರಲ್ಲಿ ಸರ್ಕಾರ ಪ್ರಾರಂಭಿಸಿತು, ಅದಕ್ಕಾಗಿ ಎರಡು ಕೋಟಿ ಹಣ ಬಿಡುಗಡೆಯಾಗಿದೆ, ನಂತರದ ಕಾಮಗಾರಿ ನಡೆದು ಅರ್ಧ ದೇವಾಲಯ ಜೀರ್ಣೋದ್ಧಾರವಾಗಿದೆ. ನಂತರ ಅನುದಾನ ಸಿಗದೇ ಇದುವರೆಗೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ADVERTISEMENT

ದೇವಾಲಯದ ಹಿನ್ನೆಲೆ: ಕಾಶಿಲಿಂಗೇಶ್ವರ ದೇವಾಲಯವನ್ನು ಹೊಯ್ಸಳರು ನಿರ್ಮಾಣ ಮಾಡಿದ್ದರು, ನಂತರ ವಿಜಯನಗರದ ಅರಸರು ಅದನ್ನು ಜೀರ್ಣೋದ್ಧಾರ ಮಾಡಿದರು. ದಾಳಿಗೆ ಒಳಗಾಗಿ ನಾಶವಾಗಿತ್ತು. ಹೊಯ್ಸಳರು ಹಾಗೂ ವಿಜಯನಗರ ಅರಸರ ಆಡಳಿತದ ಪ್ರಮುಖ ಸ್ಥಳವಾಗಿ ತರಿಕಲ್ ಗ್ರಾಮವು ಮಹತ್ವ ಹೊಂದಿತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಶಿಲಾಶಾಸನಗಳು ಮಾಹಿತಿ ನೀಡುತ್ತವೆ.

100 ಲೀಟರ್ ಎಣ್ಣೆ ಸಾಮರ್ಥ್ಯದ ಕಲ್ಲಿನ ದೀಪ ಇಲ್ಲಿದೆ. 21 ಸ್ತಂಭಗಳಿದ್ದು, ಶಿಲ್ಪಗಳು ಇವೆ. ದೇವಾಲಯವನ್ನು ‘ಕಾಶಿಲಿಂಗೇಶ್ವರ’, ‘ತಿರುಮಲ ದೇವಾಲಯ’, 'ಸಾವಿರ ಕಂಬಗಳ ತೊಟ್ಟಿಲು’ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಪ್ರತಿ ಗರ್ಭಗುಡಿಯಲ್ಲಿಯೂ ಶಿವಲಿಂಗಗಳ ಪೀಠಗಳು ಮಾತ್ರ ಕಂಡುಬರುತ್ತವೆ. ಇಲ್ಲಿಂದ ಶಿವಲಿಂಗಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ದೇವಾಲಯ ಸಂಪೂರ್ಣವಾಗಿ ಜೀರ್ಣೋದ್ಧಾರ ಆಗದಿದ್ದರೂ ಗ್ರಾಮಸ್ಥರು ಎಲ್ಲರ ಸಹಕಾರ ಪಡೆದು ಪ್ರತಿ ಸೋಮವಾರ ವಿಶೇಷ ಪೂಜೆ ಹಮ್ಮಿಕೊಳ್ಳುತ್ತಾರೆ, ಸಂಜೆ ಪ್ರಸಾದವನ್ನು ನೀಡಲಾಗುತ್ತಿದೆ’ ಎಂದು ಕಾಶೀಲಿಂಗೆಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯ ಸತೀಶ್ ಹೇಳುತ್ತಾರೆ.

ಜೀರ್ಣೋದ್ಧಾರಕ್ಕೆ ಮನವಿ: ‘ಅರ್ಧಕ್ಕೆ ನಿಂತಿರುವ ಕಾಶಿಲಿಂಗೇಶ್ವರ ದೇವಾಲಯವನ್ನು ಮರು ನಿರ್ಮಾಣ ಮಾಡಬೇಕು, ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯ ಮನೋಜ್ ಆಗ್ರಹಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಹುಣಸೂರು ತಾಲೂಕಿನ ಶಾಸಕರಾದ ಜಿ ಡಿ ಹರೀಶ್ ಗೌಡರವರು

‘ಕಾಶಿಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ₹4 ಕೋಟಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದ್ದೇವೆ, ಬಜೆಟ್ ಮುಗಿದ ತಕ್ಷಣ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.