ADVERTISEMENT

ಮೈಸೂರು: ಸೆ. 4ರಂದು ಸಂಸದರ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 13:13 IST
Last Updated 1 ಸೆಪ್ಟೆಂಬರ್ 2023, 13:13 IST
ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್   

ಮೈಸೂರು: ‘ಕಾವೇರಿ ನೀರು ಹಾಗೂ ಮಹದಾಯಿ ವಿವಾದದ ಕುರಿತು ಮೌನ ವಹಿಸಿರುವ ರಾಜ್ಯದ ಎಲ್ಲ ಲೋಕಸಭಾ ಸದಸ್ಯರ ವಿರುದ್ಧ ಅವರ ಕಚೇರಿಗಳ ಎದುರು ಸೆ. 4ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸದಸ್ಯರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎಲ್ಲ ಸಂಸದರಿಗೂ ಹಕ್ಕೊತ್ತಾಯ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರವು, ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ ನಮ್ಮ ರೈತರನ್ನು ಬಲಿ ಕೊಟ್ಟಿದೆ. ಸರ್ಕಾರದ ಈ ಧೋರಣೆ ಖಂಡನೀಯ’ ಎಂದು ಹೇಳಿದರು.

‘ಮಹದಾಯಿ ನೀರಿನ ವಿವಾದವನ್ನು ತ್ವರಿತವಾಗಿ ಬಗೆಹರಿಸಬೇಕು. ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ (ಪ್ರತಿ ಟನ್‌ಗೆ ಹೆಚ್ಚುವರಿ ₹ 150)ಯನ್ನು ಸಕ್ಕರೆ ಕಾರ್ಖಾನೆಗಳಿಂದ ಕೂಡಲೇ ಕೊಡಿಸಬೇಕು. ಪ್ರಸಕ್ತ 2023-24ನೇ ಸಾಲಿನ ಕಬ್ಬಿನ ದರವನ್ನು ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಪ್ರಮುಖರಾದ ಸುರೇಶ್ ಮ. ಪಾಟೀಲ, ರಮೇಶ ಉಗಾರ, ಜಿ.ವಿ. ಲಕ್ಷ್ಮೀದೇವಿ, ಎಂ.ಬಿ. ಚೇತನ್, ಸೋಮಶೇಖರ, ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.