ADVERTISEMENT

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಜೂನ್‌ನಲ್ಲೇ ಜಲರಾಶಿಯ ‘ಸೊಗಸು’

ಕಾವೇರಿ ಕಣಿವೆಯಲ್ಲಿ ಉತ್ತಮ ವರ್ಷಧಾರೆ, ಮೈದುಂಬಿದ ಅಣೆಕಟ್ಟೆಗಳು

ಎಂ.ಮಹೇಶ್
Published 24 ಜೂನ್ 2025, 5:19 IST
Last Updated 24 ಜೂನ್ 2025, 5:19 IST
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಜಲರಾಶಿಯ ಸೊಗಸು– ಪ್ರಜಾವಾಣಿ ಚಿತ್ರ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಜಲರಾಶಿಯ ಸೊಗಸು– ಪ್ರಜಾವಾಣಿ ಚಿತ್ರ   

ಮೈಸೂರು: ಜೀವನದಿ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಜೂನ್‌ನಲ್ಲೇ ಜಲರಾಶಿಯ ಸೊಗಸು ಕಂಡುಬರುತ್ತಿರುವುದು ಹರ್ಷ ಮೂಡಿಸಿದೆ.

ಈ ಬಾರಿ ಮುಂಗಾರು ಮಳೆಯು ಅವಧಿಗೂ ಮುನ್ನವೇ ಆರಂಭವಾದ ಕಾರಣದಿಂದ ಹಾಗೂ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಕಾರಣದಿಂದಾಗಿ ಜಲಾಶಯಗಳು ನಳನಳಿಸುತ್ತಿವೆ. ಅಣೆಕಟ್ಟೆಗಳು ಬಹುತೇಕ ಭರ್ತಿಯಾಗಿರುವುದು, ಮುಂದಿನ ದಿನಗಳಲ್ಲಿ ಈ ಭಾಗದ ಜೊತೆಗೆ ದೂರದ ಬೆಂಗಳೂರಿನ ಜನರ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುವುದಕ್ಕೆ ಸಹಕಾರಿಯಾಗಿದೆ.

ಕಾವೇರಿ ಹಾಗೂ ಅದರ ಉಪನದಿಗಳು ಮೈದುಂಬಿ ಹರಿಯುತ್ತಿರುವ ಪರಿಣಾಮ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿರ್ಮಿಸಿರುವ ಕೃಷ್ಣರಾಜಸಾಗರ ಜಲಾಶಯ ಬಹುತೇಕ ತುಂಬಿದೆ. ಅಂತೆಯೇ, ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ನಿರ್ಮಿಸಿರುವ ಕಬಿನಿ ಜಲಾಶಯ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲೂ ಜಲವೈಭವ ಕಂಡುಬರುತ್ತಿದೆ. ನುಗು ಹಾಗೂ ತಾರಕ ಜಲಾಶಯಗಳಲ್ಲೂ ಸಾಕಷ್ಟು ನೀರು ಸಂಗ್ರಹವಿದೆ.

ADVERTISEMENT

ಹೋದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ ಮಟ್ಟ ಬಹಳಷ್ಟು ಜಾಸ್ತಿ ಪ್ರಮಾಣದಲ್ಲೇ ಇರುವುದು ಸಂತಸ ಮೂಡಿಸಿದೆ. ಕೃಷಿಕರು ಬೇಸಾಯದಲ್ಲಿ ತೊಡಗಿದ್ದರೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿರುವುದನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಿರುವುದರಿಂದ ಆ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳೂ ಗರಿಗೆದರಿವೆ.

ಜಲಪಾತಗಳಿಗೂ ಮೆರುಗು:

ಕೊಡಗು ಜಿಲ್ಲೆಯ ಅಬ್ಬಿ ಸೇರಿದಂತೆ ಹಲವು ಜಲಾಶಯಗಳು, ಮಂಡ್ಯ ಜಿಲ್ಲೆಯ ಗಗನಚುಕ್ಕಿ, ಚಾಮರಾಜನಗರ ಜಿಲ್ಲೆಯ ಭರಚುಕ್ಕಿ ಜಲಪಾತಗಳು ತಮ್ಮ ಸೊಗಸಿನಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮುಂಗಾರು ವರ್ಷಧಾರೆಯು ಕಾವೇರಿ ಕಣಿವೆಯಲ್ಲಿ ಇಂತಹ ಹಲವು ಸಂಭ್ರಮಗಳಿಗೆ ಕಾರಣವಾಗಿದೆ. ಜಲಪಾತಗಳು ಜೂನ್‌ನಲ್ಲೇ ಮೈದುಂಬಿರುವುದು ಕೂಡ ಈ ಬಾರಿಯ ವಿಶೇಷವಾಗಿದೆ.

ಹೋದ ವರ್ಷವೂ ಉತ್ತಮ ಮಳೆಯಾಗಿದ್ದರಿಂದ, ಕಳೆದ ಮುಂಗಾರಿನಲ್ಲಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಲಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಅಷ್ಟು ದೊಡ್ಡದಾಗಿ ಕಾಣಲಿಲ್ಲ. ಬರಗಾಲವೂ ಎದುರಾಗಲಿಲ್ಲ. ಈ ಬಾರಿಯೂ ಇದೇ ಆಶಾಭಾವದ ಸೂಚನೆಗಳು ಕಾಣಿಸುತ್ತಿವೆ.

ಹೆಚ್ಚಿನ ಪ್ರಮಾಣದಲ್ಲಿ:

ಒಟ್ಟು 2,284 ಅಡಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದ ನೀರಿನ ಮಟ್ಟ ಸೋಮವಾರ 2,278.70 ಅಡಿ ಇತ್ತು. ಇದೇ ವರ್ಷ ಈ ಅವಧಿಯಲ್ಲಿದ್ದ ನೀರಿನ ಮಟ್ಟ 2,264 ಅಡಿಗಳಷ್ಟೆ.

ಅಂತೆಯೇ, 2,859 ಅಡಿ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಸೋಮವಾರ 2,851 ಅಡಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ನೀರಿನ ಮಟ್ಟ 2,828.88 ಅಡಿಗಳು. ಅಂದರೆ, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂದಿದೆ.

ಜಲಾಶಯಗಳು ಭರ್ತಿ ಆಗುತ್ತಿರುವುದು ಖುಷಿಯ ವಿಚಾರವಾದರೆ, ಇನ್ನೂ ಮುಂಗಾರು ಮಳೆಯ ಅವಧಿ ಮುಂದುವರಿಯಲಿರುವ ಕಾರಣದಿಂದಾಗಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಿಂದಿನ ವರ್ಷವೂ ಸಾಕಷ್ಟು ಪ್ರವಾಹ ಆಗಿ, ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಇನ್ನೊಂದೆಡೆ, ತಮಿಳುನಾಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಸಲು ಈ ಬಾರಿಯೂ ಅವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು.

ಜನರಲ್ಲಿ ಹರ್ಷ ಮೂಡಿಸಿದ ‘ಮುಂಗಾರು’ ಜೂನ್‌ನಲ್ಲೇ ಸಾಕಷ್ಟು ನೀರು ಸಂಗ್ರಹ ಪ್ರವಾಸೋದ್ಯಮ ಚಟುವಟಿಕೆಗೆ ಇಂಬು

ಜೂನ್‌ನಲ್ಲೇ 120 ಅಡಿ: 2ನೇ ಬಾರಿ

ಮೈಸೂರು ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳ ಜನ–ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿಸುವ ಕೆಆರ್‌ಎಸ್‌ ಜಲಾಶಯ ಸೋಮವಾರ 120.20 ಅಡಿ ತಲುಪಿದೆ. ಭರ್ತಿಗೆ ಕೆಲವೇ ಅಡಿಗಳಷ್ಟೇ ಬಾಕಿ ಇದೆ (ಗರಿಷ್ಠ 124.80 ಅಡಿ). ಹೋದ ವರ್ಷ ಇದೇ ದಿನ ನೀರಿನ ಮಟ್ಟ 87.62 ಅಡಿಯಷ್ಟೇ ಇತ್ತು. ‘ಕೆಆರ್‌ಎಸ್ 1941ರಲ್ಲಿ ಜೂನ್ 21ರಂದು 120 ಅಡಿ ತುಂಬಿತ್ತು. ಈಗ 2ನೇ ಬಾರಿಗೆ ಜೂನ್‌ನಲ್ಲೇ 120 ಅಡಿ ದಾಟಿದೆ. 1941ರಲ್ಲಿ ತುಂಬಿದ್ದ ಸಂದರ್ಭದಲ್ಲಿ ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಇರಲಿಲ್ಲ. ಆದರೆ ಈಗ ಹಾರಂಗಿ ಹಾಗೂ ಹೇಮಾವತಿ ಜಲಾಶಯ ಇದ್ದಾಗ್ಯೂ ಮುಂಚಿತವಾಗಿಯೇ 120 ಅಡಿ ತುಂಬಿರುವುದು ವಿಶೇಷ’ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವೇ ದಿನಗಳಲ್ಲಿ...

ಕಾವೇರಿ ನೀರಾವರಿ ನಿಗಮದ ಮಾಹಿತಿಯ ಪ್ರಕಾರ ಜೂನ್ 1ರಿಂದ ಜೂನ್ 21ರವರೆಗೆ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಿಗೆ ಬರೋಬ್ಬರಿ 40.3 ಟಿಎಂಸಿ ಅಡಿ ನೀರು ಹರಿದುಬಂದಿದೆ. ಕೆಆರ್‌ಎಸ್ 18.9 ಟಿಎಂಸಿ ಅಡಿ ಕಬಿನಿ 14.6 ಟಿಎಂಸಿ ಅಡಿ ಹೇಮಾವತಿ 8.4 ಟಿಎಂಸಿ ಅಡಿ ಮತ್ತು ಹಾರಂಗಿ 5.1 ಟಿಎಂಸಿ ಅಡಿ ನೀರು ಸೇರ್ಪಡೆಯಾಗಿದೆ. ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಜೂನ್ ತಿಂಗಳೊಂದರಲ್ಲೇ 16 ಅಡಿಗಿಂತಲೂ ಹೆಚ್ಚಾಗಿದೆ. ಈ ಎಲ್ಲ ಜಲಾಶಯಗಳ ಒಟ್ಟು ನೀರಿನ ಸಂಗ್ರಹ (ಸೋಮವಾರದವರೆಗೆ) 92.91 ಟಿಎಂಸಿ ಅಡಿ ಇದೆ. ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯವು 114.57 ಟಿಎಂಸಿ ಅಡಿಗಳಾಗಿವೆ.

‘ಬಾಗಿನ’ ಸಲ್ಲಿಕೆ ಸಂಭ್ರಮ

ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹೋದ ವರ್ಷ ಜುಲೈ 29ರಂದು ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ‘ಬಾಗಿನ ಸಲ್ಲಿಕೆ ಪೂಜಾ ಕಾರ್ಯಕ್ರಮ’ ಈ ಸಲ ಮುಂಚಿತವಾಗಿಯೇ ನಡೆಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.