ADVERTISEMENT

ಮುಡುಕುತೊರೆ: ಜಾನುವಾರು ಜಾತ್ರೆಯಲ್ಲಿ ಎಲ್ಲರ ಗಮನಸೆಳೆದ ‘ಕೃಷ್ಣ’

ಒಂದು ವಾರ ನಡೆದ ಜಾತ್ರೆ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 5:10 IST
Last Updated 19 ಫೆಬ್ರುವರಿ 2021, 5:10 IST
ಮುಡುಕುತೊರೆ ದನಗಳ ಜಾತ್ರೆಯಲ್ಲಿ ಸೇರಿದ್ದ ಎತ್ತುಗಳು
ಮುಡುಕುತೊರೆ ದನಗಳ ಜಾತ್ರೆಯಲ್ಲಿ ಸೇರಿದ್ದ ಎತ್ತುಗಳು   

ತಲಕಾಡು: ಕೊರೊನಾ ಭೀತಿಯ ನಡುವೆಯೂ ಮುಡುಕುತೊರೆಯಸುಪ್ರಸಿದ್ಧ ದನಗಳ ಜಾತ್ರೆಯ ಸಂಭ್ರಮ ಕಳೆದುಕೊಳ್ಳಲಿಲ್ಲ. ₹ 30 ಲಕ್ಷ ಮೌಲ್ಯದ ಕಪ್ಪು– ಬಿಳಿ ಬಣ್ಣದ ಹೋರಿ ‘ಕೃಷ್ಣ’ ಜಾತ್ರೆಯಲ್ಲಿ ಆಕರ್ಷಕವಾಗಿದ್ದ.

ಮೈಸೂರು ಜಿಲ್ಲೆಯ ಬೆಟ್ಟದಪುರ, ಚುಂಚನಕಟ್ಟೆ ಹಾಗೂ ಸುತ್ತೂರು ದನಜಾತ್ರೆಗೆ ಜಿಲ್ಲಾಡಳಿತದಿಂದ ಅನುಮತಿ ಸಿಗದೆ ಜಾತ್ರೆ ಕಳೆ ಕಟ್ಟಲಿಲ್ಲ. ಆದರೆ, ಆದರೆ ಮುಡುಕುತೊರೆ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ದನಗಳ ಜಾತ್ರೆಗೆ ಜಿಲ್ಲಾಡಳಿತದಿಂದ ಹಸಿರು ನಿಶಾನೆ ದೊರೆತ ಬೆನ್ನಲ್ಲೇ ವ್ಯವಸ್ಥೆಯೂ ಕಡಿಮೆ ಸಮಯದಲ್ಲಿ ತಕ್ಕಮಟ್ಟಿಗೆ ಆಯಿತು.

ನಿತ್ಯ ಜಾತ್ರೆಗೆ ಬರುವ ರೈತರು ‘ಕೃಷ್ಣ’ ಹೋರಿಯನ್ನು ನೋಡಿ ಸುಂದರವಾಗಿ ಸುಖವಾಗಿ ಸಾಕಿದ್ದಾರೆ ಎಂದು ಖುಷಿಪಟ್ಟು ಹತ್ತಿರ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜಾತ್ರೆಯಲ್ಲಿ ಈತನೇ ಹೈಲೈಟ್‌ ಆಗಿದ್ದನು. ಇದರ ಮಾಲೀಕರಾದ ಮಳವಳ್ಳಿ ತಾಲ್ಲೂಕಿನ ಬೋರೇಗೌಡರು ‘ತಮ್ಮ ಹೋರಿ ಕಪ್ಪು ಸುಂದರ ಕೃಷ್ಣನ ಬೆಲೆ ₹ 30 ಲಕ್ಷ’ ಎಂದು ಹೇಳುತ್ತಿದ್ದರು. ಆಗ ರೈತರು ಹಾಗೂ ಯಾತ್ರಾರ್ಥಿಗಳು ಆಶ್ಚರ್ಯ ಚಕಿತರಾಗಿ ನಿಲ್ಲುತ್ತಿದ್ದರು.

ADVERTISEMENT

ಹೋರಿಯನ್ನು ಇಷ್ಟಪಟ್ಟರೈತರು ತಮ್ಮ ಶಕ್ತ್ಯಾನುಸಾರ ದರಕ್ಕೆ ಕೇಳುತ್ತಿದ್ದರು. ಕೆಲ ರೈತರು ₹ 25 ಲಕ್ಷದಿಂದ 27 ಲಕ್ಷದವರೆಗೂ ಕೇಳಿದರು. ಆದರೆ, ಬೋರೇಗೌಡರು ₹ 30 ಲಕ್ಷ ಫಿಕ್ಸ್‌ ಎಂದರು. ಜಾತ್ರೆಯ ಆಕರ್ಷಣಿಯವಾಗಿದ್ದ ಕೃಷ್ಣ ಕೊನೆಗೂ ಮಾರಾಟವಾಗಲಿಲ್ಲ.

ಜಾತ್ರೆ ನಡೆಯುವ ಮುನ್ಸೂಚನೆ ತಿಳಿದು ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ ಭಾಗಗಳ ರೈತರು ತಮ್ಮ ರಾಸುಗಳೊಂದಿಗೆ ಬಂದು ಜಾತ್ರೆಯ ಸೊಬಗನ್ನು ಹೆಚ್ಚಿಸಿದರು. ಇದಕ್ಕೆ ಪೂರಕವಾಗಿ ರೈತರು ತಮಗಿಷ್ಟವಾದ ಹೋರಿ, ಎತ್ತುಗಳನ್ನು ಖರೀದಿಸಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ರೈತರಿಗೆ ಮತ್ತು ದನದ ಮಾಲೀಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಆರೋಗ್ಯದ ದೃಷ್ಟಿಯಿಂದಲೂ ಮುನ್ನೆಚ್ಚರಿಕೆ ಕ್ರಮವನ್ನು ತಾಲೂಕು ಆಡಳಿತ ಕೈಗೊಂಡಿತ್ತು.

ಜಾತ್ರೆಯಲ್ಲಿ ಇತರ ಹಳ್ಳಿಕಾರ, ನಾಟಿ ರಾಸುಗಳಿಗೆ ಉತ್ತಮ ಬೆಲೆ ಸಿಕ್ಕಿದ್ದು ಮಧ್ಯಮವರ್ಗದ ರಾಸುಗಳಿಗೆ ಸರಿಸಮಾರು ₹ 1 ಲಕ್ಷದಿಂದ ₹ 2 ಲಕ್ಷದ ಒಳಗಿನ ವ್ಯಾಪಾರವು ಜೋರಾಗಿತ್ತು.

ದನಗಳ ಜಾತ್ರೆ ಗುರುವಾರ ಸಂಜೆ ಮುಕ್ತಾಯಗೊಂಡಿತು. ಶುಕ್ರವಾರದಿಂದ ಜನಗಳ ಜಾತ್ರೆ ಆರಂಭ ವಾಗಲಿದ್ದು ಶನಿವಾರ (ಫೆ. 20) ದಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಜರುಗಲಿದೆ.

ಜಾತ್ರೆಯಲ್ಲಿ ರಾಸು ಖರೀದಿಸಿ, ಮತ್ತೊಬ್ಬರಿಗೆ ಮಾರಾಟ ಮಾಡಿ (ಅಡ್ಡ ವ್ಯಾಪಾರ ಅಥವಾ ಕೈ ಬದಲಾವಣೆ) ₹ 50 ಸಾವಿರ ಗಳಿಸಿದೆ ಎಂದು ಮೆಲ್ಲಹಳ್ಳಿ ರೈತಸೋಮಣ್ಣ ಖುಷಿಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.