ADVERTISEMENT

‘ಕೆಎಸ್‌ಡಿಎಲ್' ₹5 ಸಾವಿರ ಕೋಟಿ ವಹಿವಾಟು ಗುರಿ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:09 IST
Last Updated 4 ಜೂನ್ 2025, 14:09 IST
<div class="paragraphs"><p>ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಬುಧವಾರ ಕೆಎಸ್‌ಡಿಎಲ್‌ನಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು.  ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಈಶ್ವರಖಂಡ್ರೆ,&nbsp;ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್. ನಾಡಗೌಡ ಜೊತೆಗಿದ್ದರು – ಪ್ರಜಾವಾಣಿ ಚಿತ್ರ&nbsp; &nbsp; &nbsp; &nbsp; &nbsp; &nbsp; &nbsp; &nbsp;</p></div>

ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಬುಧವಾರ ಕೆಎಸ್‌ಡಿಎಲ್‌ನಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು. ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಈಶ್ವರಖಂಡ್ರೆ, ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್. ನಾಡಗೌಡ ಜೊತೆಗಿದ್ದರು – ಪ್ರಜಾವಾಣಿ ಚಿತ್ರ               

   

ಮೈಸೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಕಳೆದ ಹಣಕಾಸು ವರ್ಷದಲ್ಲಿ ₹417 ಕೋಟಿ ಲಾಭ ಗಳಿಸಿದ್ದು, ಮುಂದಿನ ಐದು ವರ್ಷದಲ್ಲಿ ₹5ಸಾವಿರ ಕೋಟಿ ವಹಿವಾಟಿನ ಗುರಿ ಇದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಇಲ್ಲಿನ ಘಟಿಕೋತ್ಸವ ಭವನದಲ್ಲಿ ಬುಧವಾರ ಕೆಎಸ್‌ಡಿಎಲ್ ಸಂಸ್ಥೆಯ ಸಿಎಸ್‌ಆರ್ ಅನುದಾನದಲ್ಲಿ ಅರಣ್ಯ ಇಲಾಖೆಯ 10 ಸಾವಿರ ವನಪಾಲಕರಿಗೆ ಸುರಕ್ಷಾ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಸಂಸ್ಥೆಯು ಮೈಸೂರು ಸ್ಯಾಂಡಲ್ ಸೋಪ್‌ ಸೇರಿದಂತೆ 23 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ದ್ರವ ಮಾದರಿಯ ಸೋಪ್‌ ಉತ್ಪಾದನೆಗೂ ಚಾಲನೆ ದೊರೆತಿದೆ. 435 ಹೊಸ ವಿತರಕರಿಗೆ ಅವಕಾಶ ನೀಡಲಾಗಿದೆ’ ಎಂದರು.

ADVERTISEMENT

‘ಸಂಸ್ಥೆಯು ₹2 ಕೋಟಿ ಮೌಲ್ಯದ ಉತ್ಪನ್ನಗಳನ್ನಷ್ಟೇ ರಫ್ತು ಮಾಡುತ್ತಿದ್ದು, ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಟ್ರೇಲಿಯಾ ಮೊದಲಾದ ದೇಶಗಳಿಂದ ಶ್ರೀಗಂಧದ ಎಣ್ಣೆ ಅಮದು ಮಾಡಿಕೊಳ್ಳುತ್ತಿದ್ದು, ಅದನ್ನು ತಗ್ಗಿಸಿ ಸ್ಥಳೀಯವಾಗಿ ಶ್ರೀಗಂಧ ಕೃಷಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು’ ಎಂದರು.

ಶ್ರೀಗಂಧದ ನೀತಿ ಸರಳೀಕರಣ:

ಅರಣ್ಯ ಸಚಿವ ಈಶ್ವರ ಖಂಡ್ರೆ, ‘ರಾಜ್ಯದಲ್ಲಿ ರೈತರೂ ಶ್ರೀಗಂಧ ಬೆಳೆಯುತ್ತಿದ್ದು, ಕಟಾವು, ಸಾಗಾಟ ಮಾಡಲು ಅನುವಾಗುವಂತೆ ಶೀಘ್ರವೇ ಶ್ರೀಗಂಧದ ನೀತಿ ಸರಳೀಕರಣ ಮಾಡಿ ಅಧಿಸೂಚನೆ ಹೊರಡಿಸಲಾಗುವುದು’ ಎಂದರು.

‘ಮಿಲಿಟರಿ ಹಾಗೂ ಪೊಲೀಸರಂತೆಯೇ ಅರಣ್ಯ ಇಲಾಖೆಯವರಿಗೂ ಕ್ಯಾಂಟೀನ್‌ ವ್ಯವಸ್ಥೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್. ನಾಡಗೌಡ, ‘ಶ್ರೀಗಂಧದ ಸಸಿಗಳನ್ನು ನಿಗಮದಿಂದ ನೀಡಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೆಳೆಸಲು ಒಡಂಬಡಿಕೆಗೆ ಸಿದ್ದರಿದ್ದೇವೆ. ಇದರಿಂದ ಶ್ರೀಗಂಧದ ಉತ್ಪಾದನೆ ಹೆಚ್ಚಿ, ಆಮದು ತಪ್ಪಲಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಳಖೇಡ, ಎಪಿಸಿಸಿಎಫ್ ಕುಮಾರ್ ಪುಷ್ಕರ್‌, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್ ಪಾಲ್ಗೊಂಡರು.

ಹಾಲಿವುಡ್‌ ನಟಿಯರೂ ರಾಯಬಾರಿಯಾಗುತ್ತಾರೆ; ಎಂ.ಬಿ. ಪಾಟೀಲ

‘ಕೆಎಸ್‌ಡಿಎಲ್‌ ಸಂಸ್ಥೆಯು ಮುಂದೊಂದು ದಿನ ಏಂಜಲೀನಾ ಜ್ಯೂಲಿಯಂತಹ ಹಾಲಿವುಡ್‌ ನಟಿಯರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳುವ ಕಾಲ ಬರುತ್ತದೆ. ಇದನ್ನೆಲ್ಲ ಕೇವಲ ವ್ಯಾಪಾರ ವಿಸ್ತರಣೆಯ ದೃಷ್ಟಿಯಿಂದ ನೋಡಬೇಕು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಪಾದಿಸಿದರು.

ಇಲ್ಲಿ ಬುಧವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿ ‘ಮೈಸೂರು ಸ್ಯಾಂಡಲ್‌ ಸೋಪ್‌ ಕರ್ನಾಟಕದಲ್ಲಿ ಶೇ 18ರಷ್ಟು ಮಾತ್ರ ಮಾರಾಟವಾದರೆ ಹೊರ ರಾಜ್ಯಗಳಲ್ಲಿ ಶೇ 82ರಷ್ಟು ಮಾರಾಟವಾಗುತ್ತಿದೆ. ಅನ್ಯರಾಜ್ಯದ ಗ್ರಾಹಕರನ್ನು ಸೆಳೆಯಲು ನಟಿ ತಮನ್ನಾರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ 2.8 ಕೋಟಿ ಫಾಲೋವರ್ಸ್ ಹೊಂದಿದ್ದಾರೆ’ ಎಂದರು.

‘ಸಂಸ್ಥೆಯು ಈಚೆಗೆ ಇ–ಕಾಮರ್ಸ್ ಸೇವೆ ವಿಸ್ತರಿಸಿದ್ದು ಮಲ್ಲಿಗೆ ಪರಿಮಳದ ಸೋಪ್‌ ಉತ್ಪಾದನೆ ಆರಂಭಿಸಲಾಗುತ್ತಿದೆ. ಹೊರ ರಾಜ್ಯ ಹಾಗೂ ರಫ್ತಿನ ಮೇಲೆ ಗಮನ ಕೇಂದ್ರೀಕರಿಸಲಿದ್ದೇವೆ’ ಎಂದರು. ಬದಲಾವಣೆ ಇಲ್ಲ: ‘ಮುಖ್ಯಮಂತ್ರಿ ಕುರ್ಚಿ ಸದ್ಯ ಖಾಲಿ ಇಲ್ಲ. ಸೂಕ್ತ ಸಮಯದಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ. ಸಂಪುಟ ವಿಸ್ತರಣೆಯೂ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.