
ಮೈಸೂರು: ರಾಜ್ಯದಲ್ಲಿರುವ ಕೆಎಸ್‌ಐಸಿ ಮೈಸೂರು ರೇಷ್ಮೆ ಸೀರೆಗಳ 13 ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಕೊರತೆ ಉಂಟಾಗಿದೆ. ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ಕಾರ್ಖಾನೆಯ ಆವರಣದ ಮಳಿಗೆಯನ್ನು ಸೀರೆಗಳಿಲ್ಲದ ಕಾರಣ ಮುಚ್ಚಲಾಗಿದೆ. ಇದರಿಂದಾಗಿ, ಗ್ರಾಹಕರು ನಿರಾಸೆಯಿಂದ ಹಿಂದಿರುಗಿದರು.
ತಿ.ನರಸೀಪುರದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ನಿಗಮದ ಉತ್ಪಾದನಾ ಘಟಕದ 1,052 ಸಿಬ್ಬಂದಿ ಬುಧವಾರದಿಂದ ಕೆಲಸ ನಿಲ್ಲಿಸಿರುವ ಕಾರಣ, ಸೀರೆ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ದಾಸ್ತಾನು ಅಲಭ್ಯತೆ ಉಂಟಾಗಿದೆ.
‘ಪ್ರತಿಭಟನೆ ನಡೆಸುತ್ತಿರುವ 900 ಮಂದಿ ಹೊರಗುತ್ತಿಗೆ ನೌಕರರೊಂದಿಗೆ ಸಂಸ್ಥೆಯ 150 ಸಿಬ್ಬಂದಿಯೂ ಸೇರಿದ್ದಾರೆ. ಕ್ರೀಡಾಂಗಣ ನಿರ್ಮಾಣವಾದರೆ ತಿ.ನರಸೀಪುರ ಘಟಕವು ಮುಚ್ಚುವ ಜೊತೆಗೆ ಮೈಸೂರು ಹಾಗೂ ಚನ್ನಪಟ್ಟಣದಲ್ಲಿರುವ ಸೀರೆ ನೇಯ್ಗೆಯ ಘಟಕಗಳೂ ಮುಚ್ಚಬಹುದು’ ಎಂದು ನೌಕರರೊಬ್ಬರು ಹೇಳಿದರು.
‘ಘಟಕದಲ್ಲಿನ 5 ಟನ್‌ಗಳ ಸಾಮರ್ಥ್ಯದ ಬಾಯ್ಲರ್ ಸಮೀಪವೇ ಕ್ರೀಡಾಂಗಣ ನಿರ್ಮಾಣದ ನಕ್ಷೆ ರೂಪಿಸುವುದು ಆತಂಕಕಾರಿ. ಆ ಸ್ಥಳದಲ್ಲಿಯೇ ಘಟಕಕ್ಕೆ ಕಲ್ಲಿದ್ದಲುಗಳನ್ನು ತರುವ ದಾರಿ, ನೀರು ಪೂರೈಕೆ ಮಾರ್ಗವಿದೆ. ಇದರಿಂದ ತೊಂದರೆ ಆಗಲಿದೆ’ ಎಂದು ಹೇಳಿದರು.
‘ಶಿಡ್ಲಘಟ್ಟ, ರಾಮನಗರದಿಂದ ನಿತ್ಯ ಒಂದು ಸಾವಿರ ಕೆ.ಜಿ.ಯಷ್ಟು ರೇಷ್ಮೆ ಗೂಡುಗಳ ಖರೀದಿ ನಿಲ್ಲಿಸಲಾಗಿದೆ. ಉತ್ಪಾದನೆ ಇಲ್ಲದೇ ದಾಸ್ತಾನು ಕಷ್ಟವಾಗಿದೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.