ADVERTISEMENT

ಮೈಸೂರು ದಸರಾ: ಕೆಎಸ್‌ಆರ್‌ಟಿಸಿಗೆ ₹7.5 ಕೋಟಿ ಆದಾಯ

ಸಾಂಸ್ಕೃತಿಕ ನಗರಿಗೆ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಆಗಮನ

ಆರ್.ಜಿತೇಂದ್ರ
Published 9 ಅಕ್ಟೋಬರ್ 2025, 6:14 IST
Last Updated 9 ಅಕ್ಟೋಬರ್ 2025, 6:14 IST
<div class="paragraphs"><p>ಮೈಸೂರಿನ ಕೆಎಸ್‌ಆರ್‌ಟಿಸಿ ಸಬ್ ಅರ್ಬನ್ ಬಸ್‌ ನಿಲ್ದಾಣದಲ್ಲಿ ಬಸ್ ಏರಲು ನೆರೆದ ಪ್ರಯಾಣಿಕರು  </p></div>

ಮೈಸೂರಿನ ಕೆಎಸ್‌ಆರ್‌ಟಿಸಿ ಸಬ್ ಅರ್ಬನ್ ಬಸ್‌ ನಿಲ್ದಾಣದಲ್ಲಿ ಬಸ್ ಏರಲು ನೆರೆದ ಪ್ರಯಾಣಿಕರು

   

– ಪ್ರಜಾವಾಣಿ ಸಂಗ್ರಹ ಚಿತ್ರ

ಮೈಸೂರು: ಈ ಬಾರಿಯ ದಸರೆಯಲ್ಲಿ ಸಾಂಸ್ಕೃತಿಕ ನಗರಿಗೆ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದು, ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ ₹7.5 ಕೋಟಿ ಆದಾಯ ತಂದುಕೊಟ್ಟಿದೆ.

ADVERTISEMENT

ವರ್ಷದಿಂದ ವರ್ಷಕ್ಕೆ ದಸರೆಗೆ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇದು ಇನ್ನಷ್ಟು ಹೆಚ್ಚಿದೆ. ಕಳೆದ ವರ್ಷ ದಸರೆಯ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮೈಸೂರು ಘಟಕವು ₹4.84 ಕೋಟಿ ಆದಾಯ ಗಳಿಸಿತ್ತು. ಈ ವರ್ಷ ಸೆ. 25ರಿಂದ ಅಕ್ಟೋಬರ್‌ 3ರವರೆಗೂ ಹೆಚ್ಚುವರಿ ಬಸ್ ಸೇವೆ ಒದಗಿಸಿದ್ದು, ಶೇ 80ರಷ್ಟು ಆದಾಯ ವೃದ್ಧಿಯಾಗಿದೆ. ಪ್ರಯಾಣಿಕರಲ್ಲಿ ಮಹಿಳೆಯರೇ ಹೆಚ್ಚಿದ್ದು, ಒಟ್ಟಾರೆ ಅಂಕಿ–ಸಂಖ್ಯೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

‘ವಿಜಯದಶಮಿಯ ಮರು ದಿನದಂದು (ಅ.3) ಅತಿ ಹೆಚ್ಚು ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ನಂತರದ ಭಾನುವಾರವೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಈ ದಿನಗಳಲ್ಲಿ ಹಿಂದಿನ ವರ್ಷ ಸರಾಸರಿ ₹1.84 ಕೋಟಿ ಆದಾಯವಿದ್ದರೆ, ಈ ವರ್ಷ ₹2 ಕೋಟಿ ದಾಟಿದೆ’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಬಾರಿಯ ನವರಾತ್ರಿ ಸಂದರ್ಭ ಕಳೆದ ವರ್ಷದಷ್ಟೇ ಸಂಖ್ಯೆಯ ಬಸ್‌ಗಳು ಕಾರ್ಯಾಚರಣೆಗೆ ಇಳಿದಿದ್ದವು. ಆದಾಗ್ಯೂ ಉತ್ತಮ ಆದಾಯ ಬಂದಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಯನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ’ ಎಂದರು.

600 ಹೆಚ್ಚುವರಿ ಬಸ್

ದಸರೆಯಲ್ಲಿ ಪ್ರಯಾಣಿಕರ ಸಂದಣಿ ನಿಯಂತ್ರಿಸಲು ಕೆಎಸ್‌ಆರ್‌ಟಿಸಿಯು ಈ ವರ್ಷ 600 ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಿತ್ತು. ಮೈಸೂರು ಘಟಕದಿಂದ 350 ಹಾಗೂ ಬೆಂಗಳೂರು ಘಟಕದಿಂದ 250 ಹೆಚ್ಚುವರಿ ಬಸ್‌ಗಳು ಸಂಚರಿಸಿದ್ದವು.

ಬೆಂಗಳೂರು–ಮೈಸೂರು ನಡುವೆ ಸಾಮಾನ್ಯ ದಿನಗಳಲ್ಲಿ 270 ಬಸ್‌ಗಳು ದಿನಕ್ಕೆ ತಲಾ ಎರಡು ಟ್ರಿಪ್‌ನಂತೆ ಸಂಚರಿಸಿದರೆ, ದಸರೆ ವೇಳೆ 150 ಬಸ್‌ಗಳು ಹೆಚ್ಚುವರಿಯಾಗಿ ಓಡಾಡಿದ್ದವು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ಪ್ರವಾಸಿಗರು ಬಂದಿದ್ದರು. ಇನ್ನೂ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.

ದಸರೆಯ ಸಂದರ್ಭ ಹೊರ ಜಿಲ್ಲೆಗಳ ಪ್ರವಾಸಿಗರಿಗಾಗಿ ಜಲದರ್ಶಿನಿ, ಗಿರಿದರ್ಶಿನಿ, ದೇವ ದರ್ಶಿನಿ ಎಂಬ ವಿಶೇಷ ಟೂರ್‌ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬಾರಿ ದಸರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು ₹7.5 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆ ಇನ್ನಷ್ಟೇ ಸಿಗಬೇಕಿದೆ.
– ಶ್ರೀನಿವಾಸ್‌, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.