ADVERTISEMENT

ಮೈಸೂರು |ಕುಕ್ಕರಹಳ್ಳಿ ಕೆರೆಯಲ್ಲಿ ಶಾಂತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 15:59 IST
Last Updated 11 ಜೂನ್ 2023, 15:59 IST
ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸರಸ್ವತಿಪುರಂನ ಬ್ರಹ್ಮಕುಮಾರಿ ಸಂಸ್ಥೆ ಆಯೋಜಿಸಿದ್ದ ‘ಶಾಂತಿ ನಡಿಗೆ’ಯಲ್ಲಿ ಭಾಗವಹಿಸಿದ್ದ ಯುವಜನರು. ಕವೀಶ್‌ ಗೌಡ, ಡಾ.ಅನಿಲ್‌ ಥಾಮಸ್‌, ಮಂಜುಳಾ ಇದ್ದಾರೆ
ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸರಸ್ವತಿಪುರಂನ ಬ್ರಹ್ಮಕುಮಾರಿ ಸಂಸ್ಥೆ ಆಯೋಜಿಸಿದ್ದ ‘ಶಾಂತಿ ನಡಿಗೆ’ಯಲ್ಲಿ ಭಾಗವಹಿಸಿದ್ದ ಯುವಜನರು. ಕವೀಶ್‌ ಗೌಡ, ಡಾ.ಅನಿಲ್‌ ಥಾಮಸ್‌, ಮಂಜುಳಾ ಇದ್ದಾರೆ   

ಮೈಸೂರು: ನಗರದ ಕುಕ್ಕರಹಳ್ಳಿ ಕೆರೆ ಆವರಣವು ಶಾಂತಿ ನಡಿಗೆಗೆ ಸಾಕ್ಷಿಯಾಯಿತು. ಭಾನುವಾರ ಮುಂಜಾನೆ ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಶಾಂತಿ ಸಂದೇಶ ಹೊತ್ತು ಹೆಜ್ಜೆ ಹಾಕಿದರು.

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸರಸ್ವತಿಪುರಂನ ಬ್ರಹ್ಮಕುಮಾರಿ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತಿ, ಮನೋ ಆರೋಗ್ಯದ ಬಗ್ಗೆ ಅರಿವು, ಸಾಮಾಜಿಕ ಒಳಗೊಳ್ಳುವಿಕೆ, ದೈಹಿಕ ಕ್ಷಮತೆ ಮತ್ತು ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ವಿದ್ಯಾವಿಕಾಸ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಕವೀಶ್‌ ಗೌಡ ನಡಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ‘ಸಮಾಜದೊಂದಿಗೆ ಒಗ್ಗಟ್ಟಾಗಿ ಸಾಗಲು ಮಾಡುವ ಯಾವುದೇ ಕೆಲಸ ನಮ್ಮ ಮನಸ್ಸನ್ನು ಉಲ್ಲಾಸದಿಂದಿರಿಸುತ್ತದೆ. ಜನರ ಜೊತೆ ಬೆರೆಯುವುದು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಸಂಚಾರಕ್ಕೆ ಕಾರಣವಾಗುತ್ತದೆ. ಶಾಂತಿ ಹರಡಲು ಪ್ರೇರೇಪಿಸುತ್ತದೆ’ ಎಂದರು.

ADVERTISEMENT

‘ಜೀವನದಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದು ಮುಖ್ಯ. ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ನಿರ್ದಿಷ್ಠ ಅವಧಿಯ ನಡಿಗೆಯೂ ಸೇರಿದರೆ ಆರೋಗ್ಯ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ’ ಎಂದು ತಿಳಿಸಿದರು.

ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಚೇರ್ಮನ್‌ ಡಾ.ಪಿ.ಎನ್‌.ಗಣೇಶ್‌ ಕುಮಾರ್‌ ಮಾತನಾಡಿ, ‘ಯೋಗವೂ ಉತ್ತಮ ಜೀವನಶೈಲಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಾಂತಿ ಎನ್ನುವುದು ಮೊದಲು ನಮ್ಮಲ್ಲಿ ಹುಟ್ಟಬೇಕು. ಆನಂತರ ಅದೇ ನಮ್ಮನ್ನು ಸಮಾಜದಲ್ಲಿ ಶಾಂತಿ ಹರಡಲು ಅಣಿಗೊಳಿಸುತ್ತದೆ’ ಎಂದರು.

ಕುಕ್ಕರಹಳ್ಳಿ ಕೆರೆಯ ರೈಲ್ವೇ ಗೇಟ್‌ ಬಳಿ ಆರಂಭವಾದ ನಡಿಗೆ ಕೆರೆಯನ್ನು ಒಂದು ಸುತ್ತು ಬಂದು ಸಿಗ್ನಲ್‌ ಬಳಿಯ ಗೇಟ್‌ನಲ್ಲಿ ಮುಕ್ತಾಯವಾಯಿತು. 400 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಸುಮಾರು 5 ಕಿ.ಮೀನಷ್ಟು ನಡಿಗೆ ನಡೆದ ಯುವಜನರಿಗೆ ಕವೀಶ್‌ ಗೌಡ ಭಾಗವಹಿಸುವಿಕೆ ಪತ್ರಗಳನ್ನು ವಿತರಿಸಿದರು.

ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್‌ ಥಾಮಸ್‌, ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕಿ ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.