ತಿ.ನರಸೀಪುರ: ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವೆಂದು ಖ್ಯಾತಿ ಪಡೆದ ದಕ್ಷಿಣ ಕಾಶಿ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಫೆ.10, ಸೋಮವಾರದಿಂದ ಆರಂಭಗೊಳ್ಳುವ ಮೂರು ದಿನಗಳ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.
ದಕ್ಷಿಣ ಭಾರತದ ಪ್ರಯಾಗವೆಂದು, ಕಾಶಿಗಿಂತಲೂ ಒಂದು ಗುಲಗಂಜಿ ತೂಕ ಹೆಚ್ಚು ಪುಣ್ಯ ನೀಡುವ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರಗಳ ಸಂಗಮ ಕ್ಷೇತ್ರವಿದು. 1989ರಲ್ಲಿ ಆರಂಭಗೊಂಡ ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡಯುತ್ತಾ ಬಂದಿದೆ. ಈ ಬಾರಿ 13ನೇ ಕುಂಭಮೇಳಕ್ಕೆ ತಯಾರಿ ಭರದಿಂದ ಸಾಗಿದೆ.
ಉತ್ತರ ಭಾರತದ ಪ್ರಯಾಗರಾಜ್‌ನಲ್ಲಿ ಪ್ರಸ್ತುತ ಮಹಾ ಕುಂಭಮೇಳ ನಡೆಯುತ್ತಿರುವುದರಿಂದ ಅಲ್ಲಿ ಭಾಗಿಯಾಗಲು, ಪುಣ್ಯಸ್ನಾನ ಮಾಡಲು ಸಾಧ್ಯವಾಗದ ಜನರು ಇಲ್ಲಿ ಫೆ.12ರಂದು ನಡೆಯುವ ಮಾಘ ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕ್ಷೇತ್ರ ಇತಿಹಾಸ: ಇಲ್ಲಿನ ಪ್ರಾಚೀನ ಕಾಲದ ಶ್ರೀಗುಂಜಾನರಸಿಂಹಸ್ವಾಮಿ ದೇವಸ್ಥಾನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅಗಸ್ಯ ಮುನಿಗಳು ಸ್ವತಃ ತಾವೇ ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ಅಗಸ್ತೆಶ್ವರಸ್ವಾಮಿ, ಹನುಮಂತೇಶ್ವರ ಸನ್ನಿಧಿಗಳು ವಿರಾಜಮಾನವಾಗಿವೆ. ಈ ಕ್ಷೇತ್ರವು ಗಂಗಾ ತೀರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟು ಹೆಚ್ಚು ಪುಣ್ಯದ ನೆಲೆಯೆಂದು ಗುಂಜಾನರಸಿಂಹಸ್ವಾಮಿಯ ಹಸ್ತದಲ್ಲಿರುವ ತಕ್ಕಡಿಯು ಉದ್ಘೋಷಿಸುತ್ತದೆ.
ಭಾರದ್ವಾಜ ಋಷ್ಯಾಶ್ರಮ, ಚೌಡೇಶ್ವರಿ ದೇವಸ್ಥಾನ, ರುದ್ರಪಾದ, ಅಕ್ಷಯ ವಟವೃಕ್ಷ, ಅಶ್ವತ್ಥ ವೃಕ್ಷ, ಗುಡಿ- ಮಂಟಪಗಳು, ವ್ಯಾಸರಾಜಮಠ ಮೊದಲಾದವು ಈ ಕ್ಷೇತ್ರದ ಪ್ರಾಚೀನ ಪಾವಿತ್ರ್ಯತೆಯನ್ನು ಎತ್ತಿ ತೋರುತ್ತವೆ. ಅನೇಕ ಮತ ಪಂಥ- ಧರ್ಮಗಳು ಏಕತ್ರ ಸಮ್ಮಿಲನಗೊಂಡು ಸರ್ವಧರ್ಮಗಳ ಸಂಗಮ ಕ್ಷೇತ್ರವೂ ಆಗಿ ಕಂಗೊಳಿಸುತ್ತಿದೆ.
ಕುಂಭಮೇಳದಲ್ಲಿ ಭಾಗವಹಿಸುವ ಸ್ವಾಮೀಜಿಗಳನ್ನು ಗುಂಜಾನರಸಿಂಹಸ್ವಾಮಿ ದೇವಸ್ಥಾನ, ವಿಶ್ವಕರ್ಮ ಬೀದಿ, ಭಗವಾನ್ ಟಾಕೀಸ್ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ಮೂಲಕ ತ್ರಿವೇಣಿ ಸಂಗಮಕ್ಕೆ ಮಂಗಳವಾದ್ಯ, ವೀರಗಾಸೆ, ಭಜನಾ ತಂಡಗಳು, ಕೊಂಬು ಕಹಳೆ, ಕಳಶ ಹೊತ್ತ ಸುಮಂಗಲಿಯರು, ಕಂಸಾಳೆ, ಪೂಜಾ ಕುಣಿತ, ಗರುಡಿ ಕುಣಿತ, ಕೋಲಾಟ, ವೀರಮಕ್ಕಳ ಕುಣಿತ, ಕೀಲುಕುದುರೆ, ಪಟ ಕುಣಿತ, ತಮಟೆ ಬಡಿತ, ಬ್ಯಾಂಡ್ ಸೆಟ್ ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.
‘ಕುಂಭಮೇಳದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೂ ಇಲ್ಲಿನ ಮನೆಗಳು ಹಾಗೂ ಅನೇಕ ಸಂಘ-ಸಂಸ್ಥೆಗಳು ನಿತ್ಯ ಅನ್ನದಾಸೋಹ ಹಮ್ಮಿಕೊಳ್ಳಲು ತಯಾರಿ ನಡೆಸಿವೆ. ಕುಂಭಮೇಳದ ಸಿದ್ಧತೆಗಳು ತ್ವರಿತವಾಗಿ ನಡೆಯುತ್ತಿದ್ದು, ಭಾನುವಾರ ಸಂಜೆಯ ವೇಳೆಗೆ ಎಲ್ಲಾ ಸಿದ್ಧತೆಗಳು ಮುಗಿಯಬೇಕಿದೆ’ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವಾಸ್ತವ್ಯಕ್ಕೆ ಕೊರತೆ: ‘ಪ್ರವಾಸಿ ತಾಣವಾಗಿದ್ದರೂ ಸಹ ಇಂತಹ ಉತ್ಸವಗಳ ವೇಳೆ ಪ್ರವಾಸಿಗರು ತಂಗಲು ಯಾವುದೇ ಸರ್ಕಾರಿ ಸ್ವಾಮ್ಯದ ವಸತಿ ಸೌಲಭ್ಯವಿಲ್ಲ. ಯಾತ್ರಿ ನಿವಾಸದಂತಹ ಕೊಠಡಿ ಸೌಲಭ್ಯಗಳ ನಿರ್ಮಾಣವಾಗಬೇಕು. ತರಾತುರಿಯಲ್ಲಿ ಮಾಡುತ್ತಿರುವ ಸಿದ್ಧತೆಗಳ ಜತೆಗೆ ಶಾಶ್ವತ ಯೋಜನೆಗಳ ಅನುಷ್ಠಾನ ಮಾಡಬೇಕು’ ಎಂಬುದು ಸ್ಥಳೀಯರ ಮನವಿ.
1989ರಲ್ಲಿ ಆರಂಭಗೊಂಡ ಕುಂಭಮೇಳ 13ನೇ ಕುಂಭಮೇಳಕ್ಕೆ ಬಿರುಸಿನ ತಯಾರಿ ನಿತ್ಯ ಅನ್ನದಾಸೋಹಕ್ಕೆ ಸಂಘಸಂಸ್ಥೆಗಳ ಸಿದ್ಧತೆ
‘ಮಹೋದಯ ಪುಣ್ಯಸ್ನಾನಕ್ಕೆ ಅಮೃತ ಮುಹೂರ್ತ’ ‘ಶ್ರೀಕ್ರೋಧಿ ನಾಮ ಸಂವತ್ಸರದಲ್ಲಿ ಕುಂಭಮೇಳವು ಘಟಿಸಿರುವುದು ಭಕ್ತರ ಪಾಲಿಗೆ ಪುಣ್ಯಪ್ರದವಾಗಿದೆ. ಈ ಸಾಲಿನ ಕುಂಭಮೇಳಕ್ಕೆ ಲಭಿಸಿರುವ ಅಮೃತ ಮುಹೂರ್ತ ಮಹೋದಯ ಪುಣ್ಯಸ್ನಾನಕ್ಕೆ ಅತ್ಯಂತ ಪ್ರಶಸ್ತವಾಗಿದೆ’ ಎಂದು ಮೈಸೂರು ಜಿಲ್ಲಾಡಳಿತ ಮತ್ತು ಕುಂಭಮೇಳ ಆಚರಣಾ ಸಮಿತಿಯ ಪ್ರಕಟಣೆಯು ತಿಳಿಸಿದೆ. ಮಹೋದಯ ಪಣ್ಯಸ್ನಾನಕ್ಕೆ ವೇಳೆ: ‘ಫೆ.12ರಂದು ಬುಧವಾರ ಬೆಳಿಗ್ಗೆ 11ರಿಂದ 11.30 ಹಾಗೂ ಮಧ್ಯಾಹ್ನ 1.30ರಿಂದ 2 ಮುಹೂರ್ತ ನಿಗದಿಯಾಗಿದೆ. ಪುಣ್ಯಸ್ನಾನದ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ನದಿ ಸಂಗಮದ ನೆಲೆಯಲ್ಲಿ ಹೋಮ ಹವನ ಜಪ-ತಪ ಅಭಿಷೇಕ ಪೂರ್ಣಾಹುತಿ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ವಿವಿಧ ಧರ್ಮಾಚಾರ್ಯರ ಹಾಗೂ ಪ್ರಾಜ್ಞರ ಧರ್ಮೋಪದೇಶಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ’ ಎಂದು ಮಾಹಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.