ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಫೌಂಟೇನ್ ಹಾಳಾಗಿರುವುದು
–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು: ಈಗಾಗಲೇ ಹಲವು ಬಾರಿ ಮಳೆಯಾಗಿದೆ. ಉದ್ಯಾನದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.
ಮೈಸೂರು ನಗರದಲ್ಲಿ ಒಟ್ಟು 529 ಉದ್ಯಾನಗಳಿದ್ದು, ಅವುಗಳಲ್ಲಿ 295 ಉದ್ಯಾನಗಳು ಅಭಿವೃದ್ಧಿಯಾಗಿವೆ. 234 ಉದ್ಯಾನಗಳು ಯಾವುದೇ ಅಭಿವೃದ್ಧಿಯಾಗಿಲ್ಲ.
ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್, ವ್ಯಾಯಾಮ ಹಾಗೂ ವಿಶ್ರಾಂತಿಗೆ ಉದ್ಯಾನಗಳು ಅನುಕೂಲಕರವಾಗಿವೆ. ಆದರೆ, ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಗಿಡಗಂಟಿಗಳಿಂದಲೇ ತುಂಬಿ ಹೋಗಿವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಾಗದ ಸೇರಿದಂತೆ ತ್ಯಾಜ್ಯವನ್ನು ಬಿಸಾಡಲಾಗಿದೆ. ಕೆಲವು ಕಡೆ ಕುಳಿತುಕೊಳ್ಳುವ ಆಸನಗಳು ಮುರಿದುಬಿದ್ದರೆ, ಮಕ್ಕಳ ಆಟಿಕೆಗಳು ಹಾಳಾಗಿವೆ. ಕೆಲವು ಉದ್ಯಾನಗಳಲ್ಲಿ ವ್ಯಾಯಾಮದ ಉಪಕರಣಗಳನ್ನು ಅಳವಡಿಸಿದ್ದರೂ, ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿವೆ.
ಉದ್ಯಾನಗಳಲ್ಲಿ ದೀಪದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಸಂಜೆ ಮತ್ತು ರಾತ್ರಿ ವೇಳೆ ಉದ್ಯಾನಗಳಿಗೆ ಹೋಗಲು ಮಹಿಳೆಯರು ಮತ್ತು ಮಕ್ಕಳು ಭಯಪಡುವಂತಾಗಿದೆ. ಅಲ್ಲದೇ ಕೆಲವು ಉದ್ಯಾನಗಳಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಅನೈತಿಕ ಚಟುವಟಿಕೆಯ ತಾಣವಾಗುತ್ತಿವೆ. ಅಲ್ಲಲ್ಲಿ ಮದ್ಯದ ಖಾಲಿ ಬಾಟಲಿಗಳು, ಗಾಜುಗಳನ್ನು ಎಸೆದಿದ್ದು, ನಾಗರಿಕರಿಗೆ ಕಿರಿಕಿರಿಯಾಗುತ್ತಿದೆ.
ಸರಸ್ವತಿಪುರಂ ಬಳಿ ರಾಮಮಂದಿರ ಉದ್ಯಾನದಲ್ಲಿ ಆಟಿಕೆಗಳನ್ನು ಅಳವಡಿಸಲಾಗಿದ್ದು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದರೂ ನಿರ್ವಹಣೆ ಚೆನ್ನಾಗಿಲ್ಲ. ಶೌಚಾಲಯದಲ್ಲಿ ನಿರಂತರವಾಗಿ ನೀರು ಸುರಿಯುತ್ತಿರುತ್ತದೆ. ಅದನ್ನು ನಿಲ್ಲಿಸುವ ಗೋಜಿಗೆ ಹೋಗಿಲ್ಲ.
‘ಈ ಹಿಂದೆ ಪಾರ್ಕ್ ತೀರ ಅವ್ಯವಸ್ಥೆಯಾಗಿತ್ತು. ಈಗ ಸ್ವಲ್ಪ ಸುಧಾರಿಸಿದೆ. ಜನರೂ ಬರುತ್ತಾರೆ’ ಎಂದು ಪಾರ್ಕ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ತೋಟಗಾರ ಮರಿಗೌಡ.
ನಗರದ ಶಾಂತಲಾ ಥಿಯೇಟರ್ ಎದುರು ಇರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಫೌಂಟೆನ್‌ನಲ್ಲಿ ಕೊಳಚೆ ನೀರು ಇದ್ದು, ಸೊಳ್ಳೆಗಳ ತಾಣವಾಗಿದೆ. ಪಾರ್ಕ್ ಕಾಂಪೌಂಡ್ ಬಳಿಯೇ ಹಸುಗಳನ್ನು ಕಟ್ಟಿ ಹಾಕುವುದು ಕೂಡ ಕಂಡುಬರುತ್ತಿದೆ.
‘ವಿಜಯನಗರದ ಎರಡನೇ ಹಂತದ ಎಸ್‌ಬಿಐ ಬ್ಯಾಂಕ್ ಬಳಿಯ ಉದ್ಯಾನದಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದವು. ಹಲವು ಉದ್ಯಾನಗಳಿಗೆ ಬೀದಿ ದೀಪಗಳೇ ಇಲ್ಲ. ಪಾರ್ಕ್‍ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ. ವಿಜಯನಗರ ಎರಡನೇ ಹಂತದ ಕೆಡಿ ಸರ್ಕಲ್ ಬಳಿ ಇರುವ ಉದ್ಯಾನದಲ್ಲಿ ನಿರ್ವಹಣೆ ಚೆನ್ನಾಗಿದ್ದರೂ ಬೀದಿ ದೀಪಗಳು ಇಲ್ಲ. ವಿಜಯನಗರ ಮೊದಲ ಹಂತ ಯೋಗ ನರಸಿಂಹಸ್ವಾಮಿ ದೇವಾಲಯದ ಬಳಿಯ ಉದ್ಯಾನದಲ್ಲೂ ಇದೇ ಪರಿಸ್ಥಿತಿ ಇದೆ. ಮಕ್ಕಳ ಆಟಿಕೆಗಳು ಹಾಳಾದರೆ ಅವುಗಳನ್ನು ದುರಸ್ತಿ ಮಾಡುತ್ತಿಲ್ಲ’ ಎಂದು ಆಮ್ ಆದ್ಮಿ ಪಾರ್ಟಿಯ ಅನಂತ್ ರಾಜ್ ಸೂರ್ಯ ದೂರಿದರು.
‘ನಗರದ 295 ಉದ್ಯಾನಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಅವರು ನಿರಂತರವಾಗಿ ಸ್ವಚ್ಛಗೊಳಿಸುವುದು ಗಿಡಗಳಿಗೆ ನೀರುಣಿಸುವುದು ಕಳೆ, ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸುತ್ತಾರೆ. ಆದರೆ, ಅಭಿವೃದ್ಧಿಯಾಗದೇ ಇರುವ 234 ಉದ್ಯಾನಗಳಲ್ಲಿ ಮೂರು ತಿಂಗಳಿಗೊಮ್ಮೆ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತದೆ’ ಎಂದು ಮಹಾನಗರ ಪಾಲಿಕೆ ತೋಟಗಾರಿಕೆ ವಿಭಾಗದ ಎಇಇ ಪಿ.ಕೆ.ಮೋಹನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಗರದ ಉದ್ಯಾನಗಳ ನಿರ್ವಹಣೆಗೆ ವರ್ಷಕ್ಕೆ ₹9.40 ಕೋಟಿ ವರ್ಷಕ್ಕೆ ವೆಚ್ಚವಾಗಲಿದ್ದು, ಎಸ್‌ಎಫ್‌ಸಿ ಶೇ 5ರಷ್ಟು ಅನುದಾನದಲ್ಲಿ ಮಕ್ಕಳಿಗೆ ಆಟಿಕೆ ಯಂತ್ರಗಳು, ವ್ಯಾಯಾಮ ಉಪಕರಣಗಳ ಖರೀದಿ ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತದೆ’ ಎಂದರು.
ಪೂರಕ ಮಾಹಿತಿ: ಎಚ್.ಎಸ್.ಸಚ್ಚಿತ್, ಪಂಡಿತ್ ನಾಟೀಕಾರ್, ಎಂ.ಮಹದೇವ್, ಸತೀಶ್ ಆರಾಧ್ಯ.
ನಗರ ವ್ಯಾಪ್ತಿಯಲ್ಲಿ ಅಧಿಕೃತವಾಗಿ 35 ಉದ್ಯಾನಗಳಿದ್ದು ಖಾಸಗಿ ಬಡಾವಣೆಗಳ ಉದ್ಯಾನ ನಗರಸಭೆಗೆ ಹಸ್ತಾಂತರವಾಗಿಲ್ಲ. ನಿರ್ವಹಣೆಗೆ ಆಗಸ್ಟ್‌ನಲ್ಲಿ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅನುದಾನ ಕಾಯ್ದಿರಿಸಲಾಗುವುದು.ಮಾನಸಾ ಆಯುಕ್ತೆ ಹುಣಸೂರು ನಗರಸಭೆ
ಕೆ.ಆರ್.ನಗರ ಪಾರ್ಕ್ ಅಭಿವೃದ್ಧಿಗೆ ಪುರಸಭೆಯಲ್ಲಿ ಅನುದಾನ ಇದೆ. ಒಂದು ಹಂತದ ಕಾಮಗಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಉದ್ಯಾನ ಅಭಿವೃದ್ಧಿಗೊಳಿಸಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.ಜಯಣ್ಣ ಪುರಸಭೆ ಮುಖ್ಯಾಧಿಕಾರಿ ಕೆ.ಆರ್.ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.