ADVERTISEMENT

ನಿರ್ವಹಣೆ ಕೊರತೆ: ಸೊರಗಿದ ಕಾವೇರಿ ಸೇತುವೆ

85 ವರ್ಷಗಳಿಗೂ ಹಳೆಯದು; ಶಿಥಿಲಾವಸ್ಥೆ ತಲುಪುತ್ತಿರುವ ಸೇತುವೆ, ಸ್ಥಳೀಯರ ಆತಂಕ

ಎಂ.ಮಹದೇವ್
Published 29 ನವೆಂಬರ್ 2023, 5:16 IST
Last Updated 29 ನವೆಂಬರ್ 2023, 5:16 IST
ತಿ.ನರಸೀಪುರದ ಹಳೆಯ ಕಾವೇರಿ ಸೇತುವೆಯ ರಸ್ತೆಯ ಡಾಂಬರು ಕಿತ್ತು ಹೋಗಿದೆ
ತಿ.ನರಸೀಪುರದ ಹಳೆಯ ಕಾವೇರಿ ಸೇತುವೆಯ ರಸ್ತೆಯ ಡಾಂಬರು ಕಿತ್ತು ಹೋಗಿದೆ   

ತಿ.ನರಸೀಪುರ: ಪಟ್ಟಣದ ಹಳೆಯ ಪಾರಂಪರಿಕ ಸೇತುವೆಗಳಲ್ಲಿ ಒಂದಾದ ಕಾವೇರಿ ಸೇತುವೆಯು ನಿರ್ವಹಣೆ ಕೊರತೆಯಿಂದ ಸೊರಗಿದೆ. ಗುಂಡಿಗಳು ಬಿದ್ದಿದ್ದು, ಗಿಡಗಂಟಿಗಳಿಂದ ಆವೃತವಾಗಿ ಶಿಥಿಲಾವಸ್ಥೆ ತಲುಪುತ್ತಿದೆ.

ಇಲ್ಲಿನ ತ್ರಿವೇಣಿ ಸಂಗಮದ ನದಿಗಳಲ್ಲಿ ಒಂದಾದ ಕಾವೇರಿ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 85 ವರ್ಷಗಳಿಗೂ ಹಳೆಯದಾದ ಕಾವೇರಿ ಹಾಗೂ ಕಪಿಲಾ ನದಿಯ ಸೇತುವೆಗಳು ತಾಲ್ಲೂಕಿನ ಹೆಮ್ಮೆಯ ಪಾರಂಪಾರಿಕ ಸೇತುವೆಗಳು.

ಈ ಎರಡು ಸೇತುವೆಗಳಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಪಿಲಾ ಮೇಲ್ಸೇತುವೆ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಕಾವೇರಿ ಸೇತುವೆ ನಿರ್ಮಾಣವಾಗಿವೆ. ಎರಡು ಸೇತುವೆಗಳು ವಿಶಾಲ ರಸ್ತೆಗಳನ್ನು ಹೊಂದಿವೆ. ವಾಹನ ಹಾಗೂ ಜನ ಸಂಚಾರ ಹೊಸ ಸೇತುವೆಗಳ ಮೇಲೆ ಹೆಚ್ಚಾದ ಬಳಿಕ ಹಳೆಯ ಸೇತುವೆಗಳ ಬಳಕೆ ನಿಧಾನವಾಗಿ ಕಡಿಮೆಯಾಗಿದೆ. ಒಂದಷ್ಟು ಬೈಕ್ ಸವಾರರು ಮಾತ್ರ ಕಾವೇರಿ ನದಿಯ ಹಳೆಯ ಸೇತುವೆ ರಸ್ತೆಯಲ್ಲಿ ಸಂಚರಿಸುತ್ತಾರೆ. ತ್ರಿವೇಣಿ ಸಂಗಮಕ್ಕೆ ಕಲಶಪ್ರಾಯದಂತಿರುವ ಈ ಸೇತುವೆಯ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.

ADVERTISEMENT

ಹೊಸ ಸೇತುವೆ ನಿರ್ಮಾಣಕ್ಕೂ ಮುನ್ನ 1936ರಿಂದಲೂ ಕಾವೇರಿ ಸೇತುವೆ ಮಾರ್ಗವಾಗಿ ಬನ್ನೂರು, ಕಿರಗಾವಲು, ಮಳವಳ್ಳಿ, ಮಂಡ್ಯ, ಬೆಂಗಳೂರು ಹಾಗೂ ತಾಲ್ಲೂಕಿನ ಸೋಸಲೆ, ಬನ್ನೂರು ಹೋಬಳಿಯ ಗ್ರಾಮಗಳಿಗೆ ತೆರಳಲು ಇದು ಪ್ರಮುಖ ಕೊಂಡಿಯಾಗಿತ್ತು. ಪ್ರಸ್ತುತ ಕಾವೇರಿ ಹಳೆಯ ಸೇತುವೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಸೇತುವೆಯ ಕಂಬಿಗಳ ಮಧ್ಯೆ ಹಾಗೂ ಎರಡು ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಕೆಲವೆಡೆ ಕಂಬಿಗಳು ತುಕ್ಕು ಹಿಡಿಯುತ್ತಿವೆ. ಅವುಗಳಿಗೆ ಬಣ್ಣ ಬಳಿದು ಎಷ್ಟೋ ವರ್ಷಗಳಾಗಿದೆ.

ಉತ್ತಮ ವಿನ್ಯಾಸವಿರುವ ಈ ಸೇತುವೆ ನಿರ್ವಹಣೆ ಕೊರತೆಯಿಂದ ತನ್ನ ಪಾರಂಪರಿಕ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ನಿರ್ವಹಣೆ ಕೊರತೆ ಇದ್ದಲ್ಲಿ ವರ್ಷದಿಂದ ವರ್ಷಕ್ಕೆ ಸೇತುವೆ ಶಿಥಿಲವಾಗಿ ತಮ್ಮ ಸಾಮರ್ಥ್ಯ ಕಳೆದುಕೊಳ್ಳುವ ಆತಂಕವಿದೆ. ಬ್ರಿಟಿಷರು ಹಾಗೂ ಮೈಸೂರು ರಾಜರ ಆಡಳಿತ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ರಾಜ್ಯದ ಉತ್ತಮ ಮಾದರಿಯ ಸೇತುವೆಗಳನ್ನು ಉಳಿಸಬೇಕು. ತಿ.ನರಸೀಪುರ ಐತಿಹಾಸಿಕ ಪುಣ್ಯ ಹಾಗೂ ಪ್ರವಾಸಿ ಕ್ಷೇತ್ರವಾದ್ದರಿಂದ ಪ್ರವಾಸಿಗರು ಬರುತ್ತಾರೆ. ಸೇತುವೆಗಳು ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಸೇತುವೆಯನ್ನು ಸಂರಕ್ಷಿಸಲು ಸೂಕ್ತ ನಿರ್ವಹಣೆ ಮಾಡಲು ಇಲಾಖೆ ಗಮನಹರಿಸಬೇಕು ಎಂಬುದು ತಾಲ್ಲೂಕಿನ ಜನರ ಆಗ್ರಹ.

ಸೇತುವೆ ಮಧ್ಯದಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ
ಸೇತುವೆಯ ಕಂಬಿಗಳ ಮಧ್ಯೆ ಗಿಡಗಂಟಿಗಳು ಬೆಳೆದಿವೆ

‘ಸೇತುವೆ ನಿರ್ವಹಣೆ ಅಗತ್ಯ’

‘ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಹಳೆಯ ಸೇತುವೆಗಳು ಐತಿಹಾಸಿಕ ಪಾರಂಪರಿಕ ಮಾದರಿಗಳು. ಹಲವಾರು ದಶಕಗಳು ಜನರ ಬದುಕಿಗೆ ಸಹಕಾರಿಯಾಗಿವೆ. ಇಂತಹ ಸೇತುವೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿಂದಿನ ತಲೆಮಾರಿನ ಜನರು ಬಳಸಿದ ಸೇತುವೆಗಳು ನಮ್ಮ ಮುಂದಿನ ಪೀಳಿಗೆಯ ಜನರಿಗೆ ಸ್ಮಾರಕಗಳಂತೆ ಕಾಣುತ್ತಿದೆ. ಸೇತುವೆಯ ಸಾಮರ್ಥ್ಯ ಕಳೆದುಕೊಳ್ಳದಂತೆ ನಿರ್ವಹಣೆ ಮಾಡಿ ಜನರ ಬಳಕೆಗೆ ಮತ್ತಷ್ಟು ರೀತಿಯಲ್ಲಿ ಅನುಕೂಲ ಕಲ್ಪಿಸುವುದು ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ’ ಎಂದು ದಸಂಸ ಜಿಲ್ಲಾ ಸಂಚಾಲಕ ಎಸ್.ಚಂದ್ರಶೇಖರ್ ಹೇಳಿದರು.

‘ಕಾಮಗಾರಿ ಶೀಘ್ರದಲ್ಲೇ ಆರಂಭ’

‘ಸೋಸಲೆ ವೃತ್ತದಿಂದ ತಿರಮಕೂಡಲಿನ ಚೌಡಯ್ಯ ವೃತ್ತದವರೆಗಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಈ ವ್ಯಾಪ್ತಿಯೊಳಗೆ ಸೇತುವೆಯ ರಸ್ತೆಯೂ ಸೇರಿದೆ. ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ರಸ್ತೆಯುದ್ದಕ್ಕೂ ಗಿಡಗಂಟಿಗಳನ್ನು ತೆರವುಗೊಳಿಸಿ ಗುಂಡಿಗಳನ್ನು ಮುಚ್ಚಿ ರಸ್ತೆ ಅಭಿವೃದ್ಧಿ ಮಾಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಎಸ್. ಸತೀಶ್ ಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.