ಮೈಸೂರು: ಬಾಲ್ಯ ವಿವಾಹಕ್ಕೆ ನಲುಗಿ, ಬಿಡುಗಡೆ ಪಡೆದು ‘ಕುಂಚ’ ಹಿಡಿದು ಕಲಾವಿದೆಯಾದ ಬಾಲಕಿಯ ಕಥನ ಹೇಳಿದ ‘ಲಕುಮಿ’ ಕಿರುಚಿತ್ರವು ‘ದಸರಾ ಚಲನಚಿತ್ರೋತ್ಸವ–2025’ರ ಅತ್ಯುತ್ತಮ ಪ್ರಶಸ್ತಿ ಪಡೆಯಿತು.
ಮಾಲ್ ಮೈಸೂರಿನ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಉತ್ಸವದ ‘ಕಿರುಚಿತ್ರ ಸ್ಪರ್ಧೆ’ಯಲ್ಲಿ ಗುರುವಾರ ನಟರಾದ ದೀಪಾ ರವಿಶಂಕರ್, ಅಶ್ವಿನ್ ಕುಮಾರ್ ಅವರು ಚಿತ್ರದ ನಿರ್ದೇಶಕ ಸುತನ್ ದಿಲೀಪ್ ಅವರಿಗೆ ಪ್ರಶಸ್ತಿ ಜೊತೆ ₹ 20 ಸಾವಿರ ನಗದು ಪ್ರದಾನ ಮಾಡಿದರು.
ಪುಸ್ತಕ ‘ಪ್ರೀತಿ’ಯನು ತೋರುವ ‘ಹಿಂಬಾಲಿಸು’ ಚಿತ್ರ, ‘ಹಬ್ಬದ ಹಸಿವು’ ಚಿತ್ರಗಳು ಕ್ರಮವಾಗಿ 2ನೇ ಹಾಗೂ 3ನೇ ಅತ್ಯುತ್ತಮ ಕಿರು ಚಿತ್ರ ಪ್ರಶಸ್ತಿ ಪಡೆದವು. ಈ ಚಿತ್ರಗಳ ನಿರ್ದೇಶಕರಾದ ಮಣಿಕಂಠ ಮತ್ತು ಡಿ.ಎಸ್.ಶಶಿಕುಮಾರ ಪ್ರಶಸ್ತಿ ಜೊತೆಗೆ ಕ್ರಮವಾಗಿ ₹ 15 ಸಾವಿರ ಹಾಗೂ ₹ 10 ಸಾವಿರ ಪಡೆದರು.
‘ಲಕುಮಿ’ಯ ಸುತನ್ ದಿಲೀಪ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ, ‘ಹಿಂಬಾಲಿಸು’ ಚಿತ್ರದ ಬೀ..ವೀ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೀಪಾ ರವಿಶಂಕರ್ ಮಾತನಾಡಿ, ‘ಚಿಕ್ಕಂದಿನಲ್ಲಿ ಅಮ್ಮ ಕೊತ್ತಂಬರಿ ಸೊಪ್ಪು ತರಲು ದೂರದ ಅಂಗಡಿಗೆ ಕಳುಹಿಸುತ್ತಿದ್ದಳು. ಒಂದು ಕಂತೆ ಸೊಪ್ಪಿಗೆ ಅಷ್ಟು ದೂರ ಹೋಗಬೇಕೆ ಎಂದು ಪ್ರಶ್ನಿಸುತ್ತಿದ್ದೆ. ಸಿನಿಮಾವಾಗಲಿ, ಕಿರುಚಿತ್ರವಾಗಲಿ ಹಾಕುವ ಶ್ರಮ, ಕ್ರಮಿಸಬೇಕಾದ ದೂರ ಒಂದೇ ಆಗಿರುತ್ತದೆ. ಅಡುಗೆ ಚೆನ್ನಾಗಿ ಆಗಬೇಕಲ್ಲವೇ’ ಎಂದು ಉದಾಹರಿಸಿದರು.
‘ಪ್ರಶಸ್ತಿ ಸಿಗದವರು ಬೇಸರ ಪಡಬಾರದು. 60 ಗಂಟೆಗಳ ಕಡಿಮೆ ಸಮಯದಲ್ಲಿ ಕಿರುಚಿತ್ರ ಮಾಡುವುದು ಜನಪ್ರಿಯ ಸಿನಿಮಾಕ್ಕಿಂತ ಕಷ್ಟ. ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು, ಕಿರು ಸಮಯದಲ್ಲಿ ದೊಡ್ಡ ಆಲೋಚನೆಗಳನ್ನು ಕಲ್ಪಿಸುವಂತೆ ಮಾಡುವುದೇ ಕಿರುಚಿತ್ರಗಳು. ಹೀಗಾಗಿ, ಸವಾಲು ಹೆಚ್ಚೇ ಇವೆ. ಇಲ್ಲಿ ನೂರಾರು ಸಹೃದಯರು ಚಿತ್ರ ವೀಕ್ಷಿಸಿರುವುದು ಹೆಮ್ಮೆ. ಚಿತ್ರ ತಯಾರಿಯಲ್ಲಿ ಸಿಕ್ಕ ಅನುಭವಕ್ಕೆ ಬೆಲೆ ಕಟ್ಟಲಾದೀತೆ’ ಎಂದರು.
ಹಿರಿಯ ಸಿನಿಮಾ ಛಾಯಾಗ್ರಾಹಕ ಅಶ್ವತ್ ನಾರಾಯಣ ಅವರನ್ನು ದಸರಾ ಚಲನಚಿತ್ರೋತ್ಸವ ಉಪ ಸಮಿತಿಯು ಸನ್ಮಾನಿಸಿತು.
ವಿಶೇಷಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರಾದ ಕಾವಾ ಕಾಲೇಜಿನ ಪ್ರೊ.ಚರಿತಾ, ಇಎಂಆರ್‌ಸಿ ತಂತ್ರಜ್ಞ ಗೋಪಿನಾಥ್, ಉಪಸಮಿತಿ ಅಧ್ಯಕ್ಷ ಸಿದ್ಧರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.