ADVERTISEMENT

ಮೈಸೂರು: 24ಕ್ಕೆ ಎಡಪಕ್ಷಗಳ ಪ್ರತಿಭಟನೆ

ಕೋವಿಡ್‌ ಪರಿಹಾರ ನೀಡಲು ಆಗ್ರಹ l ಶ್ರಮಿಕರಿಗೆ ನೆರವಾಗಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 10:35 IST
Last Updated 22 ಜನವರಿ 2022, 10:35 IST
ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆಯ ಪೋಸ್ಟರ್‌ ಅನ್ನು ಎಡಪಕ್ಷಗಳ ಮುಖಂಡರಾದ ದೇವದಾಸ್‌, ಉಗ್ರನರಸಿಂಹೇಗೌಡ, ಜಗದೀಶ್‌ಸೂರ್ಯ, ಚೌಡಳ್ಳಿ ಜವರಯ್ಯ, ಬಿ.ರವಿ ಬಿಡುಗಡೆ ಮಾಡಿದರು
ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆಯ ಪೋಸ್ಟರ್‌ ಅನ್ನು ಎಡಪಕ್ಷಗಳ ಮುಖಂಡರಾದ ದೇವದಾಸ್‌, ಉಗ್ರನರಸಿಂಹೇಗೌಡ, ಜಗದೀಶ್‌ಸೂರ್ಯ, ಚೌಡಳ್ಳಿ ಜವರಯ್ಯ, ಬಿ.ರವಿ ಬಿಡುಗಡೆ ಮಾಡಿದರು   

ಮೈಸೂರು: ಕೊರೊನಾ ಮೂರನೇ ಅಲೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಎಡಪಕ್ಷಗಳು ಜ.24ರ ಸೋಮವಾರ ರಾಜ್ಯದಾದ್ಯಂತ ಜಂಟಿಯಾಗಿ ಪ್ರತಿಭಟನೆ ನಡೆಸಲಿವೆ.

ಸಿಪಿಐ, ಸಿಪಿಎಂ, ಎಸ್‌ಯುಸಿಐ, ಸಿಪಿಐಎಂಎಲ್‌, ಸ್ವರಾಜ್‌ ಇಂಡಿಯಾ ಸೇರಿದಂತೆ 7 ಎಡ ಪ್ರಜಾಪ್ರಭುತ್ವವಾದಿ ಪಕ್ಷಗಳ ಮುಖಂಡರು ಇಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ‘ಜೀವ ರಕ್ಷಿಸಿ, ಜೀವನ ಉಳಿಸಿ, ಜೀವಿಸಲು ಬಿಡಿ ಅಭಿಯಾನ’ದ ಭಾಗವಾಗಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಸಿಪಿಐಎಂನ ಜಗದೀಶ್‌ ಸೂರ್ಯ ಮಾತನಾಡಿ, ‘ಕೋವಿಡ್‌ ಸಂತ್ರಸ್ತ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ನೀಡಬೇಕು. ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ನೆರವು ನೀಡಬೇಕು. ಬಿಪಿಎಲ್‌ ಕುಟುಂಬಗಳಿಗೆ ಮಾಸಿಕ ₹ 10 ಸಾವಿರ ಹಾಗೂ ನರೇಗಾ ಯೋಜನೆಯ ಕೂಲಿಯನ್ನು ₹ 600ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜನರು ಸಂಕಷ್ಟದಲ್ಲಿರುವುದರಿಂದ ಶಾಲಾ– ಕಾಲೇಜುಗಳ ಶುಲ್ಕವನ್ನು ಮನ್ನಾ ಮಾಡಬೇಕು. ಕಾರ್ಮಿಕರು, ರೈತರ ಪರವಾದ ಜನಪರ ಯೋಜನೆಗಳನ್ನು ಜಾರಿಗೊಳಿಸಿ ನೆರವಾಗಬೇಕು. ಸ್ವಸಹಾಯ ಸಂಘಗಳಲ್ಲಿನ ರೈತರು, ಶ್ರಮಿಕರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮಾತನಾಡಿ, ‘ಕೋವಿಡ್‌ ನಂತರ ವಿಶ್ವದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದೆ. ಭಾರತದಲ್ಲೂ ಬಡವರು, ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದರೆ, 100 ಮಂದಿ ಶ್ರೀಮಂತರ ಆಸ್ತಿಯು ಮೂರು ಪಟ್ಟು ಹೆಚ್ಚಾಗಿರುವುದನ್ನು ಆಕ್ಸ್‌ಫಾಮ್‌ ಇಂಡಿಯಾ ವರದಿ ಬೆಳಕು ಚೆಲ್ಲಿದೆ. ಜನರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ಉದ್ಯಮಿಗಳ ಬೆಂಬಲಕ್ಕೆ ನಿಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದುಡಿಯುವ ವರ್ಗಕ್ಕೆ ನ್ಯಾಯ ಸಿಗುವುದಕ್ಕಾಗಿ ಪ್ರತಿಭಟನೆ ರಾಜ್ಯದಾದ್ಯಂತ ನಡೆಸಲಾಗುತ್ತಿದ್ದು, ಮನೆ ಮನೆಗಳಲ್ಲಿ ಆರಂಭವಾಗಲಿದೆ. ಬೇಡಿಕೆ ಈಡೇರಿಸುವಂತೆ ಇದೇ 24ರಂದು ಮುಖ್ಯಮಂತ್ರಿಗಳಿಗೆ ಎಡಪಕ್ಷಗಳ ರಾಜ್ಯಾಧ್ಯಕ್ಷರು ಮನವಿ ಸಲ್ಲಿಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲೂ ನಡೆಯುವ ಪ್ರತಿಭಟನೆಗಳಲ್ಲಿ ಕಾರ್ಯಕರ್ತರು, ನಾಗರಿಕರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಸಿಪಿಐಎಂಎಲ್‌ನ ಚೌಡಳ್ಳಿ ಜವರಯ್ಯ ಮಾತನಾಡಿ, ‘ವಸತಿ ಶಾಲೆಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳನ್ನಾಗಿ ಬದಲಾಯಿಸಿ ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆ. ಇದನ್ನು ಮಾಡಬಾರದು. ಆನ್‌ಲೈನ್‌ ಶಿಕ್ಷಣವು ಉಳ್ಳವರ ಮಕ್ಕಳಿಗೆ ಮಾತ್ರ ದೊರೆಯುತ್ತಿದೆ. ಸರ್ಕಾರಗಳು ಖಾಸಗಿ ಆಸ್ಪತ್ರೆಗಳನ್ನು ವಹಿಸಿಕೊಂಡು ಉಚಿತ ಚಿಕಿತ್ಸೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಿಪಿಐನ ದೇವದಾಸ್‌ ಇದ್ದರು.

‘ಸರ್ಕಾರದಿಂದ ಕೊಳ್ಳೆ’: ‘ಜನರ ಬದುಕು ಸಂಕಷ್ಟದಲ್ಲಿದ್ದಾಗ ನೆರವಾಗಬೇಕಾದದು ಸರ್ಕಾರದ ಕರ್ತವ್ಯ. ಆದರೆ, ಕೋವಿಡ್‌ ಸಂದರ್ಭವನ್ನು ಕೊಳ್ಳೆ ಹೊಡೆಯಲು ಸರ್ಕಾರವು ಬಳಸಿಕೊಳ್ಳುತ್ತಿದೆ. ಒಕ್ಕೂಟ ಸರ್ಕಾರಗಳು ಜನರ ನೆಮ್ಮದಿಗಾಗಿ ಶ್ರಮಿಸಬೇಕು’ ಎಂದು ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಒತ್ತಾಯಿಸಿದರು.

‘ಜನರ ಉಳಿತಾಯ ಹಣವನ್ನು, ಬದುಕನ್ನು ಕಿತ್ತುಕೊಳ್ಳದೇ ಜನಪರ ಯೋಜನೆಗಳನ್ನು ಜಾರಿಗೊಳಿಸಿ ನೆರವಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.