
ಮೈಸೂರಿನ ನಿವೇದಿತಾ ನಗರದಲ್ಲಿ ಬಿಜೆಪಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು. ಶಿವಕುಮಾರ್, ರಘು ಕೌಟಿಲ್ಯ, ಎಲ್. ನಾಗೇಂದ್ರ, ಮಂಜುಳಾ, ಎಲ್.ಆರ್. ಮಹದೇವಸ್ವಾಮಿ, ಟಿ.ಎಸ್. ಶ್ರೀವತ್ಸ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರು: ‘ಸಮಾಜದಲ್ಲಿ ನಿಜವಾದ ಬದಲಾವಣೆ ಆಗಬೇಕೆಂದರೆ ನೀತಿ–ನಿಯಮದಲ್ಲೇ ಬದಲಾವಣೆ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಜನಪ್ರತಿನಿಧಿ ಆಗಬೇಕು ಎಂದು ಬಯಸಿ ಚುನಾವಣಾ ಕಣಕ್ಕಿಳಿದಿದ್ದೇನೆ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಇಲ್ಲಿನ ನಿವೇದಿತಾ ನಗರದಲ್ಲಿ ಬಿಜೆಪಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಮೈಸೂರು ಭಾಗಕ್ಕೆ ಮೈಸೂರು ಅರಸರ ಕೊಡುಗೆ ಸಾಕಷ್ಟಿದೆ. ಸಮಾಜದ ಪರಿಸ್ಥಿತಿ ಸುಧಾರಿಸಲು ಮೀಸಲಾತಿಯನ್ನು ತಂದಿದ್ದರು. ಅವರು ಮಾಡಿದ್ದ ಕೆಲಸಗಳ ಪ್ರತಿಧ್ವನಿ ಈಗಿನ ಕೇಂದ್ರ ಸರ್ಕಾರದಲ್ಲಿ ಕೇಳಿಬರುತ್ತಿದೆ. ಸ್ವದೇಶಿ ಉತ್ಪನ್ನಗಳಿಗೆ ಬಹಳ ಪ್ರೋತ್ಸಾಹ ಕೊಡಲಾಗುತ್ತಿದೆ. ಮೇಕ್ ಇನ್ ಇಂಡಿಯಾಕ್ಕೂ ಬೆಂಬಲ ನೀಡಲಾಗುತ್ತಿದೆ’ ಎಂದರು.
‘ದೇಶದ ಪರಂಪರೆ ರಕ್ಷಣೆ ಹಾಗೂ ಭಾರತೀಯರ ಮೂಲ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಅದು ನನಗೆ ಸ್ಫೂರ್ತಿಯಾಗಿದ್ದರಿಂದ ರಾಜಕೀಯಕ್ಕೆ ಬಂದಿರುವೆ. ಒಂದು ವರ್ಷದ ಹಿಂದೆಯೇ ಈ ನಿರ್ಣಯವನ್ನು ಮಾಡಿದ್ದೆ’ ಎಂದು ಹೇಳಿದರು.
‘ದೇಶಕ್ಕೆ ಸುವರ್ಣ ಯುಗ ತರುವುದಕ್ಕಾಗಿ ಕೆಲಸ ನಡೆಯುತ್ತಿದೆ. ಜ್ವಲಂತ ಸಮಸ್ಯೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವೂ ಸಾಧ್ಯವಾಗಿದೆ. ಜನರೊಂದಿಗೆ ಸೇರಿ ಭಾರತಾಂಬೆಯ ತೇರು ಎಳೆಯಲು ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೌಟಿಲ್ಯ ಆರ್. ರಘು, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ, ಮಾಜಿ ಮೇಯರ್ ಶಿವಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.