ADVERTISEMENT

ಚರ್ಮಗಂಟು ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು: ಸಚಿವ ಕೆ.ವೆಂಕಟೇಶ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 13:29 IST
Last Updated 1 ಡಿಸೆಂಬರ್ 2023, 13:29 IST
   

ಮೈಸೂರು: ‘ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್‌ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಇಲಾಖೆಯ ಕಾರ್ಯಕ್ರಮಗಳ ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಧಿಕಾರಿಗಳು ಕಚೇರಿಗಳಿಗೆ ಸೀಮಿತವಾಗದೇ ಹಳ್ಳಿಗಳಿಗೆ ಭೇಟಿ ನೀಡಿ, ವಾಸ್ತವಾಂಶ ಅರಿತು ಕೆಲಸ ಮಾಡಬೇಕು. ಬರಗಾಲ ಬಂದಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಮೇವಿಗೆ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಚರ್ಮಗಂಟು ರೋಗ ನಿಯಂತ್ರಣಕ್ಕೆ ಲಸಿಕೆ ಅಗತ್ಯವಿದ್ದರೆ ಕೊಡಬೇಕು’ ಎಂದು ಸೂಚಿಸಿದರು.

ADVERTISEMENT

ಮಂಡ್ಯ ಹಾಗೂ ಮೈಸೂರಿನಲ್ಲಿ ಚರ್ಮಗಂಟು ರೋಗ ಪ್ರಕರಣಗಳು ಹೆಚ್ಚು ಕಂಡುಬಂದಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿದರು. ‘ಮೈಸೂರು ಜಿಲ್ಲೆಯಲ್ಲಿ 256 ಹಳ್ಳಿಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. 1,550 ರಾಸುಗಳಲ್ಲಿ ಬಂದಿತ್ತು. ಅವುಗಳಲ್ಲಿ 1,300 ಗುಣಮುಖವಾಗಿವೆ. ಲಸಿಕೆ ಹಾಕಿಸದ ಕರುಗಳಲ್ಲಿ ಈ ಕಾಯಿಲೆ ಕಂಡುಬರುತ್ತಿದೆ. ಕೆಲವೆಡೆ ಜಾತ್ರೆಗಳಿಗೆ ಬರುವ ರಾಸುಗಳಿಂದಲೂ ಹರಡುತ್ತಿದೆ’ ಎಂದು ಉಪ ನಿರ್ದೇಶಕ ಡಾ.ನಾಗರಾಜ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರೋಗ ಕಂಡುಬರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.

ಆಸ್ಪತ್ರೆ ಅಗತ್ಯವಿದೆಯೇ?:

‘ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಜಾನುವಾರು ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಪಶು ಆಸ್ಪತ್ರೆಗಳ ಸಂಖ್ಯೆ ಕಡಿಮೆ ಮಾಡಬಹುದು. ಕೋಳಿಗಳ ಕಾಳಜಿಯನ್ನು ನಾವು ಮಾಡುತ್ತಿಲ್ಲ. ಹೀಗಾಗಿ, ಜಾನುವಾರು ಸಂಖ್ಯೆ ಹೇಳುವಾಗ ಕೋಳಿಗಳ ಸಂಖ್ಯೆಯನ್ನು ಸೇರಿಸಬೇಡಿ. ಆಸ್ಪತ್ರೆಯ ಅಗತ್ಯವಿಲ್ಲದಿದ್ದರೆ ಅವುಗಳನ್ನು ಮುಚ್ಚುವಂತೆ ಶಿಫಾರಸು ಮಾಡಬೇಕು. ವ್ಯಾಪ್ತಿಯನ್ನು ಮರು ಹೊಂದಾಣಿಕೆ ಮಾಡಿಕೊಳ್ಳಿ. ಅಗತ್ಯ ಬಿದ್ದರೆ ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳನ್ನು ಬಳಸಬಹುದು’ ಎಂದು ಸಚಿವ ವೆಂಕಟೇಶ್‌ ಸೂಚಿಸಿದರು.

‘ಕಟ್ಟಡ ನಿರ್ವಹಣೆಗೆ ನೀಡಲಾಗುವ ಅನುದಾನ ಕೊನೆಯ ಕ್ಷಣದವರೆಗೂ ಚರ್ಚಾಗುವುದಿಲ್ಲ. ಹೀಗಾಗಬಾರದು. ತ್ವರಿತವಾಗಿ ಪೂರ್ಣಗೊಳಿಸಬೇಕು. ಔಷಧಿಗಳನ್ನು ಆಸ್ಪತ್ರೆಗಳಿಗೆ ನೇರವಾಗಿ ‌ಕಳುಹಿಸಬೇಕು’ ಎಂದು ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಂ ಸೂಚಿಸಿದರು.

‘ಮೇವಿನ ಬೀಜದ‌ ಮಿನಿ ಕಿಟ್‌ಗಳನ್ನು ಕೂಡ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ. ನೀರಾವರಿ ಹಾಗೂ ಜಮೀನು ಇರುವವರಿಗೆ ಮಾತ್ರ ಕೊಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಯಾರ‌್ಯಾರಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತದ ಜಾಲತಾಣದಲ್ಲಿ ಹಾಕಬೇಕು’ ಎಂದು ನಿರ್ದೇಶನ ನೀಡಿದರು.

‘ಭೂ ರಹಿತರಿಗೆ ಮಾರ್ಚ್– ಏಪ್ರಿಲ್‌ನಲ್ಲಿ ಮೇವಿನ ಕೊರತೆ ಉದ್ಭವವಾಗುವ ಸಾದ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಮೈಸೂರಿನಲ್ಲಿ ಭತ್ತವನ್ನು ಯಂತ್ರಗಳಲ್ಲಿ ಕೊಯ್ಲು ಮಾಡಿದರೆ ಮೇವು ಹಾಳಾಗುತ್ತದೆ. ಆದ್ದರಿಂದ ಕೈಯಲ್ಲಿ ಕೊಯ್ಲು ಅಥವಾ ಹುಲ್ಲು ಉಳಿಯುವಂತಹ ಯಂತ್ರ ಬಳಸುವಂತೆ ಜಿಲ್ಲಾಡಳಿತದ ಮೂಲಕ ಸೂಚಿಸಬೇಕಾಗಿದೆ. ಇದರಿಂದ ಮೇವಿನ ಕೊರತೆ ಎದುರಾಗುವುದನ್ನು ತಪ್ಪಿಸಬಹುದಾಗಿದೆ’ ಎಂದು ಮೈಸೂರು ಜಿಲ್ಲಾ ಉಪನಿರ್ದೇಶಕ ನಾಗರಾಜ್‌ ಸಲಹೆ ನೀಡಿದರು.

‘ಖಾಸಗಿಯವರು ನಡೆಸುವ ಗೋಶಾಲೆಗಳಿಗೆ ಮೇವು ಸಂಗ್ರಹಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಅವರು ಈಗಲೇ ಮೇವು ಖರೀದಿ ಮಾಡಿಟ್ಟುಕೊಳ್ಳುವಂತೆ ಸೂಚಿಸಬೇಕು’ ಎಂದು ಇಲಾಖೆಯ ಆಯುಕ್ತ ಮಂಜುನಾಥ ಪಾಳೇಗಾರ ನಿರ್ದೇಶನ ನೀಡಿದರು.

‘ಹೆಚ್ಚುವರಿ ಮೇವಿನ ಬೀಜದ ಮಿನಿಕಿಟ್‌ಗಳ ಅಗತ್ಯವಿದ್ದರೆ ಮಾಸಾಂತ್ಯದೊಳಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸಲ್ಮಾ ಸೂಚಿಸಿದರು.

‘ಈಗ ನಿಯಂತ್ರಿಸದಿದ್ದರೆ ಬೀದಿನಾಯಿಗಳ ಸಂಖ್ಯೆ ಬಹಳ ಜಾಸ್ತಿಯಾಗಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಪ್ರತಿ ಜಿಲ್ಲೆಯಲ್ಲೂ ಎಬಿಸಿ (ಪ್ರಾಣಿ ಸಂತಾನೋತ್ಪತ್ತಿ ಕೇಂದ್ರ) ಆರಂಭಿಸಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳನ್ನು ನಿರ್ವಹಿಸುವ ಕಂಪನಿಗೆ ತಿಂಗಳಿಗೆ ₹35ಸಾವಿರವನ್ನು ಔಷಧಿಗೆಂದೇ ನೀಡುತ್ತಿದ್ದೇವೆ. ಅದು ಸದ್ಬಳಕೆ ಆಗುತ್ತಿದೆಯೇ, ಅಷ್ಟು ಔಷಧಿಯನ್ನು ಖರೀದಿಸುತ್ತಿದ್ದಾರೆಯೇ, ಕೊಡುತ್ತಿದ್ದಾರೆಯೇ ಎಂಬ ವಿಚಕ್ಷಣೆಯನ್ನು ಅಧಿಕಾರಿಗಳು ಮಾಡಬೇಕು. ನೀಡಲಾದ ಹಣದಲ್ಲಿ ಬಳಕೆಯಾಗಿದ್ದೆಷ್ಟು ಎಂಬುದನ್ನು ಪರಿಶೀಲಿಸಬೇಕು. ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಪರಿಶೀಲಿಸಲು ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ಅಧಿಕಾರ ಕೊಡಬೇಕು’ ಎಂದು ಸಚಿವರು ಕಾರ್ಯದರ್ಶಿಗೆ ಸೂಚಿಸಿದರು.

‘ಮೇವು ಖರೀದಿ ಬೆಲೆಯನ್ನು 2012ರಲ್ಲಿ ಕೆ.ಜಿ.ಗೆ ₹6 ನಿಗದಿಪಡಿಸಿದ್ದು, ಇದರಲ್ಲಿ ಖರೀದಿ ಕಷ್ಟವಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಸ್ಪಂದಿಸಿದ ಸಚಿವರು, ‘ಈ ಬಗ್ಗೆ ಪರಿಶೀಲಿಸಿ ದರ ಹೆಚ್ಚಳ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಹೆಚ್ಚುವರಿ ನಿರ್ದೇಶಕ ಡಾ.ಶಿವರುದ್ರಪ್ಪ, ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ಇಲಾಖೆಯ ಮೈಸೂರು ವಿಭಾಗದ ಅಧಿಕಾರಿಗಳು, ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡಿದ್ದರು.

‘ಖಾಲಿ ಹುದ್ದೆ ಭರ್ತಿಗೆ ಕ್ರಮ’

‘ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಹಂತ ಹಂತವಾಗಿ ಭರ್ತಿ ಮಾಡಲಾಗುವುದು’ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದರು.

‘ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಮೇವನ್ನು ಹೊರ ರಾಜ್ಯಗಳಿಗೆ ಸಾಗಣೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಮೇವಿನ ಬಿತ್ತನೆ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.